ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆದರೆ ಕಠಿಣ ಕ್ರಮ: ಗ್ರಾಮ ಪಂಚಾಯಿತಿ ಎಚ್ಚರಿಕೆ

KannadaprabhaNewsNetwork |  
Published : Apr 04, 2024, 01:00 AM IST
ಅಧ್ಯಕ್ಷ ವನಜಾಕ್ಷಿ ರೇಣುಕೇಶ್. | Kannada Prabha

ಸಾರಾಂಶ

ನಾಪೋಕ್ಲು ಪಟ್ಟಣದ ಹಳೆ ತಾಲೂಕಿನಿಂದ ಕಾವೇರಿ ನದಿ ಸೇತುವೆ ಬಳಿಯ ವರೆಗೆ ರಸ್ತೆಯ ವಿವಿಧ ಭಾಗಗಳಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಿ ತ್ಯಾಜ್ಯ ತಂದು ಸುರಿಯುವವರನ್ನು ಪತ್ತೆಹಚ್ಚಿ ಅಂತವರಿಗೆ 5 ಸಾವಿರ ರು.ವರೆಗೆ ದಂಡ ವಿಧಿಸಲಾಗುವುದು ಎಂದು ನಾಪೋಕ್ಲು ಗ್ರಾಮ ಪಂಚಾಯಿತಿ ಎಚ್ಚರಿಕೆ ನೀಡಿದೆ.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಪಟ್ಟಣ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಸುರಿದು ಮಾಲಿನ್ಯ ಉಂಟು ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಗ್ರಾಮ ಪಂಚಾಯಿತಿ ಮುಂದಾಗಿದೆ. ಪಟ್ಟಣದ ಹಳೆ ತಾಲೂಕಿನಿಂದ ಕಾವೇರಿ ನದಿ ಸೇತುವೆ ಬಳಿಯ ವರೆಗೆ ರಸ್ತೆಯ ವಿವಿಧ ಭಾಗಗಳಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಿ ತ್ಯಾಜ್ಯ ತಂದು ಸುರಿಯುವವರನ್ನು ಪತ್ತೆಹಚ್ಚಿ ಅಂತವರಿಗೆ 5 ಸಾವಿರ ರು.ವರೆಗೆ ದಂಡ ವಿಧಿಸಲಾಗುವುದು ಎಂದು ಪಂಚಾಯಿತಿ ಎಚ್ಚರಿಕೆ ನೀಡಿದೆ.

ವಿವಿಧ ಭಾಗಗಳಿಗೆ ಪ್ರತಿ ದಿನ ಬೆಳಗ್ಗೆ ಕಸ ವಿಲೇವಾರಿ ವಾಹನ ಹೋಗುತ್ತಿದ್ದರೂ ಕೆಲವರು ಅಂಗಡಿ ಹಾಗೂ ಮನೆಗಳ ತ್ಯಾಜ್ಯವನ್ನು ಪಟ್ಟಣದ ಸಾರ್ವಜನಿಕ ಸ್ಥಳಗಳಲ್ಲಿ ತಂದು ಸುರಿಯುತ್ತಿದ್ದಾರೆ. ಇದನ್ನು ನಿಯಂತ್ರಿಸಲು ಪಂಚಾಯಿತಿ ತ್ಯಾಜ್ಯ ಸುರಿಯದಂತೆ ಎಚ್ಚರಿಕೆಯ ನಾಮಫಲಕ ಅಳವಡಿಸಿದೆ. ಆದರೂ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಪಟ್ಟಣದ ವಿವಿಧ ಸ್ಥಳಗಳಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಲಾಗಿದೆ ಸಾರ್ವಜನಿಕರು ಪಂಚಾಯಿತಿಯ ಕಸ ವಿಲೇವಾರಿ ವಾಹನಕ್ಕೆ ತಮ್ಮ ಮನೆ ಹಾಗೂ ಅಂಗಡಿಗಳ ತ್ಯಾಜ್ಯವನ್ನು ಕೊಟ್ಟು ಸಹಕರಿಸಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ವನಜಾಕ್ಷಿ ರೇಣುಕೇಶ್, ಸದಸ್ಯರಾದ ಶಿವಚಾಳಿಯಂಡ ಜಗದೀಶ್, ಮೊಹಮ್ಮದ್ ಕುರೇಷಿ ತಿಳಿಸಿದ್ದಾರೆ.

ಕಾಡಾನೆ ದಾಳಿ ಸಂತ್ರಸ್ತನ ಮನೆಯವರಿಗೆ ಪರಿಹಾರ ಚೆಕ್ ವಿತರಣೆ:

ಕುಂಜಿಲ ಕಕ್ಕಬೆ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಲಡಿ ಗ್ರಾಮದ ನಿವಾಸಿ ಕಂಬೆಯಂಡ ದೇವಯ್ಯ ಕಾಡಾನೆ ಮಾ.23ರಂದು ಮೃತಪಟ್ಟಿದ್ದರು. ಅವರ ಕುಟುಂಬಸ್ಥರಿಗೆ ಅರಣ್ಯ ಇಲಾಖೆಯಿಂದ ಪರಿಹಾರ ಚೆಕ್‌ ಹಸ್ತಾಂತರಿಸಲಾಯಿತು.

ಅರಣ್ಯ ಇಲಾಖೆಯ ಅಧಿಕಾರಿಗಳು ಮೃತ ದೇವಯ್ಯ ಅವರ ನಾಲಡಿ ಗ್ರಾಮದ ಮನೆಗೆ ಬುಧವಾರ ಭೇಟಿ ನೀಡಿ ಮೃತರ ಪತ್ನಿ ನಳಿನಿ ಮಗ ಅಕ್ಷತ್ ಮುತ್ತಣ್ಣ, ಅವರಿಗೆ 15 ಲಕ್ಷ ರು.ಗಳ ಚೆಕ್‌ ನೀಡಿದರು. ಅವರ ಮನೆಯವರಿಗೆ ಮಾಸಿಕ 4000 ರು. ಪಿಂಚಣಿ ಸೌಲಭ್ಯ ಕಲ್ಪಿಸಲಾಗಿದೆ .ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೊಹಸ್ಸೀನ್ ಬಾಷಾ, ಭಾಗಮಂಡಲ ವಲಯ ಅರಣ್ಯಾಧಿಕಾರಿ ಟಿ.ಎಂ.ರವೀಂದ್ರ, ಉಪವಲಯ ಅರಣ್ಯ ಅಧಿಕಾರಿ ಕಾಳೇಗೌಡ ಅವರ ಉಪಸ್ಥಿತಿಯಲ್ಲಿ ಪರಿಹಾರದ ಚೆಕ್ ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!