ಜನ-ಜಾನುವಾರಗಳಿಗೆ ನೀರಿನ ತೊಂದರೆಯಾಗದಿರಲಿ

KannadaprabhaNewsNetwork | Published : Mar 29, 2025 12:31 AM

ಸಾರಾಂಶ

ಜಾನುವಾರಗಳಿಗೆ ಮೇವಿನ ಕೊರೆತೆ ಉಂಟಾಗದಂತೆ ಕಾಳಜಿ ವಹಿಸಬೇಕು. ಬರ ನಿರ್ವಹಣೆಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಬಾರದು

ಕನ್ನಡಪ್ರಭ ವಾರ್ತೆ ಕಾಗವಾಡ

ಮತಕ್ಷೇತ್ರದ ಪೂರ್ವ ಭಾಗದ ಅನಂತಪೂರ ಮತ್ತು ಮದಭಾವಿ ಜಿಪಂ ವ್ಯಾಪ್ತಿ ಗ್ರಾಮಗಳ ಜನ-ಜಾನುವಾರಗಳಿಗೆ ಕುಡಿಯುವ ನೀರಿನ ತೊಂದರೆ ಮತ್ತು ಜಾನುವಾರಗಳಿಗೆ ಮೇವಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕೆಂದು ಶಾಸಕ ರಾಜು ಕಾಗೆ ತಿಳಿಸಿದ್ದಾರೆ.

ಪಟ್ಟಣದ ವಿದ್ಯಾಸಾಗರ ಶಾಲೆಯ ಸಭಾಭವನದಲ್ಲಿ ಮತಕ್ಷೇತ್ರದ ಗ್ರಾಮಗಳಲ್ಲಿ ಬರ ನಿರ್ವಹಣೆ ಕುರಿತು ಅಧಿಕಾರಿಗಳೊಂದಿಗೆ ನಡೆದ ಪೂರ್ವಿಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಾಗವಾಡ ತಾಲೂಕಿನ ಕೆಂಪವಾಡ, ಮಂಗಸೂಳಿ, ಲೋಕೂರು ಗ್ರಾಮಗಳು ಮಾತ್ರ ನೀರಿನ ಸಮಸ್ಯೆ ಎದುರಿಸುವ ಭೀತಿ ಇದೆ. ಇನ್ನೂಳಿದಂತೆ ಮತಕ್ಷೇತ್ರದ ಪೂರ್ವ ಭಾಗದ ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆ ಉದ್ಭವಿಸಬಹುದು. ಆಯಾ ಗ್ರಾಮ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಆಡಳಿತಾಧಿಕಾರಿಗಳು ಗ್ರಾಮಗಳಲ್ಲಿಯ ಬೋರವೆಲ್‌ಗಳನ್ನು ಟ್ಯಾಂಕರ್‌ಗಳನ್ನು ಸುಸ್ಥಿತಿಯಲ್ಲಿಟ್ಟಿರಬೇಕು. ಜಾನುವಾರಗಳಿಗೆ ಮೇವಿನ ಕೊರೆತೆ ಉಂಟಾಗದಂತೆ ಕಾಳಜಿ ವಹಿಸಬೇಕು. ಬರ ನಿರ್ವಹಣೆಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಬಾರದೆಂದು ಖಡಕ್ ಸೂಚನೆ ನೀಡಿದರು. ಅದರಂತೆ ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ 2 ಟಿಎಂಸಿ ನೀರು ಬಿಡಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಕ್ರಮ ಕೈಗೊಳ್ಳಲಾಗುವುದು ಎಂದರು.

ಮಳೆ ಕೊರತೆಯಿಂದ ಒಂದೆಡೆ ಬರದ ಛಾಯೆ, ಮತ್ತೊಂದೆಡೆ ಅಂತರ ಜಲಮಟ್ಟ ಕುಸಿತದಿಂದಾಗಿ ಜನ ಜಾನುವಾರುಗಳಿಗೆ ಕುಡಿವ ನೀರಿಗೂ ಆಹಾಕಾರ ಎದುರಾಗುವ ಆತಂಕವಿದೆ. ಆದ್ದರಿಂದ ಅಧಿಕಾರಿಗಳು ನೀರಿನ ಸಮಸ್ಯೆಯಿರುವ ಗ್ರಾಮಗಳಲ್ಲಿ ಕೊಳವೆಬಾವಿ, ಕೊರೆಯಿಸಲು ತಯಾರಿಯಲ್ಲಿರಬೇಕು. ರೈತರಿಂದ ಖಾಸಗಿ ಕೊಳವೆಬಾವಿಯಿಂದ ಟ್ಯಾಂಕರ್‌ಗಳ ಮೂಲಕ ನೀರಿನ ಪೂರೈಕೆಗೆ ಸನ್ನದ್ಧರಾಗಿರಬೇಕು. ಸರಕಾರದಿಂದ ಮಹಿಳೆಯರಿಗೆ ವರದಾನವಾಗಿರುವ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಖಾತೆಗೆ ಹಣ ಜಮಾಯಾಗದೆ ತಾಂತ್ರಿಕ ದೋಷಗಳಾಗಿದ್ದರೆ ಸರಿ ಪಡಿಸಬೇಕೆಂದರು.

ಕಾರ್ಯಕ್ರಮದಲ್ಲಿ ಅನೇಕ ಅಧಿಕಾರಿಗಳು ಮತ್ತು ಪಿಡಿಒಗಳು ಮಾತನಾಡಿ, ಬರ ನಿರ್ವಹಣೆ ಸಿದ್ಧತೆ ಕುರಿತು ಮಾತನಾಡಿದರು. ಅಥಣಿ ತಹಸೀಲ್ದಾರ್‌ ರಾಜೇಶ ಬುರ್ಲಿ (ಕಾಗವಾಡ) ಸಿದ್ದು ಭೋಸಗಿ (ಅಥಣಿ), ತಾಪಂ ಇಒ ವೀರಣ್ಣ ವಾಲಿ (ಕಾಗವಾಡ) ಶಿವಾನಂದ ಕಲ್ಲಾಪೂರ (ಅಥಣಿ), ಕುಡಿಯುವ ನೀರು ನೈರ್ಮಲ್ಯ ಇಲಾಖೆ ಅಥಣಿ ಉಪ ವಿಭಾಗದ ಎಇಇ ರವೀಂದ್ರ ಮುರಗಾಲಿ, ಉಪ ತಹಸೀಲ್ದಾರ್‌ ರಷ್ಮಿ ಜಕಾತಿ, ಬಿಇಒ ಎಂ.ಆರ್.ಮುಂಜೆ, ಸಿಡಿಪಿಒ ಸಂಜೀವಕುಮಾರ ಸದಲಗೆ, ಹೆಸ್ಕಾಂ ಅಧಿಕಾರಿ ದುರ್ಯೋಧನ ಮಾಳಿ, ಪಶು ಇಲಾಖೆ ಡಾ.ಡಿ.ಜೆ.ಕಾಂಬಳೆ, ನೀರಾವರಿ ಇಲಾಖೆ ಪ್ರಶಾಂತ ಪೋತದಾರ, ಕೃಷಿ ಇಲಾಖೆ ನಿಂಗನಗೌಡಾ ಬಿರಾದರ ಸೇರಿ ಮತಕ್ಷೇತ್ರದ ಎಲ್ಲ ಗ್ರಾಮ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿಗಳು, ಪುರಸಭೆ/ಪಪಂ ಮುಖ್ಯಾಧಿಕಾರಿಗಳು, ತಾಲೂಕಿನ ಎಲ್ಲ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Share this article