ಬಳ್ಳಾರಿ: ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಅನಿಲ್‌ಕುಮಾರ್ ಮೋಕಾ ಪುನರ್ ಆಯ್ಕೆಗೊಂಡಿದ್ದು, ಬಿ.ಶ್ರೀರಾಮುಲು ಬೆಂಬಲಿತ ಅಭ್ಯರ್ಥಿಗೆ ಪಕ್ಷ ಮನ್ನಣೆ ನೀಡಿ, ಎರಡನೇ ಅವಧಿಗೆ ಅಧಿಕಾರ ನೀಡಿದೆ.
ನಗರದ ಜಿಲ್ಲಾ ಬಿಜೆಪಿ ಕಚೇರಿ ಸಭಾಂಗಣದಲ್ಲಿ ಬುಧವಾರ ವಿಧಾನಪರಿಷತ್ ಮಾಜಿ ಸದಸ್ಯ ಅರುಣ್ ಶಹಾಪೂರ ಅನಿಲ್‌ಕುಮಾರ್ ಮೋಕಾ ಅವರನ್ನು ಎರಡನೇ ಅವಧಿಗೆ ಜಿಲ್ಲಾಧ್ಯಕ್ಷ ಎಂದು ಘೋಷಣೆ ಮಾಡಿದರು.ಬಿಜೆಪಿ ಅಭ್ಯರ್ಥಿ ನೇಮಕ ಸಂಬಂಧ ಬಳ್ಳಾರಿಯಲ್ಲಿ ಈಚೆಗೆ ಜರುಗಿದ ಸಭೆಯಲ್ಲಿ ಶ್ರೀರಾಮುಲು, ಜನಾರ್ದನ ರೆಡ್ಡಿ ಬೆಂಬಲಿಗರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿವೊಡ್ಡಿದ್ದರು. ಜನಾರ್ದನ ರೆಡ್ಡಿ ಬೆಂಬಲಿಗ ದಮ್ಮೂರು ಶೇಖರ್, ಗೋನಾಳ್ ರಾಜಶೇಖರಗೌಡ ಹೆಸರು ಸಭೆಯಲ್ಲಿ ಪ್ರಸ್ತಾಪವಾಗಿತ್ತು. ಏತನ್ಮಧ್ಯೆ ಅನಿಲ್‌ಕುಮಾರ ಮೋಕಾ ಅವರನ್ನು ಶ್ರೀರಾಮುಲು ಬೆಂಬಲಿಸಿದ್ದರು. ಅನಿಲ್‌ಕುಮಾರ್ ಮೋಕಾ ಸೇರಿದಂತೆ ಅನೇಕರ ಹೆಸರು ಸಭೆಯಲ್ಲಿ ಚರ್ಚೆಗೆ ಬಂದಿದ್ದವು. ಎಲ್ಲರ ಅಭಿಪ್ರಾಯಗಳನ್ನು ಸಂಗ್ರಹಿಸಿದ ಅರುಣ್ ಶಹಾಪುರ, ಅನಿಲ್‌ಕುಮಾರ್ ಮೋಕಾ, ಹಾಲಿ ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್, ಗೋನಾಳ್ ರಾಜಶೇಖರಗೌಡ ಹೆಸರುಗಳನ್ನು ಅಂತಿಮಗೊಳಿಸಿ ಪಕ್ಷದ ರಾಜ್ಯ ಸಮಿತಿಗೆ ಕಳಿಸಿಕೊಟ್ಟಿದ್ದರು. ಇದಾದ ಕೆಲ ದಿನಗಳಲ್ಲಿಯೇ ಜನಾರ್ದನ ರೆಡ್ಡಿ, ಶ್ರೀರಾಮುಲು ನಡುವಿನ ಮುನಿಸು ಸ್ಫೋಟಗೊಂಡು ರಾಜಕೀಯ ವಲಯದಲ್ಲಿ ಹೆಚ್ಚು ಚರ್ಚೆಗ್ರಾಸವಾಗಿತ್ತು. ಬಳ್ಳಾರಿ ಜಿಲ್ಲಾಧ್ಯಕ್ಷರಾಗಿ ಯಾರ ಬಣದವರು ಆಯ್ಕೆಯಾಗುತ್ತಾರೆ ಎಂಬ ಕುತೂಹಲವಿತ್ತು. ಕೊನೆಯಲ್ಲಿ ಶ್ರೀರಾಮುಲು ಬೆಂಬಲಿತ ಅನಿಲ್‌ಕುಮಾರ್ ಮೋಕಾ ಅವರನ್ನು ಪಕ್ಷ ನೇಮಕ ಮಾಡಿದೆ. ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ನಡುವಿನ ಸಂಘರ್ಷ ಹಿನ್ನೆಲೆಯಲ್ಲಿ ಶ್ರೀರಾಮುಲು ಅವರನ್ನು ಸಮಾಧಾನ ಪಡಿಸಲು ಪಕ್ಷ ಈ ನಿಲುವು ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.
ಪಕ್ಷದ ಕಚೇರಿಯಲ್ಲಿ ಜರುಗಿದ ಜಿಲ್ಲಾಧ್ಯಕ್ಷರ ಆಯ್ಕೆ ಘೋಷಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅರುಣ್ ಶಹಾಪುರ, ಬಳ್ಳಾರಿಯಲ್ಲಿ ಗುಂಪುಗಾರಿಕೆ ಇರುವುದರಿಂದ ಅನಿಲ್‌ಕುಮಾರ್ ಮೋಕಾ ನೇಮಕವಾಗಿಲ್ಲ. ಪಕ್ಷದಲ್ಲಿ ಯಾವುದೇ ಒಡಕಿಲ್ಲ. ಸಣ್ಣಪುಟ್ಟ ವ್ಯತ್ಯಾಸಗಳಾಗಿರಬಹುದು. ಎಲ್ಲವೂ ಸರಿಯಾಗಲಿದೆ ಎಂದು ಸ್ಪಷ್ಟಪಡಿಸಿದರು.ಸಮಾರಂಭದಲ್ಲಿದ್ದ ಶಾಸಕ ಜನಾರ್ದನ ರೆಡ್ಡಿ ಅವರು ನೂತನ ಅಧ್ಯಕ್ಷ ಅನಿಲ್ ಕುಮಾರ್ ಮೋಕಾ ಅವರಿಗೆ ಶುಭಹಾರೈಸಿದರು. ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ, ಡಾ.ಮಹಿಪಾಲ್, ಡಾ.ಸುಂದರ್, ಕೆ.ಎಸ್.ದಿವಾಕರ್ ಮತ್ತಿತರರಿದ್ದರು.
ಶ್ರೀರಾಮುಲು ಮುನಿಸು ತಣಿಸುವ ತಂತ್ರ ?: ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಅವರ ನಡುವಿನ ಮುನಿಸು ಸ್ಫೋಟಗೊಂಡಿರುವುದರಿಂದ ಶ್ರೀರಾಮುಲು ಅವರನ್ನು ಸಮಾಧಾನಿಸಲು ಬೆಂಬಲಿತ ಅನಿಲ್ ಕುಮಾರ್ ಮೋಕಾ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಹೇಳಲಾಗುತ್ತಿದೆ.ಮಂಗಳವಾರ ಬಳ್ಳಾರಿಗೆ ಬಂದಿರುವ ಬಿಜೆಪಿ ಜಿಲ್ಲಾಧ್ಯಕ್ಷ ಚುನಾವಣೆ ಅಧಿಕಾರಿ ಅರುಣ್ ಶಹಾಪುರ ಪಕ್ಷದ ಕೋರ್ ಕಮಿಟಿ ಸದಸ್ಯರ ಜೊತೆ ಚರ್ಚೆ ನಡೆಸಿಲ್ಲ. ಮೊದಲೇ ನಿರ್ಧರಿಸಿಕೊಂಡು ಬಂದು ಅನಿಲಕುಮಾರ್ ಮೋಕಾ ಅವರನ್ನು ಆಯ್ಕೆ ಮಾಡಿದ್ದಾರೆ. ಮೋಕಾ ಜಿಲ್ಲಾಧ್ಯಕ್ಷರಾಗಿ ಒಂದು ವರ್ಷವಾಗಿದೆ. ಉಳಿದ ಅವಧಿಯನ್ನು ಪೂರ್ಣಗೊಳಿಸಲು ಮುಂದುವರಿಸಲಾಗಿದೆ ಎಂದು ಪಕ್ಷದ ರಾಜ್ಯ ಸಮಿತಿ ಸಮಜಾಯಿಸಿ ನೀಡುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಗಮನಾರ್ಹ ಸಂಗತಿ ಎಂದರೆ ಜಿಲ್ಲಾಧ್ಯಕ್ಷರ ಘೋಷಣೆ ಸಮಾರಂಭದಲ್ಲಿ ಬಿ.ಶ್ರೀರಾಮುಲು ಬಳ್ಳಾರಿಯಲ್ಲಿ ಇದ್ದೂ ಹಾಜರಾಗಿಲ್ಲ. ಜನಾರ್ದನ ರೆಡ್ಡಿ ಉಪಸ್ಥಿತಿಯಲ್ಲಿ ಇಬ್ಬರು ಮುಖಾಮುಖಿಯಾಗುವುದು ಬೇಡ ಎಂಬ ಕಾರಣಕ್ಕೆ ಶ್ರೀರಾಮುಲು ದೂರ ಉಳಿದಿದ್ದಾರೆ ಎಂದು ಹೇಳಲಾಗುತ್ತಿದೆ. ಮಾಜಿ ಸಂಸದರಾದ ದೇವೇಂದ್ರಪ್ಪ, ಸಣ್ಣ ಪಕ್ಕೀರಪ್ಪ, ಮಾಜಿ ಶಾಸಕರಾದ ಸುರೇಶ್ ಬಾಬು, ಜಿ.ಸೋಮಶೇಖರ ರೆಡ್ಡಿ, ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್ ಹಾಜರಾಗಿರಲಿಲ್ಲ.