ಯತ್ನಾಳರನ್ನು ಬಿಜೆಪಿ ಬಿಟ್ಟಿದೆ, ಹಿಂದೂಗಳು ಕೈ ಬಿಡಲ್ಲ

KannadaprabhaNewsNetwork | Published : Mar 29, 2025 12:31 AM

ಸಾರಾಂಶ

ಪಾಟೀಲರನ್ನು ಅಪ್ಪ ಮಕ್ಕಳು ಕೂಡಿಕೊಂಡು ಕುತಂತ್ರ ಮಾಡಿ ಕೇಂದ್ರದ ನಾಯಕರ ಕಿವಿ ತುಂಬುವ ಮೂಲಕ ಯತ್ನಾಳ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿದ್ದು ಖಂಡನೀಯ

ಕನ್ನಡಪ್ರಭ ವಾರ್ತೆ ಕಾಗವಾಡ

ಹಿಂದೂ ಫೈರ್ ಬ್ರ್ಯಾಂಡ್ ಎಂದೆ ಕರೆಯಿಸಿಕೊಳ್ಳುವ ಹಿಂದೂ ಹುಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿ ಕೈ ಬಿಟ್ಟಿರಬಹುದು. ಆದರೆ, ಹಿಂದೂಗಳೆಂದೂ ಬಸನಗೌಡ ಪಾಟೀಲರನ್ನು ಕೈ ಬಿಡುವುದಿಲ್ಲ ಎಂದು ಪಂಚಮಸಾಲಿ ಸಮಾಜದ ಜನಪರ ಹೋರಾಟಗಾರ, ಅಥಣಿ ತಾಲೂಕು ಪಂಚಮಸಾಲಿ ವಕೀಲರ ಪರಿಷತ್ ಅಧ್ಯಕ್ಷ ಎಸ್.ಎಸ್.ಪಾಟೀಲ(ಬಮ್ಮಾಳ) ಹೇಳಿದರು.

ಹಿಂದುತ್ವ, ಹಿಂದೂಗಳ ರಕ್ಷಣೆಗೆ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾನಾಥ, ಮಹಾರಾಷ್ಟ್ರದಲ್ಲಿ ದೆವೇಂದ್ರ ಫಡನ್ವೀಸ್, ಆಂದ್ರದಲ್ಲಿ ಪವನಕಲ್ಯಾಣ ಹಾಗೂ ತಮಿಳನಾಡಿನಲ್ಲಿ ಅಣ್ಣಾಮಲೈ ಇದ್ದಾರೆ. ಹಾಗೆಯೇ, ಕರ್ನಾಟಕದಲ್ಲಿ ಹಿಂದೂಗಳನ್ನು, ಹಿಂದುತ್ವ ಸಂರಕ್ಷಿಸಲು ಬಸನಗೌಡ ಪಾಟೀಲರಿಗೆ ಮಾತ್ರ ಆ ತಾಕತ್ತು ಇದೆ. ಪಾಟೀಲರನ್ನು ಅಪ್ಪ ಮಕ್ಕಳು ಕೂಡಿಕೊಂಡು ಕುತಂತ್ರ ಮಾಡಿ ಕೇಂದ್ರದ ನಾಯಕರ ಕಿವಿ ತುಂಬುವ ಮೂಲಕ ಯತ್ನಾಳ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿದ್ದು ಖಂಡನೀಯ ಎಂದು ಪ್ರಕಟಣೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಸನಗೌಡ ಪಾಟೀಲರನ್ನು ಉಚ್ಚಾಟನೆ ಮಾಡಿರುವ ಆದೇಶವನ್ನು ಕೇಂದ್ರ ಬಿಜೆಪಿ ನಾಯಕರು ತಕ್ಷಣವೇ ಹಿಂದಕ್ಕೆ ಪಡೆಯಬೇಕು. ಅಲ್ಲದೇ, ಬಿ.ವೈ.ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಬೇರೊಬ್ಬರಿಗೆ ಆ ಸ್ಥಾನವನ್ನು ಕೊಡಬೇಕು. ಇಲ್ಲದಿದ್ದರೆ ಬರುವ ದಿನಮಾನಗಳಲ್ಲಿ ಪಂಚಮಸಾಲಿ ಸಮಾಜದ ವತಿಯಿಂದ ರಾಜ್ಯದಾದ್ಯಂತ ಹೋರಾಟ ಮಾಡುವುದಾಗಿ ಹೇಳಿದರು.

ಪಾಟೀಲರು ಎಂದೂ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಅವರು ಹಿಂದೂ ಧರ್ಮದ ಸಂರಕ್ಷಣೆಗಾಗಿ ಹಗಲಿರುಳು ಹೋರಾಡುತ್ತಿದ್ದಾರೆ. ಅಂತಹ ನಾಯಕರಿಗೆ ಈ ತರಹದ ಶಿಕ್ಷೆ ನೀಡುವುದು ಸರಿಯಲ್ಲ. ರಾಜ್ಯದ ತುಂಬೆಲ್ಲ ಯತ್ನಾಳ ಅವರ ಪರ ಹೋರಾಟ ಮಾಡುತ್ತಿದ್ದಾರೆ. ಹಿಂದೂಗಳ ಕೆಂಗೆಣ್ಣಿಗೆ ಗುರಿಯಾಗುವುದಕ್ಕಿಂತ ಮುಂಚೆ ರಾಷ್ಟ್ರೀಯ ನಾಯಕರು ಎಚ್ಚೆತ್ತುಕೊಂಡು ಅಮಾನತು ಹಿಂದಕ್ಕೆ ಪಡೆಯಬೇಕೆಂದು ಅವರು ಆಗ್ರಹಿಸಿದರು.

ಏ.13ರವರೆಗೆ ಪಂಚಮಸಾಲಿ ಸಮಾಜ ಹಾಗೂ ಹಿಂದೂಪರ ಸಂಘಟನೆಗಳು ಮತ್ತು ರಾಜ್ಯದ ಹಲವು ಬಿಜೆಪಿ ನಾಯಕರು ಹಾಗೂ ಹಲವು ಮಠಾಧೀಶರು ಅಮಾನತು ವಾಪಸ್ ಪಡೆಯಲು ಗಡುವು ಕೊಟ್ಟಿದ್ದಾರೆ. ಅದರೊಳಗಾಗಿ ವಾಪಸ್ ಪಡೆಯದಿದ್ದರೆ ಹಿಂದೂತ್ವದ ಆಧಾರದ ಮೇಲೆ ಹೊಸ ಪಕ್ಷ ಕಟ್ಟುವ ನಿರ್ಧಾರ ಮಾಡಿದ್ದಾರೆ. ಅದಕ್ಕೆ ಪಂಚಮಸಾಲಿ ಹಾಗೂ ಹಿಂದೂಗಳ ಬೆಂಬಲವಿದೆ ಎಂದು ಹೇಳಿದರು.

ಬಿಜೆಪಿ ಕೇವಲ ಎರಡು ಸ್ಥಾನದಿಂದ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವವರೆಗೆ ಪಕ್ಷ ಸಂಘಟನೆ ಮಾಡುವಲ್ಲಿ ಬಸನಗೌಡ ಪಾಟೀಲರ ಸಂಘಟನೆ ಬಹುಪಾಲು ಇದೆ ಎಂಬುದನ್ನು ರಾಷ್ಟ್ರೀಯ ನಾಯಕರು ಮರಿಯಬಾರದು. ತಕ್ಷಣವೇ ತಮ್ಮ ನಿರ್ಧಾರವನ್ನು ಹಿಂದಕ್ಕೆ ಪಡೆದುಕೊಳ್ಳಬೇಕೆಂದು ಎಸ್.ಎಸ್.ಪಾಟೀಲ ಆಗ್ರಹಿಸಿದರು.

Share this article