ರಟ್ಟೀಹಳ್ಳಿ: ನಾನು ಮಾಡಿದೆ ಎಂದು ಬೀಗುವ ಬಿಜೆಪಿಯ ಮಾಜಿ ಸಚಿವ ಬಿ.ಸಿ. ಪಾಟೀಲ ಅವರ ಕೊಡುಗೆ ಏನು ಎಂಬುದು ತಾಲೂಕಿನ ಜನತೆಗೆ ಗೊತ್ತಿದೆ. ರಟ್ಟೀಹಳ್ಳಿಯನ್ನು ತಾಲೂಕು ಮಾಡಿದ್ದು ಸಿದ್ದರಾಮಯ್ಯನವರು ಹೊರತು ಮಾಜಿ ಸಚಿವರ ಪರಿಶ್ರಮ ಏನೂ ಇಲ್ಲ ಎಂದು ಶಾಸಕ ಯು.ಬಿ. ಬಣಕಾರ ತಿರುಗೇಟು ನೀಡಿದರು.
ಮಂಗಳವಾರ ಪಟ್ಟಣ ಪಂಚಾಯಿತಿ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಹುರಿಯಾಳುಗಳು ನಾಮಪತ್ರ ಸಲ್ಲಿಸುವ ಮುನ್ನ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ರಟ್ಟೀಹಳ್ಳಿ ಮತ್ತು ಹಿರೇಕೆರೂರು ತಾಲೂಕಿನ ಅಭಿವೃದ್ಧಿಯಲ್ಲಿ ಬಿಜೆಪಿಯವರ ಪಾತ್ರ ಏನೂ ಇಲ್ಲ ಎಂದು ಟೀಕಿಸಿದರು.2023ರ ವಿಧಾನಸಭಾ ಚುನಾವಣೆಯಲ್ಲಿ ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಜನರು ಯೋಗ್ಯತೆ ಅಳೆದು ನಿರ್ಣಯವನ್ನು ನೀಡಿದ್ದರು. ಬಿಜೆಪಿಯವರು ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟು ಪಟ್ಟಣ ಪಂಚಾಯಿತಿ ಚುನಾವಣೆಯನ್ನು ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದ ಬಡವರ ಪರ 5 ಗ್ಯಾರಂಟಿಗಳನ್ನು ನೀಡಿದ್ದಲ್ಲದೇ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ಹಣ ನೀಡುತ್ತಿದೆ. ನೀರಾವರಿಗಾಗಿ ₹39 ಕೋಟಿ ಹಣ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ರಟ್ಟೀಹಳ್ಳಿ ತಾಲೂಕನ್ನು ಸಮಗ್ರ ಅಭಿವೃದ್ಧಿ ಮಾಡುವ ಮೂಲಕ ರಾಜ್ಯದಲ್ಲಿ ಮಾದರಿ ತಾಲೂಕನ್ನಾಗಿ ಮಾಡಲಾಗುವುದು ಎಂದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಪಿ.ಡಿ. ಬಸನಗೌಡ್ರ, ವಸಂತ ದ್ಯಾವಕ್ಕಳವರ, ಮಂಜುನಾಥ ತಂಬಾಕದ, ವೀರನಗೌಡ ಪ್ಯಾಟಿಗೌಡ್ರ, ಬಾಬುಸಾಬ ಜಡದಿ, ರವೀಂದ್ರ ಮುದಿಯಪ್ಪನವರ, ನಾರಾಯಣಪ್ಪ ಗೌರಕ್ಕನವರ, ನಾಗನಗೌಡ ಕೋಣ್ತಿ, ಮಂಜು ಮಾಸೂರ, ನಿಂಗನಗೌಡ ಪ್ಯಾಟಿಗೌಡ್ರ, ರಾಜು ಮುಕ್ಕಣ್ಣನವರ ಹಾಗೂ ನೂರಾರು ಕಾರ್ಯಕರ್ತರು ಇದ್ದರು.
ನಾಮಪತ್ರ ಸಲ್ಲಿಕೆ: ಬಿಜೆಪಿ 3, ಕಾಂಗ್ರೆಸ್ 11, ಆಮ್ ಆದ್ಮಿ 7, ಜೆಡಿಎಸ್ 1, ಪಕ್ಷೇತರ 13 ಒಟ್ಟು 35 ಅರ್ಜಿ ಸಲ್ಲಿಸಲಾಗಿದ್ದು, ಒಟ್ಟು 15 ವಾರ್ಡ್‌ಗಳಿಗೆ 76 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿ ಮಾಹಿತಿ ನೀಡಿದ್ದಾರೆ.