ದಾವಣಗೆರೆಯಲ್ಲಿ ಗ್ಯಾರಂಟಿ, ಬೆಲೆ ಏರಿಕೆ ವಿರುದ್ಧ ಬಿಜೆಪಿ ಹೋರಾಟ

KannadaprabhaNewsNetwork | Published : Apr 6, 2025 1:49 AM

ಸಾರಾಂಶ

ಗ್ಯಾರಂಟಿ ಯೋಜನೆಗಳಿಗಾಗಿ ಹಣ ಹೊಂದಿರುವ ಜನ ಸಾಮಾನ್ಯರು, ಬಡವರು, ಮಧ್ಯಮ ವರ್ಗ ಜನರ ನಿತ್ಯ ಬಳಸುವ ವಸ್ತುಗಳಿಗೆ ಬೆಲೆ ಏರಿಕೆ ಭಾಗ್ಯ ಕಲ್ಪಿಸಲಾಗಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಜಿಲ್ಲಾ ಘಟಕದಿಂದ ನಗರ, ಜಿಲ್ಲಾದ್ಯಂತ ಶನಿವಾರ ಪ್ರತಿಭಟಿಸಲಾಯಿತು.

ರಾಜ್ಯ ಕೈ ಸರ್ಕಾರ ವಿರುದ್ಧ ತೀವ್ರ ಆಕ್ರೋಶ । ನಿತ್ಯದ ಬಳಕೆ ವಸ್ತುಗಳ ಬೆಲೆ ಹೆಚ್ಚಳ, ಮುಸ್ಲಿಂ ತುಷ್ಟೀಕರಣ ಆರೋಪ

ಕನ್ನಡಪ್ರಭ ವಾರ್ತೆ ದಾವಣಗೆರೆ

ಗ್ಯಾರಂಟಿ ಯೋಜನೆಗಳಿಗಾಗಿ ಹಣ ಹೊಂದಿರುವ ಜನ ಸಾಮಾನ್ಯರು, ಬಡವರು, ಮಧ್ಯಮ ವರ್ಗ ಜನರ ನಿತ್ಯ ಬಳಸುವ ವಸ್ತುಗಳಿಗೆ ಬೆಲೆ ಏರಿಕೆ ಭಾಗ್ಯ ಕಲ್ಪಿಸಲಾಗಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಜಿಲ್ಲಾ ಘಟಕದಿಂದ ನಗರ, ಜಿಲ್ಲಾದ್ಯಂತ ಶನಿವಾರ ಪ್ರತಿಭಟಿಸಲಾಯಿತು.

ನಗರದ ಕೆಬಿ ಬಡಾವಣೆಯ ಬಿಜೆಪಿ ಜಿಲ್ಲಾ ಕಾರ್ಯಾಲಯದಿಂದ ಹಳೆ ಪಿಬಿ ರಸ್ತೆ ಮಾರ್ಗವಾಗಿ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಸಿದ್ದರಾಮಯ್ಯ ಸರ್ಕಾರದ ಜನ ವಿರೋಧಿಯಾದ ಬೆಲೆ ಏರಿಕೆ ನೀಡಿ ಖಂಡಿಸಿ ಘೋಷಣೆಗಳನ್ನು ಕೂಗುತ್ತ ತೆರಳಿ, ನಂತರ ಉಪ ವಿಭಾಗಾಧಿಕಾರಿ ಕಚೇರಿ ಮೂಲಕ ರಾಜ್ಯ ಸರ್ಕಾರ, ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಇದೇ ವೇಳೆ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಕಾಂಗ್ರೆಸ್ ಸರ್ಕಾರವು ತನ್ನ 5 ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಜನ ಸಾಮಾನ್ಯರು, ಬಡವರು, ಮಧ್ಯಮ ವರ್ಗದವರ ಜೇಬಿಗೆ ಕೈಹಾಕಿದೆ. ನಿತ್ಯದ ವಸ್ತುಗಳ ಬೆಲೆ ಏರಿಸುವ ಮೂಲಕ ತನ್ನ ಬಿಟ್ಟಿ ಭಾಗ್ಯಗಳಿಗೆ ಜನರ ಸುಲಿಗೆಗೆ ಮುಂದಾಗಿದೆ ಎಂದರು.

ತನ್ನ ಹಳೆಯ ಚಾಳಿಯಂತೆ ಕಾಂಗ್ರೆಸ್ ಪಕ್ಷವು ಮುಸ್ಲಿಮರ ತುಷ್ಟೀಕರಣಕ್ಕೆ ಮುಂದಾಗಿದೆ. ಸರ್ಕಾರಿ ಕಾಮಗಾರಿಗಳಲ್ಲಿ ಶೇ.4ರಷ್ಟು ಮೀಸಲಾತಿಯನ್ನು ಮುಸ್ಲಿಮರಿಗೆ ನೀಡಲಾಗಿದೆ. ಶಾದಿ ಭಾಗ್ಯಕ್ಕೆ ಹಣ ನೀಡುವ ನಿರ್ಧಾರ ಕೈಗೊಂಡಿರುವುದು, ಮುಸ್ಲಿಂ ಹೆಣ್ಣುಮಕ್ಕಳಿಗೆ ಮಾತ್ರ ಆತ್ಮರಕ್ಷಣೆಗಾಗಿ ವಿಶೇಷ ಅನುದಾನ ನೀಡುವುದು ತುಷ್ಟೀಕರಣದ ಪರಮಾವಧಿ ಎಂದು ಕಿಡಿಕಾರಿದರು.

ತಕ್ಷಣ‍ವೇ ಬೆಲೆ ಏರಿಕೆ ನಿರ್ಧಾರಗಳನ್ನು ಕೈಬಿಡಬೇಕು. ಈ ಬಗ್ಗೆ ಉದಾಸೀನ ಮಾಡಿದರೆ ಗ್ರಾಮ ಮಟ್ಟದಿಂದ ರಾಜ್ಯಮಟ್ಟದವರೆಗೂ ವಿವಿಧ ಹಂತದ ಹೋರಾಟ ನಡೆಸಬೇಕಾದೀತು ಎಂದು ಎಚ್ಚರಿಸಿದರು.

ವಿಪ ಮಾಜಿ ಮುಖ್ಯ ಸಚೇತಕ, ಪಕ್ಷದ ಹಿರಿಯ ಮುಖಂಡ ಡಾ.ಎ.ಎಚ್.ಶಿವಯೋಗಿಸ್ವಾಮಿ ಮಾತನಾಡಿ, ಜನ ಸಾಮಾನ್ಯರ ಬದುಕಿನ ಮೇಲೆ ಬರೆ ಎಳೆಯುತ್ತಿರುವ ಕಾಂಗ್ರೆಸ್ ಸರ್ಕಾರರೈತರು ತಮ್ಮ ಜಮೀನುಗಳಿಗೆ ಟ್ರಾನ್ಸಫಾರ್ಮರ್ ಅಳವಡಿಸಿಕೊಳ್ಳುವ ವೆಚ್ಚವನ್ನು 2 ಲಕ್ಷ ರು.ಗೆ ಹೆಚ್ಚಿಸಿದೆ. ತಕ್ಷಣವೇ ಸರ್ಕಾರವು ಬೆಲೆ ಏರಿಕೆಯನ್ನು ಇಳಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಪಕ್ಷದ ಮುಖಂಡರಾದ ಚಂದ್ರಶೇಖರ ಪೂಜಾರ, ಪಿ.ಸಿ.ಶ್ರೀನಿವಾಸ ಭಟ್‌, ಮಾಜಿ ಉಪ ಮೇಯರ್‌ ಪಿ.ಎಸ್.ಜಯಣ್ಣ, ಪಾಲಿಕೆ ವಿಪಕ್ಷದ ಮಾಜಿ ನಾಯಕ ಕೆ.ಪ್ರಸನ್ನಕುಮಾರ, ಆರ್.ಎಲ್.ಶಿವಪ್ರಕಾಶ, ಮಂಜಾನಾಯ್ಕ, ರಮೇಶ ನಾಯ್ಕ, ತಾರೇಶ ನಾಯ್ಕ, ಅನಿಲ ನಾಯ್ಕ, ಎಚ್.ಎನ್.ಶಿವಕುಮಾರ, ಎಚ್.ಸಿ.ಜಯಮ್ಮ, ಗೌರಮ್ಮ ಪಾಟೀಲ, ಸವಿತಾ ರವಿಕುಮಾರ, ಅನಿಲಕುಮಾರ ನಾಯ್ಕ, ಅಣಜಿ ಅಣ್ಣೇಶ, ನವೀನ, ಕೆ.ಜಿ.ಕಲ್ಲಪ್ಪ, ಕೆಟಿಜೆ ನಗರ ಬಿ.ಆನಂದ, ಕೆಟಿಜೆ ನಗರ ಲೋಕೇಶ, ಲಿಂಗರಾಜ ರೆಡ್ಡಿ, ಎಚ್.ಪಿ.ವಿಶ್ವಾಸ, ಸಿದ್ದೇಶ, ಕೊಟ್ರೇಶ ಗೌಡ, ಗಾಂಧಿ ನಗರ ಪಂಜು, ಪ್ರವೀಣ ಜಾಧವ್‌, ರಾಜು ವೀರಣ್ಣ, ಮಂಜು ಪೈಲ್ವಾನ್, ಸಂತೋಷ ಪೈಲ್ವಾನ್, ಸಂತೋಷ, ಶಾಮನೂರು ಹರೀಶ, ನವೀನ, ಡಾ.ನಸೀರ್ ಅಹಮ್ಮದ್, ಹರೀಶ, ರಾಜು ಶಾಮನೂರು, ಕೃಷ್ಣಮೂರ್ತಿ, ಮಂಜುನಾಥ, ಹಾಲೇಶ ನಾಯ್ಕ ಇತರರು ಇದ್ದರು.

Share this article