ಅಂಜನಾದ್ರಿ ಅಭಿವೃದ್ಧಿಗೆ ನಯಾಪೈಸೆ ಕೊಡದ ಬಿಜೆಪಿ: ಶಿವರಾಜ ತಂಗಡಗಿ

KannadaprabhaNewsNetwork |  
Published : May 01, 2024, 01:20 AM IST
30ಕೆಪಿಎಲ್24 ಗಂಗಾವತಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಸಿ.ಎಂ. ಸಿದ್ದರಾಮಯ್ಯ ಅವರಿಗೆ ಜಿಲ್ಲಾ  ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಬೃಹತ್ ಮಾಲೆಯನ್ನು ಹಾಕಿ, ಸನ್ಮಾನಿಸಿದರು. | Kannada Prabha

ಸಾರಾಂಶ

ಸದಾ ಅಂಜನಾದ್ರಿಯ ಜಪ ಮಾಡುವ ಬಿಜೆಪಿ ಅಂಜನಾದ್ರಿ ಅಭಿವೃದ್ಧಿಗೆ ನಯಾಪೈಸೆ ನೀಡಿಲ್ಲ.

ಕನ್ನಡಪ್ರಭ ವಾರ್ತೆ ಗಂಗಾವತಿ

ಸದಾ ಅಂಜನಾದ್ರಿಯ ಜಪ ಮಾಡುವ ಬಿಜೆಪಿ ಅಂಜನಾದ್ರಿ ಅಭಿವೃದ್ಧಿಗೆ ನಯಾಪೈಸೆ ನೀಡಿಲ್ಲ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಆರೋಪಿಸಿದರು.

ಕೆಪಿಸಿಸಿ ವತಿಯಿಂದ ಲೋಕಸಭಾ ಚುನಾವಣೆ ನಿಮಿತ್ತ ತಾಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬಜೆಟ್‌ನಲ್ಲಿ ನೂರು ಕೋಟಿ ರುಪಾಯಿ ಘೋಷಣೆ ಮಾಡಿದ ಬೊಮ್ಮಾಯಿ ಸರ್ಕಾರ ನಂತರ ಅದನ್ನು ಅನುಷ್ಠಾನ ಮಾಡಲೇ ಇಲ್ಲ. ದೇವಸ್ಥಾನಗಳ ಅಭಿವೃದ್ಧಿಯಲ್ಲಿ ಸುಳ್ಳು ಹೇಳುವುದು ಎಂದರೆ ಏನರ್ಥ ಎಂದು ಪ್ರಶ್ನೆ ಮಾಡಿದರು.

ಅಂದಿನ ಬಿಜೆಪಿ ಸರ್ಕಾರ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ₹100 ಕೋಟಿ ಅನುದಾನ ಘೋಷಿಸಿ, ಭೂಮಿ ಪೂಜೆ ಮಾಡಿದ್ದರು. ಆದರೆ ಒಂದೇ ಒಂದು ರುಪಾಯಿ ಅನುದಾನವನ್ನು ಇಟ್ಟಿಲ್ಲ. ಆದರೆ ಅಧಿಕಾರಕ್ಕೆ ಬಂದ ತಕ್ಷಣ ಮೊದಲ ಬಜೆಟ್‌ನಲ್ಲಿ ₹100 ಕೋಟಿ ಘೋಷಿಸಿ, ಅನುದಾನ ಮೀಸಲಿಟ್ಟವರು ಮುಖ್ಯಮಂತ್ರಿ ಸಿದ್ದರಾಮಯ್ಯನವರು. ನಿಜಕ್ಕೂ ರಾಮನಂತೆ ನುಡಿದಂತೆ ನಡೆಯುತ್ತಿರುವವರು ಸಿದ್ದರಾಮಯ್ಯ ಅವರು. ಬಿಜೆಪಿಯವರು ಕೇವಲ ಚುನಾವಣೆಗಾಗಿ ರಾಮ, ಆಂಜನೇಯನ ಹೆಸರು ಹೇಳುತ್ತಿದ್ದಾರೆ. ನಾನು‌ ಕೂಡ ಆಂಜನೇಯ ಭಕ್ತನೇ. ಪ್ರತಿ ವರ್ಷ ಮಾಲೆ ಧರಿಸುತ್ತೇನೆ ಎಂದು ಛೇಡಿಸಿದರು.

ಸೋಲಿನ ಹತಾಶೆಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಸುಳ್ಳು ಹೇಳುವುದನ್ನು ಹೆಚ್ಚು ಮಾಡಿದ್ದಾರೆ. ಕಳೆದ ಹತ್ತು ವರ್ಷಗಳ ಹಿಂದೆ ಅಧಿಕಾರಕ್ಕೆ ಬರುವ ಮುನ್ನ ವಿದೇಶದಲ್ಲಿನ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ ಹದಿನೈದು ಲಕ್ಷ ಹಣ ಹಾಕುವುದಾಗಿ ಹೇಳಿದ ಮಹನೀಯರು ಈಗ ಆ ಬಗ್ಗೆ ಮಾತನಾಡುತ್ತಿಲ್ಲ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಮೊದಲ ಅವಧಿಗೆ ಮುಖ್ಯಮಂತ್ರಿಯಾಗಿದ್ದ ವೇಳೆ ನಮ್ಮ ಸರ್ಕಾರ ಬಡವರಿಗೆ ಉಚಿತವಾಗಿ ಏಳು ಕೆಜಿ ಅಕ್ಕಿ ನೀಡುತ್ತಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಅದನ್ನು ಐದು ಕೆಜಿಗೆ ಇಳಿಸಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದರೆ ಉಚಿತವಾಗಿ ಅಕ್ಕಿ ಕೊಡುವುದನ್ನು ಎರಡು ಕೆಜಿಗೆ ಇಳಿಸುತ್ತಿದ್ದರು ಎಂದು ಲೇವಡಿ ಮಾಡಿದರು.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''