ಶಿರಹಟ್ಟಿ: ಗ್ಯಾರಂಟಿ ಯೋಜನೆಯ ಹೆಸರಿನಲ್ಲಿ ನಿರಂತರವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಶನಿವಾರ ಶಾಸಕರು ಮತ್ತು ಬಿಜೆಪಿ ಕಾರ್ಯಕರ್ತರು ಪಟ್ಟಣದ ಮಾರುತಿ ದೇವಸ್ಥಾನದಿಂದ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಬಿಜೆಪಿ ಶಿರಹಟ್ಟಿ ಮಂಡಲದ ವತಿಯಿಂದ ನೆಹರು ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಮಾನವ ಸರಪಳಿ ನಿರ್ಮಿಸಿ ಕಾಂಗ್ರೆಸ್ ಸರ್ಕಾರದ ನಡೆ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದರು.ನಂತರ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಉಚಿತ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಬಡವರಿಗೆ ಹಾಗೂ ಅರ್ಹ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ಹೇಳುತ್ತಿರುವ ಕಾಂಗ್ರೆಸ್ ಸರ್ಕಾರ ಶ್ರೀಸಾಮಾನ್ಯರಿಗೆ ಗೊತ್ತಾಗದಂತೆ ಬೆಲೆ ಏರಿಕೆ ಮೂಲಕ ಜನರ ಜೇಬನ್ನು ಬರಿದು ಮಾಡುತ್ತಿದೆ ಎಂದು ಆರೋಪಿಸಿದರು. ಬಸ್ ದರ, ವಿದ್ಯುತ್ ದರ, ಹಾಲು, ಮೊಸರು, ತರಕಾರಿ, ಪೆಟ್ರೋಲ್, ಡೀಸೆಲ್, ಬಿತ್ತನೆ ಬೀಜ, ಅಬಕಾರಿ ಸುಂಕ, ಎಂಜಿನಿಯರಿಂಗ್ ಸೀಟುಗಳ ಶುಲ್ಕ ಸೇರಿದಂತೆ ಇನ್ನೂ ಅನೇಕ ತರದ ಬೆಲೆ ಹೆಚ್ಚಳ ಮಾಡಿ ಶಾಕ್ ನೀಡಿದ್ದು, ಸರ್ಕಾರದ ಈ ನಿರ್ಧಾರ ಜನಾಕ್ರೋಶಕ್ಕೆ ಕಾರಣವಾಗಿದೆ ಎಂದು ದೂರಿದರು.ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಮೂರು ಬಾರಿ ಹಾಲಿನ ದರ ಹೆಚ್ಚಳ ಮಾಡಿದೆ. ₹೯ ಹೆಚ್ಚಳ ಮಾಡಿ ರೈತರಿಗೆ ಲಾಭ ಕೊಟ್ಟರೂ ಗ್ರಾಹಕರ ಮೇಲೆ ಬರೆ ಎಳೆದಿದೆ. ಗೃಹ ಜ್ಯೋತಿ ಯೋಜನೆ ಮೂಲಕ ೨೦೦ ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಆದರೆ ಈಗ ಎಲ್ಲರಿಗೂ ಪ್ರತಿ ಯೂನಿಟ್ಟಿಗೆ ₹ ೩೬ ಪೈಸೆ ಏರಿಕೆ ಮಾಡಲಾಗಿದೆ ಎಂದರು.ಗ್ಯಾರಂಟಿಗಳ ಹೆಸರಿನಲ್ಲಿ ಎಲ್ಲ ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸಿ ಜನರ ಬದುಕು ದುಬಾರಿ ಮಾಡಿದ್ದೇ ಕಾಂಗ್ರೆಸ್ ಸರ್ಕಾರದ ಸಾಧನೆ ಎಂದು ಟೀಕಿಸಿದ ಅವರು, ನೀರು, ಮುದ್ರಾಂಕ ಶುಲ್ಕ, ಆಸ್ತಿ ಮಾರ್ಗಸೂಚಿ ದರ ಇನ್ನಿತರ ಬೆಲೆಗಳ ಏರಿಕೆಗೆ ಮುಂದಾದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಬಿಜೆಪಿ ಕಾರ್ಯಕರ್ತನ ಸಾವಿಗೆ ನ್ಯಾಯ ಸಿಗಬೇಕು ಕೊಡಗು ಜಿಲ್ಲಾ ಬಿಜೆಪಿ ಕಾರ್ಯಕರ್ತ ವಿನಯ ಸೋಮಯ್ಯ ಕಾಂಗ್ರೆಸ್‌ನ ಇಬ್ಬರು ಶಾಸಕರ ವಿರುದ್ಧ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಇವರ ಸಾವಿಗೆ ನ್ಯಾಯ ಸಿಗಬೇಕು. ಅಮಾಯಕರ ಮೇಲೆ ರಾಜಕೀಯ ಪ್ರೇರಿತ ಎಫ್‌ಐಆರ್ ಹಾಕುವುದನ್ನು ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸಿದರು. ಪಕ್ಷದ ತಾಲೂಕು ಘಟಕದ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಕ್ಕಿರೇಶ ರಟ್ಟಿಹಳ್ಳಿ, ನಾಗರಾಜ ಲಕ್ಕುಂಡಿ, ನಾಗರಾಜ ಕುಲಕರ್ಣಿ, ತಿಮ್ಮರಡ್ಡಿ ಮರಡ್ಡಿ, ಮೋಹನ್ ಗುತ್ತೆಮ್ಮನವರ, ಬಿ.ಡಿ. ಪಲ್ಲೇದ, ಸಂತೋಷ ಓಬಾಜಿ, ಹಾಲಪ್ಪ ಸೂರಣಗಿ, ನಂದಾ ಪಲ್ಲೇದ ಮಾತನಾಡಿದರು. ಮುಖಂಡ ಜಾನು ಲಮಾಣಿ, ಅಶೋಕ ವರವಿ, ಬಸವರಾಜ ಪೂಜಾರ, ತಿಪ್ಪಣ್ಣ ಲಮಾಣಿ, ಪ್ರವೀಣಗೌಡ ಪಾಟೀಲ, ಯಲ್ಲಪ್ಪ ಇಂಗಳಗಿ, ಮಹೇಶ ಬಡ್ನಿ, ಪರಶುರಾಮ ಡೊಂಕಬಳ್ಳಿ, ಬಸವರಾಜ ವಡವಿ, ಸಂದೇಶ ಗಾಣಗೇರ, ಶಿವಣ್ಣ ಲಮಾಣಿ, ಬಸವರಾಜ ನಾಯ್ಕರ್, ಬಸವರಾಜ ತುಳಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಇದ್ದರು. ಪಿಎಸ್‌ಐ ಚೆನ್ನಯ್ಯ ದೇವೂರ ಹಾಗೂ ಸಿಬ್ಬಂದಿ ಬಂದೋಬಸ್ತ್ ಕೈಗೊಂಡಿದ್ದರು.