ಕಾರವಾರ: ಕೈಗಾ ಅಣು ವಿದ್ಯುತ್ ಯೋಜನಾ ಪ್ರದೇಶದಲ್ಲಿ ತಲಾ 700 ಮೆ.ವ್ಯಾ.ಸಾಮರ್ಥ್ಯದ 5 ಹಾಗೂ 6ನೇ ಘಟಕಗಳ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದ್ದು, 2030ರಲ್ಲಿ ಎರಡೂ ಘಟಕಗಳು ವಿದ್ಯುತ್ ಉತ್ಪಾದನೆಗೆ ಸಜ್ಜಾಗಲಿದೆ ಎಂದು ಕೈಗಾ ಸ್ಥಾನಿಕ ನಿರ್ದೇಶಕ ಬಿ. ವಿನೋದಕುಮಾರ್ ತಿಳಿಸಿದರು.
ಈ ಯೋಜನೆಗೆ ಕೇಂದ್ರ ಸರ್ಕಾರದ ಅಣು ಶಕ್ತಿ ಇಲಾಖೆ, ಅಣುಶಕ್ತಿ ನಿಯಂತ್ರಣ ಆಯೋಗಗಳು ತಾತ್ವಿಕ ಅನುಮೋದನೆ ನೀಡಿದೆ. ಕೈಗಾದ 5 ಹಾಗೂ 6ನೇ ಘಟಕಗಳಿಗೆ ನವೆಂಬರ್ 2025ರ ವೇಳೆಗೆ ಮೊದಲ ಕಾಂಕ್ರೀಟ್ ಹಾಕಲಾಗುತ್ತದೆ. ಜುಲೈ 2027ರಲ್ಲಿ ಉಪಕರಣಗಳ ಅಳವಡಿಕೆ ಆಗಲಿದೆ. ಅಕ್ಟೋಬರ್ 2028 ರಲ್ಲಿ ಕಮೀಶನಿಂಗ್ ಚಟುವಟಿಕೆಗಳು ಶುರುವಾಗಲಿದೆ. ಅಕ್ಟೋಬರ್ 2030ರ ವೇಳೆಗೆ ವಿದ್ಯುತ್ ಉತ್ಪಾದನೆ ಆರಂಭಿಸಲಿವೆ ಎಂದು ಹೇಳಿದರು.
ಘಟಕಗಳ ನಿರ್ಮಾಣ ಕಾರ್ಯದಲ್ಲಿ 8-12 ಸಾವಿರದಷ್ಟು ಕೆಲಸಗಾರರು ದುಡಿಯಲಿದ್ದಾರೆ. ಇದರ ಜತೆ ಸ್ವಂತ ಉದ್ಯೋಗಗಳೂ ಲಭಿಸಲಿವೆ ಎಂದು ಅವರು ವಿವರಿಸಿದರು.ವೈಲ್ಡ್ ಲೈಫ್ ಇನ್ಸಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಪರಿಸರ ಹಾಗೂ ವೈಲ್ಡಲೈಫ್ ಕುರಿತು ಅಧ್ಯಯನ ನಡೆಸಲಾಗಿದೆ. ನೀರು, ಜನತೆಯ ಆರೋಗ್ಯದ ಸ್ಥಿತಿಗತಿ ಬಗ್ಗೆಯೂ ಅಧ್ಯಯನ ನಡೆಸಲಾಗಿದೆ. ಎಲ್ಲ ಅಧ್ಯಯನ ವರದಿಗಳೂ ಪೂರಕವಾಗಿವೆ. ಪ್ರಾಣಿ, ಪಕ್ಷಿಗಳ ಸಂತತಿಯಲ್ಲೂ ಹೆಚ್ಚಳ ಉಂಟಾಗಿದೆ. ವನ್ಯಜೀವಿಗಳು ಹಾಗೂ ಪರಿಸರ ರಕ್ಷಣೆಗಾಗಿ ₹ 27.5 ಕೋಟಿಗಳನ್ನು ವೆಚ್ಚ ಮಾಡಲಾಗುತ್ತಿದ್ದು, ಈಗಾಗಲೆ ₹ 19 ಕೋಟಿ ವಿತರಣೆ ಮಾಡಲಾಗಿದೆ. ಚಾಮರಾಜನಗರ ಹಾಗೂ ಮಂಡ್ಯದಲ್ಲಿ ಅರಣ್ಯ ಬೆಳೆಸಲಾಗುತ್ತಿದೆ ಎಂದು ವಿವರಿಸಿದರು.
ಈ ಎರಡು ಘಟಕಗಳ ನಿರ್ಮಾಣಕ್ಕೆ ಹೆಚ್ಚುವರಿ ಭೂಮಿಯ ಸ್ವಾಧೀನ ಬೇಕಾಗಿಲ್ಲ. ಅರಣ್ಯವೂ ನಾಶವಾಗಲಾರದು ಎಂದ ಅವರು ತಿಳಿಸಿದರು.ರಿಯಾಕ್ಟರ್ ನಿರ್ಮಾಣದ ಚಟುವಟಿಕೆಗಳು, ನ್ಯೂಕ್ಲಿಯರ್ ಘಟಕಗಳ ಸಿವಿಲ್, ಇಲೆಕ್ಟ್ರಿಕಲ್ ಕಾಮಗಾರಿಗಳನ್ನು ಮೆಗಾ ಇಂಜಿನಿಯರ್ಸ್ ಮತ್ತು ಇನ್ ಪ್ರಾಸ್ಟ್ರಕ್ಚರ್ ಲಿಮಿಟೆಡ್ (ಎಂಇಐಎಲ್) ಕಂಪನಿ , ಟರ್ಬೈನ್ ವಿಭಾಗದ ಕಾಮಗಾರಿಗಳನ್ನು ಭಾರತ್ ಹೆವಿ ಇಲೆಕ್ಟ್ರಿಕಲ್ಸ್ ಲಿಮಿಟೆಡ್(ಬಿಎಚ್‌ಇಎಲ್) ಕೈಗೊಳ್ಳಲಿದ್ದು, ಎಲೆಕ್ಟ್ರಿಕಲ್ ಮತ್ತು ಸುರಕ್ಷತೆ ವಿಭಾಗದ ಇನ್ನೊಂದು ಕಾಮಗಾರಿ ಇಸಿಎಲ್ ಎಂಬ ಅಣು ವಿದ್ಯುತ್ ಇಲಾಖೆಯ ಸಹೋದರ ಸಂಸ್ಥೆಯೇ ಕೈಗೊಳ್ಳಲಿದೆ. ಪ್ರತಿ ಹಂತದಲ್ಲೂ ಸುರಕ್ಷತೆಯ ಮಾನದಂಡಗಳನ್ನು ಸಂಬಂಧಪಟ್ಟ ಇಲಾಖೆಗಳು ಕೈಗೊಳ್ಳಲಿವೆ ಎಂದರು.
ಎನ್‌ಪಿಸಿಐಎಲ್ ಕಾರ್ಪೊರೇಟ್ ನಿರ್ವಹಣೆ ವಿಭಾಗದ ಉಮೇದ ಯಾದವ್, ಕೈಗಾ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಸುವರ್ಣಾ ಗಾಂವಕರ್, ಪರಿ ಯೋಜನಾ ನಿರ್ದೇಶಕ ಜೆ.ಎಲ್. ಸಿಂಹ ,ಕೈಗಾ 1 ಮತ್ತು 2 ನಿರ್ದೇಶಕ ಶ್ರೀರಾಮ್, 3 ಮತ್ತು 4 ರ ನಿರ್ದೇಶಕ ಎಸ್.ಕೆ. ಓಝಾ, ಮುಂಬಯಿಯ ಬಾಬಾ ಅಣು ವಿಜ್ಞಾನ ಕೇಂದ್ರದ ನಿವೃತ್ತ ನಿರ್ದೇಶಕ ಡಾ. ಹೇಮಂತ ಹಲ್ಡವನೇಕರ್ ಇದ್ದರು.