ಶಿರಹಟ್ಟಿಯಲ್ಲಿ ರೈತವಿರೋಧಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ

KannadaprabhaNewsNetwork |  
Published : Nov 18, 2025, 01:15 AM IST
ಪೋಟೊ-೧೭ ಎಸ್.ಎಚ್.ಟಿ. ೧ಕೆ-ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ ರೂ. ೨೪೦೦ ಬೆಂಬಲ ಬೆಲೆ ನಿಗದಿ ಮಾಡಿದೆ. ರಾಜ್ಯ ಸರ್ಕಾರ ತುರ್ತು ಖರೀದಿ ಕೇಂದ್ರ ತೆರೆದು ರೈತರ ನೆರವಿಗೆ ಬರಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ರೈತರ, ಕೃಷಿ ಕೂಲಿ ಕಾರ್ಮಿಕರ ಶೋಷಣೆ ನಿರಂತರವಾಗಿ ನಡೆದಿದೆ. ಕಾಂಗ್ರೆಸ್ ಸರ್ಕಾರದಿಂದ ರೈತರಿಗೆ ಯಾವುದೇ ರೀತಿಯಿಂದ ಸ್ಪಂದನೆ ದೊರಕುತ್ತಿಲ್ಲ.

ಶಿರಹಟ್ಟಿ: ರೈತ ವಿರೋಧಿ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ವತಿಯಿಂದ ಎತ್ತು ಚಕ್ಕಡಿಯೊಂದಿಗೆ ರೈತರು, ಬಿಜೆಪಿ ಕಾರ್ಯಕರ್ತರು, ಶಾಸಕರ ನೇತೃತ್ವದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.

ನೆಹರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಟೈರ್‌ಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದು ಎರಡೂವರೆ ವರ್ಷ ಮುಗಿದರೂ ಯಾವುದೇ ಅಭಿವೃದ್ಧಿಯಾಗಿಲ್ಲ. ಎಲ್ಲ ಹಂತದಲ್ಲೂ ರೈತರಿಗೆ ನಿರಂತರ ಅನ್ಯಾಯ ಮಾಡುತ್ತಿದೆ. ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ ₹೨೪೦೦ ಬೆಂಬಲ ಬೆಲೆ ನಿಗದಿ ಮಾಡಿದೆ. ರಾಜ್ಯದಲ್ಲಿ ಖರೀದಿ ಕೇಂದ್ರ ತೆರೆಯದೇ ಕೇಂದ್ರ ಸರ್ಕಾರದ ಮೇಲೆ ಸಿಎಂ ಸಿದ್ದರಾಮಯ್ಯ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಸರ್ಕಾರ ತಂದಿದ್ದ ರೈತಪರ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಕೈಬಿಟ್ಟಿದ್ದಲ್ಲದೆ ಪ್ರತಿ ಹಂತದಲ್ಲೂ ರೈತರ ವಿರುದ್ಧ ನಡೆದುಕೊಳ್ಳುತ್ತಿದೆ. ರೈತರ, ಕೃಷಿ ಕೂಲಿ ಕಾರ್ಮಿಕರ ಶೋಷಣೆ ನಿರಂತರವಾಗಿ ನಡೆದಿದೆ. ಕಾಂಗ್ರೆಸ್ ಸರ್ಕಾರದಿಂದ ರೈತರಿಗೆ ಯಾವುದೇ ರೀತಿಯಿಂದ ಸ್ಪಂದನೆ ದೊರಕುತ್ತಿಲ್ಲ. ಬಹುಮತ ಸಿಕ್ಕಿರುವ ಗುಂಗಿನಲ್ಲಿ ಮತ್ತು ಬಿಟ್ಟಿ ಭಾಗ್ಯಗಳ ಜಾರಿಯಿಂದ ಸರ್ಕಾರ ಮೈಮರೆತಿದೆ ಎಂದು ದೂರಿದರು.ಮೆಕ್ಕೆಜೋಳ ಖರೀದಿ ಕೇಂದ್ರ: ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನಿಗದಿ ಮಾಡಿದೆ. ರಾಜ್ಯ ಸರ್ಕಾರ ಪ್ರೋತ್ಸಾಹದನ ಹಣ ನೀಡುವ ಜತೆಗೆ ತುರ್ತು ಖರೀದಿ ಕೇಂದ್ರ ತೆರೆದು ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಈಗಾಗಲೇ ತಡವಾಗಿ ಹೆಸರು ಖರೀದಿ ಕೇಂದ್ರ ಆರಂಭಿಸಿದ್ದರಿಂದ ರೈತರಿಗೆ ಯಾವುದೇ ಪ್ರಯೋಜನವಾಗದೇ ಮಧ್ಯವರ್ತಿಗಳ ದಲ್ಲಾಳಿಗಳಿಗೆ ಲಾಭ ದೊರೆತಿದೆ ಎಂದು ಆರೋಪಿಸಿದರು.ತಾಲೂಕು ಬಿಜೆಪಿ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ನಾಗರಾಜ ಲಕ್ಕುಂಡಿ, ತಿಮ್ಮರಡ್ಡಿ ಮರಡ್ಡಿ, ಫಕ್ಕಿರೇಶ ರಟ್ಟಿಹಳ್ಳಿ ಮಾತನಾಡಿ, ಮೆಕ್ಕೆಜೋಳ ಖರೀದಿಗೆ ಖರೀದಿ ಕೇಂದ್ರ ತೆರೆಯದೇ ರೈತರ ಹೆಸರಿನಲ್ಲಿ ದರೋಡೆ ಮಾಡುತ್ತಿದೆ. ಆರೋಪ ಪ್ರತ್ಯಾರೋಪದಲ್ಲಿಯೇ ದಿನ ದೂಡುತ್ತಿದೆ ಎಂದರು.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಸರ್ಕಾರವಿದ್ದಾಗ ರೈತರ ನೆರವಿಗೆ ಧಾವಿಸಿತ್ತು ಎಂದ ಅವರು, ಕಾಂಗ್ರೆಸ್ ಸರ್ಕಾರ ರೈತ ವಿರೋಧಿಯಾಗಿದ್ದು, ರೈತರ ನೆಮ್ಮದಿ ಕೆಡಿಸಿದೆ. ಮೆಕ್ಕೆಜೋಳವನ್ನು ತಕ್ಷಣದಿಂದಲೇ ಬೆಂಬಲ ಬೆಲೆಯಲ್ಲಿ ಖರಿದಿಗೆ ಮುಂದಾಗದೇ ಹೋದರೆ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬ ನೀತಿ ಅನುಸರಿಸಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.ಉಪವಿಭಾಗಾಧಿಕಾರಿ ಗಂಗಪ್ಪ ಎಂ. ಮನವಿ ಸ್ವೀಕರಿಸಿ ಮಾತನಾಡಿ, ಈಗಾಗಲೇ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವಂತೆ ರೈತರಿಂದ ಪ್ರತಿಭಟನೆ ನಡೆದು ಮನವಿ ಸಲ್ಲಿಸಲಾಗಿದೆ. ಈ ಮನವಿಗಳನ್ನು ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಕಳುಹಿಸಿ ಕೊಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರಲಾಗಿದೆ. ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದರು. ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ಇದ್ದರು.ಮುಖಂಡರಾದ ಬಸವರಾಜ ಪಲ್ಲೇದ, ಬಸವರಾಜ ಇಟಗಿ, ನಿಂಗಪ್ಪ ಬನ್ನಿ, ಗೂಳಪ್ಪ ಕರಿಗಾರ, ಮೋಹನ್ ಗುತ್ತೆಮ್ಮನವರ, ವೀರಣ್ಣ ಅಂಗಡಿ ಮಾತನಾಡಿದರು. ಜಾನು ಲಮಾಣಿ, ಸಂದೀಪ ಕಪ್ಪತ್ತನವರ, ವಿಶ್ವನಾಥ ಪಾಟೀಲ, ಮಹೇಶ ಬಡ್ನಿ, ಬಸವರಾಜ ಪೂಜಾರ, ಶಶಿ ಪೂಜಾರ, ನಂದಾ ಪಲ್ಲೇದ, ಪರಶುರಾಮ ಡೊಂಕಬಳ್ಳಿ, ಸಂತೋಷ ತೋಡೇಕಾರ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ