ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ

KannadaprabhaNewsNetwork |  
Published : Apr 29, 2024, 01:38 AM IST
ಮುಂಡರಗಿ ತಾಲೂಕಿನ ಸಿಂಗಟಾಲೂರು ಗ್ರಾಮದಲ್ಲಿ ಭಾನುವಾರ ಹಾವೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ಮುಖಂಡರುಪ್ರಚಾರ ನಡೆಸಿ ಮತಯಾಚನೆ ಮಾಡಿದರು. | Kannada Prabha

ಸಾರಾಂಶ

ಮತದಾರರು ಆನಂದಸ್ವಾಮಿ ಗಡ್ಡದೇವರಿಗೆ ಮತ ನೀಡಿ ಕಾಂಗ್ರೆಸ್ ಗೆಲುವಿಗೆ ಕಾರಣವಾಗಬೇಕು

ಮುಂಡರಗಿ: ರಾಜ್ಯ ಕಾಂಗ್ರೆಸ್ ಸರ್ಕಾರ ಚುನಾವಣೆ ಪೂರ್ವ ನೀಡಿದ 5 ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ. ಆದರೆ 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ₹15 ಲಕ್ಷ ಹಣ,ಯುವಕರಿಗೆ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಠಿಸುವುದಾಗಿ ಹೇಳಿತ್ತು. ಆದರೂ ಈಡೇರಲಿಲ್ಲ. ದೇಶದಲ್ಲಿ ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಕೀರ್ತಿ ಕೇಂದ್ರ ಬಿಜೆಪಿ ಸರ್ಕಾರಕ್ಕಿದೆ ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಆರೋಪಿಸಿದರು.

ಅವರು ಭಾನುವಾರ ತಾಲೂಕಿನ ಮಕ್ತುಂಪುರ, ಬೆಣ್ಣಿಹಳ್ಳಿ, ಕೊರ್ಲಹಳ್ಳಿ, ಗಂಗಾಪೂರ, ಶೀರನಹಳ್ಳಿ, ಸಿಂಗಟಾಲೂರು ಗ್ರಾಮಗಳಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ಪ್ರಚಾರ ಕೈಗೊಂಡು ಮತಯಾಚನೆ ಮಾಡಿ ಮಾತನಾಡಿದರು.

ಕಳೆದ ಬಾರಿ ರಾಜ್ಯದಲ್ಲಿ ಬಿಜೆಪಿಯಿಂದ 25 ಜನ, ಜೆಡಿಎಸ್ ನಿಂದ 1, ಪಕ್ಷೇತರ 1 ಸೇರಿ ಒಟ್ಟು 27 ಜನ ಲೋಕಸಭೆಗೆ ಆಯ್ಕೆಯಾಗಿ ಹೋಗಿದ್ದರೂ ಸಹ ಕರ್ನಾಟಕಕ್ಕೆ ಬರಬೇಕಾಗಿದ್ದ ಬರ ಪರಿಹಾರದ ಹಣ ತರುವಲ್ಲಿ ಯಾರೊಬ್ಬರೂ ಪ್ರಯತ್ನಿಸಲಿಲ್ಲ. ನ್ಯಾಯಾಲಯದ ಮೂಲಕ ರಾಜ್ಯದ ಜನತೆ ಪಡೆದುಕೊಳ್ಳಬೇಕಾಯಿತು. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ನೀತಿ ಕಾಂಗ್ರೆಸ್ ಪಕ್ಷದ್ದಾಗಿದೆ. ರಾಜ್ಯದ 28 ಕ್ಷೇತ್ರಗಳಲ್ಲಿ ಕೆಲವು ಪ್ರಮುಖ ಸಮುದಾಯಗಳಿಗೆ ಟಿಕೇಟ್ ನೀಡಿಲ್ಲ. ಹೀಗಾಗಿ ಆ ಸಮುದಾಯ ಬಾಂಧವರು ಈ ಚುನಾವಣೆಯಲ್ಲಿ ಬಿಜೆಪಿಗೆ ಬುದ್ಧಿ ಕಲಿಸಲಿದ್ದಾರೆ. ಆದ್ದರಿಂದ ಮತದಾರರು ಆನಂದಸ್ವಾಮಿ ಗಡ್ಡದೇವರಿಗೆ ಮತ ನೀಡಿ ಕಾಂಗ್ರೆಸ್ ಗೆಲುವಿಗೆ ಕಾರಣವಾಗಬೇಕು ಎಂದರು.

ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ವಾತಿ ಮಾಳಗಿ, ಸುಜಾತಾ ದೊಡ್ಡಮನಿ, ರುದ್ರಗೌಡ ಪಾಟೀಲ, ಹೇಮಂತಗೌಡ ಪಾಟೀಲ ಮಾತನಾಡಿ, ಸಿದ್ದರಾಮಯ್ಯ ಜನತೆಗೆ ಮೋಡಿ ಮಾಡಿಲ್ಲ, ನುಡಿದಂತೆ ನಡೆದಿದ್ದಾರೆ. ಕೊಟ್ಟ ಭರವಸೆ ಈಡೇರಿಸಿದ್ದಾರೆ. ಶಕ್ತಿ ಯೋಜನೆ ಕುರಿತು ಮಾಜಿ ಸಿಎಂ ಮಹಿಳೆಯರಿಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಹೀಗೆ ಮಾತನಾಡಿದರೆ ಈ ಚುನಾವಣೆಯಲ್ಲಿ ಮಹಿಳೆಯರು ಮೈತ್ರಿ ಪಕ್ಷಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿರಾಶ್ರಿತರಿಗಾಗಿ ಒಂದೇ ಒಂದು ಆಶ್ರಯ ಮನೆ ನೀಡಲಿಲ್ಲ. ಇಂದಿನ ಸಿದ್ದರಾಮಯ್ಯ ಸರ್ಕಾರ ರಾಜ್ಯಾದ್ಯಂತ 5 ಲಕ್ಷ ಮನೆ ನೀಡುತ್ತಿದ್ದು, ಪ್ರತಿ ಗ್ರಾಪಂಗೆ 150 ಮನೆಗಳು ಬರಲಿವೆ. ಮನಮೋಹನ್ ಸಿಂಗ್ ಸರ್ಕಾರ ₹72 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದರು. ಇದೀಗ ನಿಮ್ಮೆಲ್ಲರ ಆಶೀರ್ವಾದದಿಂದ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದು ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಿದೆ. ಹೀಗಾಗಿ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠಗೆ ಮತ ನೀಡಿ ಆರಿಸಿ ತರಬೇಕು ಎಂದರು.

ತಾಲೂಕು ಬ್ಲಾಕ್ ಕಾಂಗ್ರೆಸ್ ಕಮೀಟಿ ಅಧ್ಯಕ್ಷ ಡಿ.ಡಿ. ಮೋರನಾಳ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸುರೇಶ ಮಾಗಡಿ, ಮಾರುತಿ ಚೂರಿ, ಎಸ್.ಡಿ. ಮಕಾಂದಾರ, ಸುನಿತಾ ಹುರಕಡ್ಲಿ, ಪೂಜಾ ಕಮ್ಮಾರ, ಸೀತಾ ಬಸಾಪೂರ, ಅಬ್ದುಲ್ ಖುರೇಶಿ, ನಿಂಗಪ್ಪ ಹೊನ್ನಾಯಕನಹಳ್ಳಿ, ಹಾಲಪ್ಪ ಹಡಪದ, ಬಸವರಡ್ಡೆಪ್ಪ, ಹಾದೇವಕ್ಕ ಹಳ್ಳಿ, ಎಸ್.ಆರ್. ಬಸಾಪೂರ, ಎಂ‌.ಯು. ಮಕಾಂದಾರ, ರಾಜು ಡಾವಣಗೇರಿ, ನಾಗರಾಜ ಹೊಂಬಳಗಟ್ಟಿ, ದುದ್ದುಸಾಬ್ ಕಾತರಕಿ, ಯಲ್ಲಪ್ಪ ಹೊಂಬಳಗಟ್ಟಿ, ಬಸವರಾಜ ದೇಸಾಯಿ, ರಾಜಾಸಾಬ್ ಬೆಟಗೇರಿ, ಅಂದಾನಗೌಡ ಪಾಟೀಲ, ಆನಂದಗೌಡ ಪಾಟೀಲ ಮುಂಡವಾಡ, ವಿನೋದ ವಡ್ಡರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ