40% ಕಮಿಷನ್‌, ಅನುದಾನ ಕಡಿತ ವಿರುದ್ಧ ದನಿಯೆತ್ತಲು ಬಿಜೆಪಿ ಸಜ್ಜು

KannadaprabhaNewsNetwork | Updated : Feb 13 2024, 12:29 PM IST

ಸಾರಾಂಶ

ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕೇಳಿ ಬಂದಿರುವ ಶೇ.40ರಷ್ಟು ಕಮಿಷನ್‌ ಆರೋಪ ಮತ್ತು ಶಾಸಕರಿಗೆ ಅನುದಾನ ನೀಡದಿರುವ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸಿ ಹೋರಾಟ ನಡೆಸಲು ಪ್ರತಿಪಕ್ಷ ಬಿಜೆಪಿ ತೀರ್ಮಾನಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕೇಳಿ ಬಂದಿರುವ ಶೇ.40ರಷ್ಟು ಕಮಿಷನ್‌ ಆರೋಪ ಮತ್ತು ಶಾಸಕರಿಗೆ ಅನುದಾನ ನೀಡದಿರುವ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸಿ ಹೋರಾಟ ನಡೆಸಲು ಪ್ರತಿಪಕ್ಷ ಬಿಜೆಪಿ ತೀರ್ಮಾನಿಸಿದೆ. 

ಸೋಮವಾರ ಬಿಜೆಪಿ ಕಚೇರಿಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಸಭೆಯ ಬಳಿಕ ಈ ಕುರಿತು ವಿವರಣೆ ನೀಡಿದ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ಬಿಜೆಪಿ ಸರ್ಕಾರ ನೀಡಿದ್ದ ಶಾಸಕರ ಅನುದಾನವನ್ನು ಸ್ಥಗಿತ ಮಾಡಲಾಗಿದೆ. 

ಹೊಸತಾಗಿ ಶಾಸಕರಿಗೆ ಅನುದಾನ ನೀಡುತ್ತಿಲ್ಲ. ಈ ಬಗ್ಗೆ ಪ್ರಸ್ತಾಪಿಸಿ ಸರ್ಕಾರದ ಗಮನಸೆಳೆಯಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಅಧಿವೇಶನದಲ್ಲಿ ಪ್ರತಿಯೊಬ್ಬ ಶಾಸಕರು ಭಾಗಿಯಾಗಿ ಚರ್ಚೆಯಲ್ಲಿ ಭಾಗಿಯಾಗಬೇಕು. 

ಸರ್ಕಾರದ ಲೋಪದೋಷಗಳನ್ನು ಜನರ ಮುಂದಿಡುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಗಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಕಾಂಗ್ರೆಸ್‌ ಸರ್ಕಾರದ ವಿರುದ್ಧ 40 ಪರ್ಸೆಂಟ್‌ ಆರೋಪ ಮಾಡಿದ್ದಾರೆ. 

ಅಲ್ಲದೇ, ಅವರದೇ ಪಕ್ಷದ ನಾಯಕ ಶಿವರಾಮ ಸಹ 50 ಪರ್ಸೆಂಟ್‌ ಲೂಟಿ ಮಾಡಲಾಗುತ್ತಿದೆ ಎಂದು ಆಪಾದಿಸಿದ್ದಾರೆ. ಇದು ಗಂಭೀರ ಆರೋಪವಾಗಿದ್ದು, ಸದನದಲ್ಲಿ ಈ ವಿಷಯವನ್ನು ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ ಪೇ ಸಿಎಂ, 40 ಪರ್ಸೆಂಟ್‌ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ ಮಾಡಿದ್ದರು. ಇದೀಗ ಅವರ ಹಣೆಗೆ ಈ ಪಟ್ಟಿಯನ್ನು ಕಟ್ಟಲಾಗಿದೆ. 

ಕೆಂಪಣ್ಣ ಅವರನ್ನು ಕಾಂಗ್ರೆಸ್‌ ಪರ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಅವರಿಗೆ ಇದರಿಂದ ಹೊರಬರಲು ಅವಕಾಶ ಸಿಕ್ಕಿಂತಾಗಿದೆ. ಅಗತ್ಯ ದಾಖಲೆಗಳನ್ನು ನೀಡುವಂತೆ ಕೋರಲಾಗಿದೆ.

ಯಾವ ಇಲಾಖೆಯಲ್ಲಿ ಎಷ್ಟು ಭ್ರಷ್ಟಾಚಾರ ನಡೆದಿದೆ ಎಂಬುದರನ್ನು ಕೆಂಪಣ್ಣ ಹೇಳಿದ್ದಾರೆ. ಆ ಮಾಹಿತಿ ಪಡೆದು ಸದನದಲ್ಲಿ ಪ್ರಸ್ತಾಪಿಸಲಾಗುವುದು ಎಂದರು.

ಕಳೆದ ಎಂಟು ತಿಂಗಳಲ್ಲಿ ಸರ್ಕಾರ ದಾರಿ ತಪ್ಪಿದೆ. ಸರ್ಕಾರ ನೀಡಿರುವ ಮಾತನ್ನು ಉಳಿಸಿಕೊಂಡಿಲ್ಲ. ಜನರಿಗೆ ಮೋಸ ಮಾಡಿದೆ. ಈ ಎಲ್ಲಾ ವಿಚಾರಗಳನ್ನು ಸದನದಲ್ಲಿ ಪ್ರಸ್ತಾಪಿಸಲಾಗುವುದು. ಈ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

Share this article