
ಕನ್ನಡಪ್ರಭ ವಾರ್ತೆ, ತುಮಕೂರು, ಪಾವಗಡ ಕಾಂಗ್ರೆಸ್ ಸರ್ಕಾರದ ಮೇಲೆ ಸುಳ್ಳು ಅಪವಾದಗಳನ್ನು ಮಾಡುವ ಬಿಜೆಪಿಯವರು ಕರ್ನಾಟಕದಲ್ಲಿ ಇಂತಹ ಜನೋಪಯೋಗಿ ನೀರಾವರಿ ಯೋಜನೆಯನ್ನು ಜಾರಿಗೆ ತಂದಿದ್ದಾರೆಯೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಕರ್ನಾಟಕದಿಂದ ಪ್ರತಿ ವರ್ಷ 4.50 ಲಕ್ಷ ಕೋಟಿ ತೆರಿಗೆ ಕೇಂದ್ರ ಸರ್ಕಾರಕ್ಕೆ ತಲುಪುತ್ತಿದ್ದು, ಅದರಲ್ಲಿ ಕೇವಲ 65 ಸಾವಿರ ಕೋಟಿ ರು. ಮಾತ್ರ ರಾಜ್ಯಕ್ಕೆ ಮರಳಿ ಬರುತ್ತಿದೆ. ಇದನ್ನು ಯಾವುದೇ ಜೆಡಿಎಸ್ ಹಾಗೂ ಬಿಜೆಪಿ ಸಂಸದರು, ಕೇಂದ್ರವನ್ನು ಪ್ರಶ್ನಿಸುತ್ತಿಲ್ಲ. ಕಳೆದ ವಿಧಾನಸಭೆ ಚುನಾಣೆಯಲ್ಲಿ 136 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದ ಪರಿಣಾಮ, ಜೆಡಿಎಸ್ ನವರು ಬಿಜೆಪಿಯೊಂದಿಗೆ ಮೈತ್ರಿ ಹೊಂದಿ ಲೋಕಸಭಾ ಚುನಾವಣೆಯನ್ನು ಎದುರಿಸುವ ದುಸ್ಥಿತಿ ಬಂತು ಎಂದರು. ಲೋಕಸಭಾ ಚುನಾವಣೆಯ ನಂತರ ಗ್ಯಾರಂಟಿಗಳನ್ನು ಸರ್ಕಾರ ನಿಲ್ಲಿಸುತ್ತದೆ ಎಂದು ಪ್ರತಿಪಕ್ಷಗಳು ಟೀಕಿಸಿದ್ದರು. ಅಪಪ್ರಚಾರ, ತಪ್ಪು ಮಾಹಿತಿಯನ್ನು ಜನರಿಗೆ ನೀಡಬಾರದು ಎಂದು ಈಗಾಗಲೇ ಬಹಿರಂಗ ಚರ್ಚೆ ಬರಲು ಆಹ್ವಾನ ನೀಡಿದ್ದೇನೆ ಎಂದರು.
ಕರ್ನಾಟಕಕ್ಕೆ 14 ನೇ ಹಣಕಾಸು ಆಯೋಗದಲ್ಲಿ 4.7% ಕೊಡುತ್ತಿದ್ದ ಅನುದಾನದಲ್ಲಿ 15 ನೇ ಹಣಕಾಸಿನ ಆಯೋಗದಲ್ಲಿ 3.6% ಗೆ ಇಳಿಸಿದರು. 1.15% ಅನುದಾನ ಕಡಿಮೆಯಾಗಿದೆ. 68000 ಕೋಟಿ ರು.ಗಳ ನಷ್ಟವಾಗಿದೆ. ರಾಜ್ಯದ ಅಭಿವೃದ್ಧಿ ಬಗ್ಗೆ ಪ್ರತಿಪಕ್ಷಗಳಿಗೆ ಗೌರವ ಇದ್ದಿದ್ದರೆ ತಪ್ಪು ಮಾಹಿತಿ ನೀಡುವ ಪ್ರಯತ್ನ ಮಾಡುತ್ತಿರಲಿಲ್ಲ ಎಂದರು. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಅನುದಾನವಿಲ್ಲ ಎನ್ನುತ್ತಾರೆ. 2529 ಕೋಟಿ ಕುಡಿಯುವ ನೀರಿನ ಯೋಜನೆ, 716 ಕೋಟಿ ರೂ.ಗಳ ಅಭಿವೃದ್ಧಿಗೆ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿದೆ. ಇದು ಅಭಿವೃದ್ಧಿಯಲ್ಲವೇ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.ನಮ್ಮ ಸರ್ಕಾರ ಒಂದು ಧರ್ಮದ ಪರವಾಗಿ ಮಾತನಾಡಿಲ್ಲ. ಅಕ್ಕಿ, ಕರೆಂಟ್, ಶಕ್ತಿ, ಯೋಜನೆಯನ್ನು ಬಿಜೆಪಿಯ ಬಡವರಿಗೂ ನೀಡಲಾಗಿದೆ. ಒಂದು ಪಕ್ಷಕ್ಕೆ, ಒಂದು ಜಾತಿ, ಧರ್ಮಕ್ಕೆ ನೀಡಿಲ್ಲ. ರಾಜ್ಯ ಸರ್ವತೋಮುಖ ಅಭಿವೃದ್ಧಿಯಾಗಬೇಕು. ಹಿಂದುಳಿದ ತಾಲೂಕುಗಳು ಮುಂದುವರೆಯಲು ಈ ಎಲ್ಲಾ ಕಾರ್ಯತಕ್ರಮಗಳಿಂದ ಸಾಧ್ಯವಾಗಿದೆ. ಕರ್ನಾಟಕದ 240 ತಾಲ್ಲೂಕು, 224 ವಿಧಾನಸಭಾ ಕ್ಷೇತ್ರಗಳಿಗೆ ಎಲ್ಲಾ ಕಾರ್ಯಕ್ರಮಗಳನ್ನು ಒದಗಿಸಲಾಗುತ್ತಿದೆ ಎಂದರು.
2028 ರಲ್ಲಿಯೂ ನಾವೇ ಅಧಿಕಾರಕ್ಕೆ ಬರುವುದಾಗಿ ಹೇಳಿದ ಅವರು, ಬಿಜೆಪಿ ತಿಪ್ಪರಲಾಗ ಹಾಕಿದರೂ ಅಧಿಕಾರಕ್ಕೆ ಬರುವುದಿಲ್ಲ. ಚರ್ಚೆಗೆ ಕರೆದರೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಚುನಾವಣೆ ಮಾಡುವಂತೆ ಹೇಳುತ್ತಾರೆ. ಐದು ವರ್ಷಗಳ ಕಾಲ ನಮ್ಮ ಸರ್ಕಾರ ಅಧಿಕಾರದಲ್ಲಿ ಇರಲಿದೆ. ಚುನಾವಣೆಗೆ ನಾವು ಹೆದರುವುದಿಲ್ಲ. ವಿಜಯೇಂದ್ರ ಕುರ್ಚಿ ಅಲ್ಲಾಡುತ್ತಿದ್ದು, 2028 ರ ವರೆಗೆ ಅಧಿಕಾರದಲ್ಲಿ ಇರುತ್ತಾರೋ ಇಲ್ಲವೋ ತಿಳಿದಿಲ್ಲ ಎಂದರು.ನಾಳೆ ಚುನಾವಣೆಯಾದರೂ ನಾವು ಗೆದ್ದೆ ಗೆಲ್ಲುತ್ತೇವೆ. ಆದರೆ ಜನ ನಮಗೆ 2028 ರ ಮೇ ವರೆಗೆ ಅಧಿಕಾರ ನೀಡಿದ್ದಾರೆ. ಅದರಂತೆ ಅಲ್ಲಿಯವರೆಗೆ ಅಧಿಕಾರದಲ್ಲಿ ಮುಂದುವರೆಯುತ್ತೇವೆ. 2028 ರ ಚುನಾವಣೆಯಲ್ಲಿ ಮತ್ತೆ ಬಿಜೆಪಿ, ಜೆಡಿಎಸ್ ಅನ್ನು ಸೋಲಿಸಿ ಪುನಃ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದರು.