ಚಳ್ಳಕೆರೆ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಚುನಾವಣೆ ಬಹಿರಂಗ ಪ್ರಚಾರಕ್ಕೆ ಅಂತಿಮ ದಿನವಾದ ಬುಧವಾರವೂ ಸಹ ಬಿರುಸಿನ ಪ್ರಚಾರ ನಡೆಸಿ ಬಿಜೆಪಿಗೆ ಮತ ನೀಡಿ ಮೋದಿಗೆ ಶಕ್ತಿ ತುಂಬುವಂತೆ ಮತದಾರರಲ್ಲಿ ವಿನಂತಿಸಿದರು.
ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಮಾತನಾಡಿ, ಬಿಜೆಪಿ ಯಾವುದೇ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಎಲ್ಲಾ ವರ್ಗದ ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ನೀಡಬೇಕಾದ ಹಣ ನೀಡಿದರೂ ಸುಳ್ಳು ಜಾಹೀರಾತಿನ ಮೂಲಕ ಜನರನ್ನು ತಪ್ಪುದಾರಿಗೆ ಎಳೆಯುತ್ತಿದೆ. ರಾಜ್ಯದ ಪರಿಶಿಷ್ಟ ಜಾತಿ, ವರ್ಗದ ಜನತೆ ಬಿಜೆಪಿ ಪರವಾಗಿ ಮತಚಾಯಿಸುವಂತೆ ಮನವಿ ಮಾಡಿದರು.
ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಕೆಲ ಮುಖಂಡರು ಗೋವಿಂದ ಕಾರಜೋಳ ಹೊರಗಿನ ಅಭ್ಯರ್ಥಿ ಎಂದು ಪ್ರಚಾರ ಮಾಡುತ್ತಾರೆ. ಆದರೆ, ಬಿ.ಎನ್.ಚಂದ್ರಪ್ಪ ಪಕ್ಕದ ಜಿಲ್ಲೆಯಿಂದ ವಲಸೆ ಬಂದವರು. ಆ ಬಗ್ಗೆ ಮಾತನಾಡದ ಕಾಂಗ್ರೆಸ್ ನಾಯಕರು ಗೋವಿಂದ ಕಾರಜೋಳ ಹೊರಗಡೆಯಿಂದ ಬಂದವರು ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಇಡೀ ಚಿತ್ರದುರ್ಗ ಲೋಕಸಭಾ ಕ್ಷೇತ್ರ ಬಿಜೆಪಿ ಪರವಾಗಿದೆ. ಈ ಬಾರಿ ಜಿಲ್ಲೆಯಿಂದ ಅಭ್ಯರ್ಥಿ ಗೋವಿಂದ ಕಾರಜೋಳ ಸಂಸತ್‌ಗೆ ಪ್ರವೇಶ ಗ್ಯಾರಂಟಿ ಎಂದರು.ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ಶಿವಣ್ಣ, ತಳಕು-ನಾಯಕಹಟ್ಟಿ ಮಂಡಲಾಧ್ಯಕ್ಷ ಈ.ರಾಮರೆಡ್ಡಿ, ಪ್ರಧಾನ ಕಾರ್ಯದರ್ಶಿ ಚನ್ನಗಾನಹಳ್ಳಿ ಮಲ್ಲೇಶ್, ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಆರ್.ಅನಿಲ್ ಕುಮಾರ್, ಕೆ.ಟಿ.ಕುಮಾರಸ್ವಾಮಿ, ಡಾ.ಮಂಜುನಾಥ, ಬೆಂಕಿ ಗೋವಿಂದಪ್ಪ, ಜೆಡಿಎಸ್ ಮುಖಂಡ ವೀರಭದ್ರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್.ಓಬಳೇಶ್, ಮಂಜುನಾಥ ಮುಂತಾದವರು ಭಾಗವಹಿಸಿದ್ದರು.