ಶಿರಸಿ: ನಾನು ಪ್ರಚಾರಕ್ಕೆ ಹೋಗುವ ವಾತಾವರಣವನ್ನು ಬಿಜೆಪಿಯೇ ಇಟ್ಟಿಲ್ಲ. ನಾನು ಮುಂದೂ ಬಿಜೆಪಿ ಪರವಾಗಿ ಪ್ರಚಾರಕ್ಕೆ ತೆರಳುವುದಿಲ್ಲ ಎಂದು ಶಾಸಕ, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ್ ಹೇಳಿದರು.
ನಗರದಲ್ಲಿ ಶನಿವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಎಲ್ಲ ಪ್ರಚಾರ ಪೋಸ್ಟರ್‌ಗಳಲ್ಲಿ ನನ್ನ ಹೆಸರು, ಭಾವಚಿತ್ರವನ್ನು ಬಿಜೆಪಿ ಪ್ರಕಟಿಸಿಲ್ಲ. ನನ್ನ ಜತೆ ದಿನಕರ ಶೆಟ್ಟಿ ಅವರ ಹೆಸರನ್ನೂ ಹಾಕಿಲ್ಲ. ಬಿಜೆಪಿಯವರಿಗೇ ನಾನು ಬೇಡವಾಗಿದ್ದೇನೆ ಎಂದರೆ ನಾನಾಗಿಯೇ ಏಕೆ ಮುಂದಾಗಬೇಕು? ಬಿಜೆಪಿಯಲ್ಲಿ ನನ್ನ ಬಗ್ಗೆ ಅಪಪ್ರಚಾರ ಮಾಡಿದವರಿಗೆ ಈಗಾಗಲೇ ಸ್ಪಷ್ಟೀಕರಣ ನೀಡಿದ್ದೇನೆ. ನಾನೇ ಕೆಲವು ಪ್ರಶ್ನೆಗಳನ್ನು ಕೇಳಿದ್ದು, ಬಿಜೆಪಿಯವರಿಂದ ಉತ್ತರದ ನಿರೀಕ್ಷೆಯಲ್ಲಿದ್ದೇನೆ ಎಂದರು.ವಿವೇಕ ಹೆಬ್ಬಾರ್ ಕಾಂಗ್ರೆಸ್ ಸೇರಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಅವರಿಗೆ ಅವರದ್ದೇ ಆದ ಹಕ್ಕಿದೆ. ಪಕ್ಷ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದೆ. ಬಿಜೆಪಿಯಲ್ಲೂ ಹಲವು ಹಿರಿಯ ನಾಯಕರ ಪುತ್ರರೂ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ನಾನು ಕಾಂಗ್ರೆಸ್ ಸೇರ್ಪಡೆಯ ಬಗ್ಗೆ ಆರ್.ವಿ. ದೇಶಪಾಂಡೆ ವಿರೋಧ ವ್ಯಕ್ತಪಡಿಸಿದ್ದರು ಎಂಬ ಸುದ್ದಿಯೂ ಹರಿದಾಡುತ್ತಿದೆ. ರಾಜಕಾರಣದಲ್ಲಿ ಇಂತಹ ಸಣ್ಣ ಪುಟ್ಟ ಸಂಗತಿಗಳು ಇದ್ದೇ ಇರುತ್ತವೆ. ಇಂತಹವನ್ನೆಲ್ಲ ಯೋಚನೆ ಮಾಡಿಯೇ ನಾನು ರಾಜಕಾರಣದಲ್ಲಿದ್ದೇನೆ ಎಂದರು.ಕಟ್‌ಬಾಕಿ ಇರುವ ಕಂತುಗಳಿಗೆ ಬಡ್ಡಿ ವಿನಾಯಿತಿ: ಬರಗಾಲದ ಹಿನ್ನೆಲೆಯಲ್ಲಿ ಸಾಲ ಮರುಪಾವತಿಗೆ ಕಂತು ಮುಂದೂಡಿದರೆ ಅದರಿಂದ ರೈತರಿಗೇನೂ ಲಾಭವಾಗುವುದಿಲ್ಲ. ಕಟ್ ಬಾಕಿ ಇರುವ ಕಂತುಗಳಿಗೆ ಮಾ. ೩೦ರ ವರೆಗೂ ಬಡ್ಡಿ ವಿನಾಯಿತಿ ನೀಡಿದ್ದೇವೆ. ಕಂತು ಮುಂದೆ ಹಾಕಿದರೆ ರೈತನ ಮೇಲೆ ಇನ್ನಷ್ಟು ಭಾರ ಬೀಳುತ್ತದೆ ಎಂದರು. ಹುಬ್ಬಳ್ಳಿಯಲ್ಲಿ ನೇಹಾಳನ್ನು ಕೊಲೆ ಮಾಡಿದ ಆರೋಪಿ ಫಯಾಜ್‌ನನ್ನು ನೇಣಿಗೆ ಏರಿಸಬೇಕು. ಫಯಾಜ್ ಕೃತ್ಯವನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಯಾವುದೇ ರಾಜಕೀಯ ಪಕ್ಷವೂ ಒಪ್ಪಿಕೊಳ್ಳುವುದಿಲ್ಲ. ಇದೊಂದು ಹೇಯ ಕೃತ್ಯ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.