ಬಿಜೆಪಿಗೆ ಸಂವಿಧಾನದಡಿ ನಡೆಯುವ ಚುನಾವಣೆಗೆ ಸ್ಪರ್ಧಿಸುವ ಹಕ್ಕಿಲ್ಲ: ಆರ್‌.ವಿ. ದೇಶಪಾಂಡೆ

KannadaprabhaNewsNetwork | Published : Apr 4, 2024 1:00 AM

ಸಾರಾಂಶ

ನಮ್ಮ ಜಿಲ್ಲೆಯಲ್ಲಿ ಲೋಕಸಭೆಗೆ ಸ್ಪರ್ಧಿಸಲು ಮಹಿಳೆಯರಿಗೆ ಅವಕಾಶ ದೊರಕಿದ್ದು ಕಡಿಮೆ. ಡಾ. ಅಂಜಲಿ ನಿಂಬಾಳ್ಕರ್ ಅವರಿಗೆ ಅವಕಾಶ ದೊರಕಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.

ಸಿದ್ದಾಪುರ: ಸಂವಿಧಾನ ಬದಲಾಯಿಸುವ ಕುರಿತು ಹೇಳಿಕೆ ನೀಡುವ ಬಿಜೆಪಿಯವರಿಗೆ ಸಂವಿಧಾನದಡಿ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸುವ ನೈತಿಕ ಹಕ್ಕಿಲ್ಲ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಶಾಸಕ ಆರ್.ವಿ. ದೇಶಪಾಂಡೆ ಟೀಕಿಸಿದರು.

ಪಟ್ಟಣದ ನೆಹರೂ ಮೈದಾನದಲ್ಲಿ ಆಯೋಜಿಸಿದ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ದೇಶದ ಪ್ರಜಾಪ್ರಭುತ್ವವನ್ನು ಬಲಪಡಿಸುವ ಕೆಲಸವಾಗಬೇಕು. ಬಿಜೆಪಿಯ ಕೆಲವರು ಪ್ರಜಾಪ್ರಭುತ್ವಕ್ಕೆ ಪ್ರಶ್ನೆ ಮಾಡುವ ಮಾತನಾಡುತ್ತಾರೆ. ೪೦೦ಕ್ಕೂ ಹೆಚ್ಚು ಸ್ಥಾನ ದೊರೆತರೆ ಸಂವಿಧಾನ ಬದಲಾಯಿಸುವ ಮಾತುಗಳನ್ನು ಆಡುತ್ತಾರೆ. ಮೂರ್ಖತನದಿಂದ ಆಡುವ ಮಾತನಾಡುವವರಿಗೆ ಸಂವಿಧಾನದ ಮೂಲಕ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಇಲ್ಲ. ನಮ್ಮ ಜಿಲ್ಲೆಯಲ್ಲಿ ಲೋಕಸಭೆಗೆ ಸ್ಪರ್ಧಿಸಲು ಮಹಿಳೆಯರಿಗೆ ಅವಕಾಶ ದೊರಕಿದ್ದು ಕಡಿಮೆ. ಡಾ. ಅಂಜಲಿ ನಿಂಬಾಳ್ಕರ್ ಅವರಿಗೆ ಅವಕಾಶ ದೊರಕಿದೆ. ಅವರ ಗೆಲುವಿಗೆ ಕಂಕಣಬದ್ಧರಾಗಿ ಎಂದರು.

ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಮಾತನಾಡಿ, ಬಿಜೆಪಿಯ ಹಲವು ಮುಖಂಡರು ಜನಿಸಿದ್ದು ಕಾಂಗ್ರೆಸ್ ಸರ್ಕಾರ ರೂಪಿಸಿದ ಆಸ್ಪತ್ರೆಗಳಲ್ಲಿ. ಓದಿದ್ದು ಕಾಂಗ್ರೆಸ್ ಸರ್ಕಾರ ಕೊಟ್ಟ ಶಾಲೆಗಳಲ್ಲಿ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಏನು ಮಾಡಿದೆ ಎನ್ನುವುದಕ್ಕೆ ಉತ್ತರ ಇತಿಹಾಸದಲ್ಲಿದೆ. ಯುವಕರು ಮೊಬೈಲ್ ಬಿಟ್ಟು ದೇಶದ ಇತಿಹಾಸದ ಬಗ್ಗೆ ಅರಿಯಬೇಕು. ೧೦ ವರ್ಷ ಸುಳ್ಳಿನಲ್ಲಿ ಆಡಳಿತ ನಡೆಸಿದ ಕೇಂದ್ರ ಸರ್ಕಾರದ ಎದುರು ೧೦ ತಿಂಗಳ ರಾಜ್ಯ ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿದೆ. ನಾನು ಜಿಲ್ಲೆ ಎಲ್ಲ ಅಭಿವೃದ್ಧಿ ಕಾರ್ಯಗಳ ಜತೆಗೆ ಸುಪರ್ ಸ್ಪೆಷಾಲಿಟಿ ಆಸ್ಪತ್ರೆ, ಅರಣ್ಯ ಅತಿಕ್ರಮಣ ಸಮಸ್ಯೆ ನಿವಾರಣೆಗೆ ಮೊದಲು ಆದ್ಯತೆ ನೀಡುತ್ತೇನೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಶಾಸಕ ಭೀಮಣ್ಣ ನಾಯ್ಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ ಮಾತನಾಡಿದರು.

ಪ್ರಮುಖರಾದ ಸತೀಶ ನಾಯ್ಕ, ಬಿ.ಆರ್. ನಾಯ್ಕ, ಆರ್.ಎಂ. ಹೆಗಡೆ, ವಿ.ಎನ್. ನಾಯ್ಕ, ನಾಸೀರ್ ವಲಿಖಾನ್, ಸೀಮಾ ಹೆಗಡೆ ಸೇರಿದಂತೆ ವಿವಿಧ ಸೆಲ್‌ಗಳ ಅಧ್ಯಕ್ಷರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಸ್ವಾಗತಿಸಿದರು.

Share this article