ಕಾರವಾರ: ಗ್ರಾಮೀಣ ಮಟ್ಟದಲ್ಲಿ ಜಲ್ ಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಸಂಪರ್ಕ ಪಡೆದಿರುವ ಎಲ್ಲ ಮನೆಗಳಿಗೆ ವಾರ್ಷಿಕವಾಗಿ ಏಕರೂಪ ಕರ ಸಂಗ್ರಹಿಸುವ ಬದಲು ನೀರಿನ ಬಳಸುವಿಕೆಗೆ ತಕ್ಕಂತೆ ಮೀಟರ್ ರೀಡಿಂಗ್ ಆಧಾರದ ಮೇಲೆ ಕರ ಸಂಗ್ರಹಿಸುವಂತೆ ಉತ್ತರ ಕನ್ನಡ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಲೀಷ್ ಶಶಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಮಂಗಳವಾರ ಯಲ್ಲಾಪುರ ತಾಲೂಕಿನ ವಿವಿಧ ಗ್ರಾಪಂಗಳಿಗೆ ಭೇಟಿ ನೀಡಿ ಜಲ್ ಜೀವನ್ ಮಿಷನ್ ಯೋಜನೆಯಡಿ ಅನುಷ್ಠಾನಗೊಳಿಸಲಾದ ಕಾಮಗಾರಿಗಳನ್ನು ಪರಿಶೀಲಿಸಿದರು.ತಾಲೂಕಿನ ಕಿರವತ್ತಿ ಗ್ರಾಪಂ ವ್ಯಾಪ್ತಿಯಲ್ಲಿನ ಹೊಸಳ್ಳಿ ಗ್ರಾಮದ ಹದ್ದಿನಸರ ಮಜರೆ, ತೊಟ್ಟಿಲಗುಂಡಿ ಮಜರೆ, ಕಂಚನಳ್ಳಿ ಗ್ರಾಮದ ಸಣ್ಣಯಲಹಳ್ಳಿ ಮಜರೆ, ಕಿರವತ್ತಿ, ಗ್ರೀನ್ ಸರ್ಕಲ್ ಮಜರೆ, ಕಣ್ಣಿಗೇರಿ ಪಂಚಾಯಿತಿ ವ್ಯಾಪ್ತಿಯ ಕನ್ನಡಗಲ್ ಗ್ರಾಮದ ಹಿಟ್ಟಿನಬೈಲ್ ಮಜರೆ, ಚಂದುಗುಳಿ ಪಂಚಾಯಿತಿ ವ್ಯಾಪ್ತಿಯ ಉಪಳೇಶ್ವರ ಮಜರೆ, ಇಡಗುಂದಿ ಪಂಚಾಯಿತಿ ವ್ಯಾಪ್ತಿಯ ಗುಳ್ಳಾಪುರ ಗ್ರಾಮದ ರಾಮನಗರ ಮಜರೆಗಳಲ್ಲಿ ಜೆಜೆಎಂ ಯೋಜನೆಯಡಿ ಸಂಪರ್ಕ ಪಡೆದ ಮನೆ ಮತ್ತು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿ, ನೀರಿನ ಪೂರೈಕೆ, ಶುದ್ಧತೆ ಮತ್ತು ಉಪಯೋಗದ ಕುರಿತು ಫಲಾನುಭವಿಗಳಿಂದ ಮಾಹಿತಿ ಪಡೆದರು.
ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲು ಉತ್ತಮ ಜಲ ಮೂಲ ಹೊಂದುವುದು ಅವಶ್ಯಕ. ಕೊಳವೆ ಬಾವಿ ಮಾತ್ರದಿಂದ ನೀರಿನ ಬೇಡಿಕೆ ನೀಗಿಸಲು ಕಷ್ಟ. ಹೀಗಾಗಿ ತಾಲೂಕಿನಲ್ಲಿ ಬಹು ಗ್ರಾಮ ಕುಡಿಯುವ ನೀರು ಯೋಜನೆ ಅನುಷ್ಠಾನಕ್ಕೆ ತರಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಯಲ್ಲಾಪುರ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ಧನವಾಡಕರ್, ಸಹಾಯಕ ನಿರ್ದೇಶಕ ಮಂಜುನಾಥ ಆಗೇರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಸತ್ಯಪ್ಪ, ಯಲ್ಲಾಪುರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅಶೋಕ ಬಂಟ, ಜೆಜೆಎಂ ಡಿಪಿಎಂ ವೆಂಕಟೇಶ್ ನಾಯ್ಕ ಮತ್ತಿತರರು ಇದ್ದರು.