
ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಜೀತ ವಿಮುಕ್ತ ಕುಟುಂಬದವರಿಗೆ ಮಹತ್ವದ 13 ವಿವಿಧ ಗುರುತಿನ ಚೀಟಿ ವಿತರಣೆ ಹಾಗೂ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.
ಜೀತ ಪದ್ಧತಿ ಕಾನೂನು ಬಾಹಿರ ಎಂದು ತಿಳಿದಿದ್ದರೂ ಸಹ ಮುಗ್ದ ಜನರು ಜೀತ ಪದ್ಧತಿಗೆ ಬಲಿಯಾಗುತ್ತಾರೆ. ಜೀತ ಪದ್ಧತಿಯನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು.ಜೀತ ಪದ್ಧತಿ ಕಾನೂನು ಬಾಹಿರ ಎಂದು ತಿಳಿದಿದ್ದರೂ ಕೆಲವರು ಬಡತನದಿಂದ ಜೀತದಾಳಾಗಿ ಕೆಲಸ ಮಾಡುತ್ತಾರೆ. ಜಿಲ್ಲೆಯಲ್ಲಿ ಒಟ್ಟು 86 ಜನರಲ್ಲಿ 04 ಜನ ಹೆಣ್ಣುಮಕ್ಕಳು, 82 ಜನ ಗಂಡಸರನ್ನು ಜೀತ ವಿಮುಕ್ತರನ್ನಾಗಿ ಮಾಡಿ ಸಮಾಜದ ಮುಖ್ಯವಾಹಿನಿಗೆ ತರಲು ಜೀತ ವಿಮುಕ್ತರು ಹಾಗೂ ಅವರ ಅವಲಂಬಿತರ ಬಳಿ ಸರ್ಕಾರಿ ದಾಖಲೆಗಳು ಇರಲಿಲ್ಲ ಎಂದರು.
ಶಾಸಕ ಕೆ.ಎಂ.ಉದಯ್ ಮಾತನಾಡಿ, ಜೀತ ವಿಮುಕ್ತರಿಗೆ ಆಧಾರ್ ಕಾರ್ಡ್, ಜನನ- ಮರಣ ಪ್ರಮಾಣ ಪತ್ರ, ಜಾತಿ- ಆದಾಯ ಪ್ರಮಾಣ ಪತ್ರ, ಪಡಿತರ ಗುರುತಿನ ಚೀಟಿ, ಚುನಾವಣಾ ಗುರುತಿನ ಚೀಟಿ, ವೈಯಕ್ತಿಕ ಬ್ಯಾಂಕ್ ಉಳಿತಾಯ ಖಾತೆ, ವಿವಿಧ ಯೋಜನೆಗಳಡಿ ಪಿಂಚಣಿ, ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್, ಆರೋಗ್ಯ ವಿಮೆಗಳು (ಪಿಎಂಜೆಜೆಬಿವೈ, ಪಿಎಂಎಸ್ ಬಿವೈ) , ಇ- ಶ್ರಮ್ ಗುರುತಿನ ಕಾರ್ಡ್, ಯುಡಿಐಡಿ ಗುರುತಿನ ಚೀಟಿ, ಭಾಗ್ಯಲಕ್ಷ್ಮೀ ಯೋಜನೆ, ಮನರೇಗಾ ಉದ್ಯೋಗ ಚೀಟಿ ನೀಡಲಾಗುತ್ತಿದೆ. ಇದರಿಂದ ಅವರು ಸ್ವಾವಲಂಬಿ ಜೀವನ ನಡೆಸಬಹುದು ಎಂದರು.
ಸಂಜೀವಿನಿಯಡಿ ದೊರೆಯುವ ಅರ್ಹ ಸೌಲಭ್ಯಗಳನ್ನು ಪಡೆದು ಸ್ವಾವಲಂಬಿ ಜೀವನ ನಡೆಸಲು ಅನುವಾಗುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆರ್ ಸೇಟಿ ವತಿಯಿಂದ ಜೀತವಿಮುಕ್ತರ ಕುಟುಂಬದ ಅರ್ಹ ಯುವಕ, ಯುವತಿಯರಿಗೆ ಇತರೆ ವೃತ್ತಿಕೌಶಲ್ಯ ತರಬೇತಿ ನೀಡಲು ಕ್ರಮವಹಿಸಲಾಗುತ್ತಿದೆ ಎಂದು ಹೇಳಿದರು.
ಆರೋಗ್ಯ ಶಿಬಿರದಲ್ಲಿ ಮಿಮ್ಸ್ ನ ಸ್ತ್ರೀ ರೋಗ ತಜ್ಞರಾದ ಡಾ.ಮನೋಹರ್ , ಡಾ.ಶಿಲ್ಪಶ್ರೀ, ವೈದ್ಯರಾದ ರವಿಶಂಕರ್ ಹಾಗೂ ತಾಲೂಕು ಆಸ್ಪತ್ರೆ ಸಿಬ್ಬಂದಿ ಜೀತ ಮುಕ್ತ ಕುಟುಂಬಗಳಿಗೆ ಆರೋಗ್ಯ ತಪಾಸಣೆ ನಡೆಸಿ, ಸಲಹೆ, ಸೂಚನೆಗಳನ್ನು ನೀಡಿದರು.