ನಗರಸಭೆಯಲ್ಲಿ ಬಿಸಿಯಾದ ನೀರು

KannadaprabhaNewsNetwork | Published : Mar 29, 2025 12:31 AM

ಸಾರಾಂಶ

ನಗರದಲ್ಲಿ ಕುಡಿಯುವ ನೀರಿನ ಭವಣೆಯ ತೀವ್ರತೆ ಹೆಚ್ಚಾಗಿದ್ದು ಜನಪ್ರತಿನಿಧಿಗಳಾದ ನಾವು ಜನರಿಗೆ ನೀರು ಒದಗಿಸಲು ಸಾಧ್ಯವಾಗಿಲ್ಲ. ಹಾದಿ ಬೀದಿಯಲ್ಲಿ ಜನ ನಮ್ಮನ್ನು ಉಗಿಯುತ್ತಿದ್ದು ಇದಕ್ಕೆ ನಗರಸಭೆ ಅಧ್ಯಕ್ಷರು ಹಾಗೂ ಶಾಸಕರು ಉತ್ತರಿಸಬೇಕಾಗಿದೆ. ನೀರಿನ ವ್ಯವಸ್ಥೆಯನ್ನು ಕೂಡಲೆ ಕಲ್ಪಿಸಬೇಕೆಂದು ಪಕ್ಷಾತೀತವಾಗಿ ನಗರಸಭಾ ಸದಸ್ಯರು ಒಕ್ಕೊರಲಿನಿಂದ ಸಭೆಯಲ್ಲಿದ್ದ ಶಾಸಕ ಕೆ. ಷಡಕ್ಷರಿ ಹಾಗೂ ನಗರಸಭಾ ಅಧ್ಯಕ್ಷೆ ಯಮುನಾ ಧರಣೇಶ್ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರಸಭೆಯಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ತಿಪಟೂರು

ನಗರದಲ್ಲಿ ಕುಡಿಯುವ ನೀರಿನ ಭವಣೆಯ ತೀವ್ರತೆ ಹೆಚ್ಚಾಗಿದ್ದು ಜನಪ್ರತಿನಿಧಿಗಳಾದ ನಾವು ಜನರಿಗೆ ನೀರು ಒದಗಿಸಲು ಸಾಧ್ಯವಾಗಿಲ್ಲ. ಹಾದಿ ಬೀದಿಯಲ್ಲಿ ಜನ ನಮ್ಮನ್ನು ಉಗಿಯುತ್ತಿದ್ದು ಇದಕ್ಕೆ ನಗರಸಭೆ ಅಧ್ಯಕ್ಷರು ಹಾಗೂ ಶಾಸಕರು ಉತ್ತರಿಸಬೇಕಾಗಿದೆ. ನೀರಿನ ವ್ಯವಸ್ಥೆಯನ್ನು ಕೂಡಲೆ ಕಲ್ಪಿಸಬೇಕೆಂದು ಪಕ್ಷಾತೀತವಾಗಿ ನಗರಸಭಾ ಸದಸ್ಯರು ಒಕ್ಕೊರಲಿನಿಂದ ಸಭೆಯಲ್ಲಿದ್ದ ಶಾಸಕ ಕೆ. ಷಡಕ್ಷರಿ ಹಾಗೂ ನಗರಸಭಾ ಅಧ್ಯಕ್ಷೆ ಯಮುನಾ ಧರಣೇಶ್ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರಸಭೆಯಲ್ಲಿ ನಡೆಯಿತು. ನಗರದ ನಗರಸಭೆಯಲ್ಲಿ ಶುಕ್ರವಾರ ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ವಿವಿಧ ಮೂಲಭೂತ ಸಮಸ್ಯೆಗಳ ಬಗ್ಗೆ ಚರ್ಚಿಸಿದ ಸದಸ್ಯರುಗಳು ನಗರ ೩೧ವಾರ್ಡ್‌ಗಳ ಪೈಕಿ ಕೆಲ ವಾರ್ಡ್‌ಗಳಲ್ಲಿ ಮಾತ್ರ ನೀರಿನ ವ್ಯವಸ್ಥೆಯಿದ್ದು ಇನ್ನುಳಿದ ವಾರ್ಡ್‌ಗಳಲ್ಲಿ ನೀರಿಲ್ಲ. ಜನರು ನಮ್ಮನ್ನು ಬಾಯಿಗೆ ಬಂದಂತೆ ಬೈಯುತ್ತಿದ್ದಾರೆ. ಕೆಲ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತಿದ್ದು ರಿಪೇರಿಯಾಗಿಲ್ಲ. ಇಂತಹ ಬೇಸಿಗೆ ಸಮಯದಲ್ಲಿ ಜನರಿಗೆ ನೀರು ಕೊಡಿದಿದ್ದರೆ ಜವಾಬ್ದಾರಿ ಯಾರು ಹೊರಬೇಕು. ನೀರಿನ ಕೊರತೆ ಇರುವ ಕಡೆ ಹೊಸ ಬೋರ್‌ವೆಲ್ ಕೊರೆಸುವ ವ್ಯವಸ್ಥೆ ಮಾಡಿ ಈ ಬಗ್ಗೆ ಅಧ್ಯಕ್ಷರಿಗೆ ಹಲವು ಬಾರಿ ತಿಳಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ನಗರಸಭೆ ಸದಸ್ಯರಾದ ಸೊಪ್ಪುಗಣೇಶ್ ಮತ್ತು ರಾಮಮೋಹನ್ ದೂರಿದರು. ಹಾಜರಿದ್ದ ಶಾಸಕ ಕೆ. ಷಡಕ್ಷರಿ ಮಾತನಾಡಿ ನಗರಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು ನನ್ನ ಜವಾಬ್ದಾರಿ. ಎಲ್ಲಾ ಸದಸ್ಯರನ್ನು ಪಕ್ಷಭೇದ ಮಾಡದೆ ಒಂದೇ ಮನೋಭಾವನೆಯಿಂದ ಕಾಣುತ್ತಿದ್ದೇನೆ. ಯಾವ ವಾರ್ಡ್‌ಗೆ ನೀರಿನ ಕೊರತೆ ಇದೆ ನೀವು ಅರ್ಜಿ ಬರೆದುಕೊಟ್ಟರೆ ಅಲ್ಲಿಗೆ ಹೊಸ ಬೋರ್‌ವೆಲ್ ಕೊರೆಸುವ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ೧೫ದಿನಗಳೊಳಗೆ ಯಾವ ವಾರ್ಡಿನಲ್ಲಿ ನೀರಿನ ಸಮಸ್ಯೆ ಇದೆಯೋ ಬಗೆಹರಿಸುತ್ತೇನೆ. ನಾನು ಸಹ ಸುಮ್ಮನೆ ಕುಳಿತಿಲ್ಲ. ನೀರಿಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಸುತ್ತಿದ್ದೇನೆ. ನಿಮಗಿಂತ ನನಗೆ ಹೆಚ್ಚು ಜವಾಬ್ದಾರಿ ಇದೆ. ಕೂಗಾಡುವುದು, ರೇಗಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲವಾದ್ದರಿಂದ ಸದಸ್ಯರು ತಾಳ್ಮೆಯಿಂದ ವರ್ತಿಸಬೇಕು ಎಂದರು. ನಗರಸಭಾ ಸದಸ್ಯ ಸೊಪ್ಪು ಗಣೇಶ್ ಮತ್ತು ನಹೀಂಪಾಷ ಮಾತನಾಡಿ ನಮ್ಮ ಬಡವಾಣೆಗಳಲ್ಲಿ ಮೋಟರ್ ಪಂಪ್ ಸುಟ್ಟುಹೋದರೆ ಅದನ್ನು ರಿಪೇರಿ ಮಾಡುವುದು ತಿಂಗಳು ಗಟ್ಟಲೆಯಾಗುತ್ತಿದೆ. ಮೋಟರ್‌ಗಳು ಗುಣಮಟ್ಟದಿಂದ ಕೂಡಿಲ್ಲ. ತಿಂಗಳಿಗೆ ಹತ್ತು ಬಾರಿ ಕೆಟ್ಟು ಹೋಗುತ್ತವೆ. ರಿಪೇರಿ ಮಾಡುವವರೆಗೂ ನಮಗೆ ನೀರಿಲ್ಲದಂತಾಗಲಿದೆ. ಆದ್ದರಿಂದ ಉತ್ತಮ ಗುಣಮಟ್ಟದ ಟೆಕ್ನೋ ಮತ್ತು ವಿಗಾರ್ಡ್ ಕಂಪನಿಯ ಮೋಟಾರ್, ಪಂಪ್‌ಸೆಟ್‌ಗಳನ್ನು ಅಳವಡಿಸುವಂತೆ ಒತ್ತಾಯಿಸಿದರು. ಅದಕ್ಕೆ ಶಾಸಕರು ನಗರಸಭೆ ಎಇಇ ರಂಗಸ್ವಾಮಿಯವರಿಗೆ ಈ ಬಗ್ಗೆ ಮಾಹಿತಿ ನೀಡಿ ಯಾವ ವಾರ್ಡ್‌ಗಳಲ್ಲಿ ಮೋಟರ್ ಪಂಪ್‌ಗಳು ಕೆಟ್ಟು ಹೋಗುತ್ತವೆಯೋ ಅಲ್ಲಿ ಕೂಡಲೇ ರಿಪೇರಿ ಮಾಡಿಸಿ ಜನರಿಗೆ ನೀರು ಒದಗಿಸುವ ಕೆಲಸ ಮಾಡಿ ಎಂದು ಸೂಚಿಸಿದರು. ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್ ಮಾತನಾಡಿ ಎಲ್ಲಿ ನೀರಿನ ಸಮಸ್ಯೆ ಇದೆಯೋ ಆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇವೆ. ಸದಸ್ಯರಾದ ನೀವುಗಳು ನನಗೆ ಅರ್ಜಿ ಮೂಲಕ ಕೊಟ್ಟರೆ ನಾನು ಕ್ರಮ ವಹಿಸುತ್ತೇನೆ. ಹೊಸ ಬೋರ್‌ವೇಲ್, ಪೈಪ್‌ಲೈನ್ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸಿಕೊಡುತ್ತೇವೆ ಎಂದರು. ನಗರಸಭಾ ಸದಸ್ಯರಾದ ಪ್ರಭುಕೋಟೆ ಮಾತನಾಡಿ ಚಿಕ್ಕನಾಯಕನಹಳ್ಳಿ, ತುರುವೇಕೆರೆ ನಗರಸಭೆಯಲ್ಲಿ ಕಡಿಮೆ ಆದಾಯ ಬಜೆಟ್ ಮಂಡಿಸಿದರೂ ಪತ್ರಕರ್ತರಿಗೆ ಭವನ, ವಿಮೆ ಸೇರಿದಂತೆ ಅಗತ್ಯ ಸೌಲಭ್ಯವನ್ನು ಒದಗಿಸಲಾಗಿದೆ. ಹಾಗಾಗಿ ನಮ್ಮ ನಗರಸಭೆ ಬಜೆಟ್‌ನಲ್ಲಿಯೂ ಪತ್ರಕರ್ತರ ಭವನದ ಬಗ್ಗೆ ಸೇರಿಸಬೇಕಿತ್ತು ಎಂದರು. ಅದಕ್ಕೆ ಕೆಲ ಸದಸ್ಯರುಗಳು ನಮ್ಮ ಹಳೇ ನಗರಸಭೆ ಕಚೇರಿಯನ್ನು ಕೊಟ್ಟರೆ ಅವರಿಗೆ ನೆರವಾಗಲಿದೆ ಎಂದರು. ಅದಕ್ಕೆ ಶಾಸಕರು ನೋಂದಾಯಿತ ಎಲ್ಲಾ ಪತ್ರಕರ್ತರ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳುತ್ತೇನೆಂದರು. ಸದಸ್ಯೆ ಓಹಿಲಾ ಮಾತನಾಡಿ ನಗರದಲ್ಲಿ ಸಾರ್ವಜನಿಕ ಶೌಚಾಲಯಗಳಿಲ್ಲದೆ ಜನರು ಪರದಾಡುವಂತಾಗಿದೆ ಇರುವ ಶೌಚಾಲಯಗಳಲ್ಲಿ ಸ್ವಚ್ಚತೆ ಇಲ್ಲದೆ ಪ್ರಯೋಜನಕ್ಕೆ ಬಾರದಂತಾಗಿದೆ ಎಂದರು. ಅದಕ್ಕೆ ಅಧ್ಯಕ್ಷೆ ಯಮುನಾ ಮಾತನಾಡಿ ಜಾಗದ ಕೊರತೆ ಇದ್ದು ಮುಂದಿನ ದಿನಗಳಲ್ಲಿ ಈ ಬಗ್ಗೆ ಗಮನಹರಿಸಲಾಗುವುದು ಎಂದರು. ಸಭೆಯಲ್ಲಿ ಉಪಾಧ್ಯಕ್ಷೆ ಮೇಘಶ್ರೀ ಭೂಷಣ್, ಪೌರಾಯುಕ್ತ ವಿಶ್ವೇಶ್ವರ ಬದರಗಡೆ ಸೇರಿದಂತೆ ನಗರಸಭೆ ಎಲ್ಲಾ ಸದಸ್ಯರು ಹಾಗೂ ನಾಮಿನಿ ಸದಸ್ಯರುಗಳು ಭಾಗವಹಿಸಿದ್ದರು.

Share this article