ವಾಲ್ಮೀಕಿ ಸಮುದಾಯಕ್ಕೆ ಗೌರವ ಕೊಟ್ಟಿದ್ದು ಬಿಜೆಪಿ: ರಾಜುಗೌಡ

KannadaprabhaNewsNetwork | Published : Feb 6, 2024 1:30 AM

ಸಾರಾಂಶ

ವಾಲ್ಮೀಕಿ ಸಮುದಾಯಕ್ಕೆ ಗೌರವ ಕೊಟ್ಟಿದ್ದು, ಅಭಿವೃದ್ಧಿಗೆ ದೊಡ್ಡ ಕೊಡುಗೆ ಕೊಟ್ಟಿದ್ದು ಬಿಜೆಪಿ.

ಪರಿಶಿಷ್ಟ ಪಂಗಡಗಳ ಮುನ್ನಡೆ ಸಮಾವೇಶದಲ್ಲಿ ಮಾಜಿ ಸಚಿವ

ಕನ್ನಡಪ್ರಭ ವಾರ್ತೆ ಹಾವೇರಿ

ಕಾಂಗ್ರೆಸ್‌ನವರು ರಾಮನನ್ನು ಟೆಂಟ್‌ನಲ್ಲಿ ಕೂರಿಸಿದ್ದರು, ಮೋದಿ ಬಾಲರಾಮನನ್ನು ಭವ್ಯ ಮಂದಿರದಲ್ಲಿ ಕೂರಿಸಿದರು. ವಾಲ್ಮೀಕಿ ಹೆಸರನ್ನು ಅಯೋಧ್ಯೆಯ ವಿಮಾನ ನಿಲ್ದಾಣಕ್ಕೆ ಇಟ್ಟು ಗೌರವ ಸೂಚಿಸಿದ್ದಾರೆ. ವಾಲ್ಮೀಕಿ ಸಮುದಾಯಕ್ಕೆ ಗೌರವ ಕೊಟ್ಟಿದ್ದು, ಅಭಿವೃದ್ಧಿಗೆ ದೊಡ್ಡ ಕೊಡುಗೆ ಕೊಟ್ಟಿದ್ದು ಬಿಜೆಪಿ ಎಂದು ಮಾಜಿ ಸಚಿವ ರಾಜುಗೌಡ ಹೇಳಿದರು.

ನಗರದ ಶಿವಶಕ್ತಿ ಪ್ಯಾಲೇಸ್‌ನಲ್ಲಿ ಸೋಮವಾರ ಬಿಜೆಪಿ ಎಸ್‌ಟಿ ಮೋರ್ಚಾ ವತಿಯಿಂದ ಏರ್ಪಡಿಸಿದ್ದ ಪರಿಶಿಷ್ಟ ಪಂಗಡಗಳ ಮುನ್ನಡೆ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಯಡಿಯೂರಪ್ಪನವರು ವಾಲ್ಮೀಕಿ ಜಯಂತಿ ಘೋಷಣೆ ಮಾಡಿ ಸಮುದಾಯವನ್ನು ಒಗ್ಗೂಡಿಸಿದರೆ, ಬೊಮ್ಮಾಯಿಯವರು ಮೀಸಲಾತಿಯನ್ನು ಶೇ.೩ರಿಂದ ೭ಕ್ಕೆ ಹೆಚ್ಚಳ ಮಾಡಿ ಸಮುದಾಯದ ಜನರಿಗೆ ಹೆಚ್ಚು ಉದ್ಯೋಗಾವಕಾಶ ಕಲ್ಪಿಸಿದರು. ಇದು ನಮ್ಮ ಸಮುದಾಯದವರು ಹೆಮ್ಮೆ ಪಡಬೇಕಾದ ಸಂಗತಿ ಎಂದರು.

ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ನಮಗೆ ಮಂತ್ರಿ ಸ್ಥಾನ ಬೇಡ, ಮೀಸಲಾತಿ ಹೆಚ್ಚಳ ಮಾಡಿ ಎಂದು ಕೇಳಿಕೊಂಡೆವು. ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಿಸಿದ ಸಂತೃಪ್ತಿ ನಮಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಎಲ್ಲ ಸಮುದಾಯದವರಿಗೆ ಪದಾಧಿಕಾರಿಗಳ ಪಟ್ಟಿಯಲ್ಲಿ ಸ್ಥಾನ ಕಲ್ಪಿಸಿದ್ದಾರೆ. ಯಾವುದೇ ಜಾತಿ ಕಡೆಗಣಿಸಿಲ್ಲ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸುವ ಮೂಲಕ ಪ್ರಧಾನಿ ಮೋದಿ ಅವರ ಕೈ ಬಲಪಡಿಸೋಣ ಎಂದು ಕರೆ ನೀಡಿದರು.

ಪಕ್ಷದ ಜಿಲಾಧ್ಯಕ್ಷ ಅರುಣಕುಮಾರ ಪೂಜಾರ ಮಾತನಾಡಿ, ಮೀಸಲಾತಿ ಎಂಬ ಜೇನುಗೂಡಿಗೆ ಕೈ ಹಾಕಿ, ಎಸ್‌ಟಿ ಸಮುದಾಯಕ್ಕೆ ಹೆಚ್ಚಿನ ಮೀಸಲಾತಿ ಕಲ್ಪಿಸಿದ್ದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಹಿಂದುಳಿದ ವರ್ಗಗಳ ನಾಯಕ ಎನಿಸಿಕೊಂಡಿರುವ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗ ಏಕೆ ಮೀಸಲಾತಿ ಹೆಚ್ಚಳ ಮಾಡಲಿಲ್ಲ ಎಂದು ಪ್ರಶ್ನಿಸಿದ ಅವರು, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ಅನೇಕ ಕೊಡುಗೆ ಕೊಟ್ಟಿದ್ದಾರೆ. ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಲು ವಾಲ್ಮೀಕಿ ಸಮಯದಾಯ ಜಿಲ್ಲೆಯಲ್ಲಿ ಬಿಜೆಪಿ ಗೆಲ್ಲಿಸಬೇಕು ಎಂದರು.

ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಜಗತ್ತಿನ ಆರ್ಥಿಕತೆಯಲ್ಲಿ ಭಾರತ ೫ನೇ ಸ್ಥಾನದಲ್ಲಿದೆ. ಇದಕ್ಕೆ ಕಾರಣ ಮೋದಿ ಅವರು ಭ್ರಷ್ಟಾಚಾರರಹಿತ ಆಡಳಿತ ನೀಡಿದ್ದು. ಶಾಂತಿ, ನೆಮ್ಮದಿಯ ಜೀವನಕ್ಕೆ ಹಾಗೂ ರಾಷ್ಟ್ರದ ಸುಭದ್ರತೆಗೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ವಾಲ್ಮೀಕಿ ಸಮುದಾಯದ ಮತಗಳು ಬಿಜೆಪಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಯೋಧ್ಯೆಯ ವಿಮಾನ ನಿಲ್ದಾಣಕ್ಕೆ ವಾಲ್ಮೀಕಿ ಹೆಸರನ್ನು ಮೋದಿ ಅವರು ಇಟ್ಟಿದ್ದಾರೆ. ರಾಜ್ಯದಲ್ಲಿ ೨೮ಕ್ಕೆ ೨೮ ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಹೇಳಿದರು.

ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಓಲೇಕಾರ, ಜಿಲ್ಲಾಧ್ಯಕ್ಷ ಶಿವಾನಂದ ಯಮನಕ್ಕನವರ, ಗವಿಸಿದ್ದಪ್ಪ ದ್ಯಾಮಣ್ಣವರ, ಶಿವಪುತ್ರಪ್ಪ ಕಲಕೋಟಿ, ಮಂಜುಳಾ ಕರಬಸಮ್ಮನವರ, ಮಾಲತೇಶ ನಾಯಕ ಇತರರು ಇದ್ದರು.

Share this article