ಸಿದ್ದು ಸರ್ಕಾರದ ವಿರುದ್ಧ ಬಿಜೆಪಿ ಬೃಹತ್‌ ಪ್ರತಿಭಟನೆ

KannadaprabhaNewsNetwork |  
Published : Dec 10, 2025, 01:00 AM IST
ಬಿಜೆಪಿ ಪ್ರತಿಭಟನೆ. | Kannada Prabha

ಸಾರಾಂಶ

ರಾಜ್ಯದ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನಿಲುವು ಅನುಸರಿಸುತ್ತಿದೆ ಎಂದು ಆರೋಪಿಸಿ ಬೆಳಗಾವಿಯಲ್ಲಿ ಮಂಗಳವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಬಿಜೆಪಿ ನಾಯಕರು, ರೈತರು ಬೃಹತ್ ಪ್ರತಿಭಟನೆ ನಡೆಸಿದರು.

 ಬೆಳಗಾವಿ :  ರಾಜ್ಯದ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನಿಲುವು ಅನುಸರಿಸುತ್ತಿದೆ ಎಂದು ಆರೋಪಿಸಿ ಬೆಳಗಾವಿಯಲ್ಲಿ ಮಂಗಳವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಬಿಜೆಪಿ ನಾಯಕರು, ರೈತರು ಬೃಹತ್ ಪ್ರತಿಭಟನೆ ನಡೆಸಿದರು. ಬಳಿಕ, ಪ್ರತಿಭಟನಾಕಾರರು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ಅವರನ್ನು ತಡೆದು, ವಶಕ್ಕೆ ಪಡೆದು, ಬಳಿಕ ಬಿಡುಗಡೆ ಮಾಡಿದರು.

ಮಂಗಳವಾರ ಬೆಳಗ್ಗೆ ನಗರದ ಯಡಿಯೂರಪ್ಪ‌ ಮಾರ್ಗದ ಮಾಲಿನಿ ಸಿಟಿ ಮೈದಾನದಲ್ಲಿ ಪ್ರತಿಭಟನಾ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಭ್ರಷ್ಟ ಸರ್ಕಾರ ತೊಲಗುವವರೆಗೂ ಬಿಜೆಪಿ ತನ್ನ ಹೋರಾಟ ಮುಂದುವರಿಸಲಿದೆ ಎಂದು ಘೋಷಿಸಿದರು. ಹಸಿರು ಟವೆಲ್‌ಗಳನ್ನು ಗಾಳಿಯಲ್ಲಿ ತಿರುಗಿಸುತ್ತಾ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಮಾವೇಶದ ಬಳಿಕ, ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಾಯಕರು ಪಾದಯಾತ್ರೆಯಲ್ಲಿ ತೆರಳಿದರು. ಸುಮಾರು 3 ಕಿ.ಮೀ.ದೂರ ಹೆದ್ದಾರಿಯಲ್ಲಿ ಕ್ರಮಿಸಿ, ನಂತರ, ಸರ್ವಿಸ್‌ ರಸ್ತೆಗೆ ಆಗಮಿಸಿದರು. ಈ ವೇಳೆ, ನೂರಾರು ಕಾರ್ಯಕರ್ತರನ್ನು ಧಾರವಾಡ ನಾಕಾದಲ್ಲೇ ತಡೆ ಹಿಡಿದ ಪೊಲೀಸರು, ಕೆಲವರಿಗಷ್ಟೆ ಮುಂದೆ ಸಾಗಲು ಅನುಮತಿ ನೀಡಿದರು. ಬಳಿಕ, ಪ್ರತಿಭಟನಾಕಾರರು ಹಲಗಾ ಬಳಿ ಬರುತ್ತಿದ್ದಂತೆ ಪೊಲೀಸರು ಬ್ಯಾರಿಕೇಡ್‌ ಹಾಕಿ ಅವರನ್ನು ತಡೆದರು. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ಕಿತ್ತು, ಸೌಧದತ್ತ ನುಗ್ಗಲು ಯತ್ನಿಸಿದರು. ಈ ವೇಳೆ, ಪೊಲೀಸರು ಮತ್ತು ಪ್ರತಿಭಟನಾನಿರತ ನಾಯಕರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ, ಬಿ.ವೈ.ವಿಜಯೇಂದ್ರ, ಸಿ.ಟಿ.ರವಿ, ಬಾಲಚಂದ್ರ ಜಾರಕಿಹೊಳಿ, ಎ.ಎಸ್.ಪಾಟೀಲ ನಡಹಳ್ಳಿ, ಅಭಯ ಪಾಟೀಲ, ಎಂ.ಪಿ.ರೇಣುಕಾಚಾರ್ಯ ಸೇರಿ ಪ್ರತಿಭಟನಾನಿರತ ನಾಯಕರನ್ನು ಪೊಲೀಸರು ವಶಕ್ಕೆ ಪಡೆದು, ಪೊಲೀಸ್ ವಾಹನದಲ್ಲಿ ಅಲ್ಲಿಂದ ಕರೆದೊಯ್ದರು. ಈ ವೇಳೆ, ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಕೋಟ್ಸ್‌:

ಕಾಂಗ್ರೆಸ್ ಸರ್ಕಾರ ಸತ್ತು ಹೋಗಿದೆ: ಅಶೋಕ್‌

ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆ, ಮಾನ-ಮರ್ಯಾದೆ ಇದೆಯಾ?. ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ. ಬೆಳಗಾವಿ ವಿಮಾನ ನಿಲ್ದಾಣಕ್ಕೆ ಹೋಗುವಾಗ ಎಂಎಲ್​ಸಿ ಚನ್ನರಾಜ ಹಟ್ಟಿಹೊಳಿ ಅವರು ಸಿದ್ದರಾಮಯ್ಯಗೆ ನೀವು ಮುಖ್ಯಮಂತ್ರಿ ಅಲ್ಲ ಎಂದು ಹೇಳುತ್ತಾರೆ. ಸಿಎಂ ಡಿ.ಕೆ.ಶಿವಕುಮಾರ ಅವರ ಸ್ವಾಗತಕ್ಕೆ ವಿಮಾನ‌ ನಿಲ್ದಾಣಕ್ಕೆ ಹೋಗುತ್ತಿದ್ದೇನೆ ಅಂತ ಟ್ವೀಟ್​ ಮಾಡುತ್ತಾರೆ. ಸಿದ್ದರಾಮಯ್ಯನವರೇ, ಇದಕ್ಕಿಂತ ಬೇರೆ ಮರ್ಯಾದೆ ನಿಮಗೆ ಬೇಕಾ?.

- ಆರ್‌.ಅಶೋಕ್‌, ವಿಧಾನಸಭೆ ವಿಪಕ್ಷ ನಾಯಕ

ಜನ ಹೊಡೆಯುತ್ತಾರೆಂಬ ಭಯ: ವಿಜಯೇಂದ್ರ

ಮುಖ್ಯಮಂತ್ರಿ, ಸಚಿವರು ಈಗ ಹೆಲಿಕಾಪ್ಟರ್​​ನಲ್ಲಿ ಓಡಾಡುತ್ತಿದ್ದಾರೆ. ಏಕೆಂದರೆ ಜನ ಹೊಡೆಯುತ್ತಾರೆ ಎಂಬ ಭಯ ಅವರಿಗೆ. ಹಿಂದೆ, ರಾಜ್ಯದಲ್ಲಿ ಎಲ್ಲೇ ರೈತ ಹೋರಾಟ ನಡೆದರೂ ಯಡಿಯೂರಪ್ಪ ಅವರು ಆ ಸ್ಥಳಕ್ಕೆ ಹೋಗುತ್ತಿದ್ದರು. ಹಗಲು-ರಾತ್ರಿ ರೈತಪರ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ, ಈಗ ರೈತರ ಗೋಳನ್ನು ಕೇಳುವವರಿಲ್ಲ. ರಾಜ್ಯದಲ್ಲಿ ರೈತರ ಹೋರಾಟವಾಗಲಿ, ರೈತರು ಎಲ್ಲೇ ಸಂಕಷ್ಟದಲ್ಲಿರಲಿ ಬಿಜೆಪಿಯ ಈ ವಿಜಯೇಂದ್ರ ಅಲ್ಲಿರುತ್ತಾರೆ.

- ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ 

ರಾಜಕೀಯ ಲಾಭಕ್ಕಾಗಿ ರೈತರ ಹೆಸರಲ್ಲಿ ಬಿಜೆಪಿ ಪ್ರತಿಭಟನೆ-ಕೈ:ಕಬ್ಬು, ಮೆಕ್ಕೆಜೋಳ ಬೆಲೆ ಕುಸಿತ ಸೇರಿ ರೈತರ ಸಮಸ್ಯೆ ಮುಂದಿಟ್ಟುಕೊಂಡು ಬಿಜೆಪಿ ಪ್ರತಿಭಟನೆಗೆ ಕಾಂಗ್ರೆಸ್‌ ಶಾಸಕರು, ಸಚಿವರು ತೀವ್ರವಾಗಿ ಟೀಕಿಸಿದ್ದು, ರೈತರ ಬಗ್ಗೆ ಕಾಳಜಿಗಿಂತ ರಾಜಕೀಯ ಲಾಭಕ್ಕಾಗಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜವಳಿ ಸಚಿವ ಶಿವಾನಂದ ಪಾಟೀಲ್‌, ಬಿಜೆಪಿ ನಾಯಕರಿಗೆ ರೈತರ ಬಗ್ಗೆ ಕಾಳಜಿಯಿಲ್ಲ. ಅವರಿಗೆ ಕಾಳಜಿ ಇದ್ದರೆ ಇಡೀ ದೇಶದಲ್ಲಿ ರೈತರ ಪರಿಸ್ಥಿತಿ ಹೀಗಾಗುತ್ತಿರಲಿಲ್ಲ ಎಂದರು. 

ಕಾನೂನು ಸಚಿವ ಎಚ್‌.ಕೆ.ಪಾಟೀಲ್‌ ಮಾತನಾಡಿ, ಬಿಜೆಪಿ ನಾಯಕರು ಯಾವ ನೈತಿಕತೆಯಿಂದ ಪ್ರತಿಭಟನೆ ಮಾಡುತ್ತಿದ್ದಾರೆ ತಿಳಿದಿಲ್ಲ ಎಂದರು.ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಮಾತನಾಡಿ, ವಿರೋಧ ಪಕ್ಷ ಇರುವುದೇ ಪ್ರತಿಭಟನೆ ಮಾಡುವುದಕ್ಕೆ. ಅವರು ಯಾವ ವಿಚಾರ ತೆಗೆದುಕೊಂಡು ಪ್ರತಿಭಟನೆ ಮಾಡುತ್ತಾರೆ ಎನ್ನುವುದು ಮುಖ್ಯ. ಅದು ರಾಜಕೀಯವೋ ಅಥವಾ ಸಾರ್ವಜನಿಕ ಹಿತಾಸಕ್ತಿಯೋ, ಜನರನ್ನು ಮೆಚ್ಚಿಸಲು ಮಾಡುತ್ತಾರೋ ಗೊತ್ತಿಲ್ಲ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ಬಿಜೆಪಿ ಪ್ರತಿಭಟಿಸಲು ಬೇಡ ಎಂದರ್‍ಯಾರು? ರೈತರ ಬಗ್ಗೆ ಪಾಪ ಅವರಿಗೆ ಕರುಣೆ ಬಂದಿದೆ. ಕಾಂಗ್ರೆಸ್‌ ಪಕ್ಷ ಯಾವತ್ತೂ ರೈತರ ಪರ. ಬಿಜೆಪಿ ಅವರು ರೈತರ ಪರ ಏನು ಮಾಡಿದ್ದಾರೆ ಎಂದು ಪಟ್ಟಿ ಬಿಡುಗಡೆ ಮಾಡಲಿ. ರೈತರ ಹೆಸರಲ್ಲಿ ರಾಜಕೀಯ ಮಾಡುವ ಬಿಜೆಪಿ ಅವರಿಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನಾದರೂ ಬಿಜೆಪಿಯವರು ರೈತರ ಹೆಸರಲ್ಲಿ ರಾಜಕೀಯ ಮಾಡುವುದು ಬಿಡಲಿ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಒಂದು ಟನ್‌ ಕಬ್ಬಿಗೆ 200ರಿಂದ 300 ರು. ಹೆಚ್ಚಿಸಿದೆ. ಇದು ರೈತರಿಗೆ ತಿಳಿದಿದೆ. ರೈತರಿಗೆ ಅನ್ಯಾಯವಾಗಿರುವುದು ಬಿಜೆಪಿಯಿಂದ ಎಂದು ರೈತರೇ ಹೇಳುತ್ತಿದ್ದಾರೆ. ಜನರನ್ನು ಸೇರಿಸಿದರೆ ರೈತರನ್ನು ಸೇರಿಸಿದ ಹಾಗಾಗುವುದಿಲ್ಲ. ಬಿಜೆಪಿ ನಾಯಕರು ನಮ್ಮ ವಿರುದ್ಧವಲ್ಲ, ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಲಿರಾಜಕೀಯಕ್ಕಾಗಿ ಮಾತ್ರ ಪ್ರತಿಭಟನೆ ಮಾಡಲಾಗುತ್ತಿದೆ. ರಾಜ್ಯ ಸರ್ಕಾರದ ಪ್ರಯತ್ನದಿಂದ ಮೆಕ್ಕೆಜೋಳ, ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರವಾಗಿದೆ. ಕೇಂದ್ರ ಸರ್ಕಾರದ ಲೋಪದಿಂದ ರೈತರಿಗೆ ಸಮಸ್ಯೆಯಾಗುತ್ತಿದೆ. ಆ ಬಗ್ಗೆಯೂ ಬಿಜೆಪಿ ನಾಯಕರು ಮಾತನಾಡಲಿ ಎಂದು ತಿಳಿಸಿದರು.

ಬಿಜೆಪಿ ಕೃಷಿ ಕಾರ್ಮಿಕರ ಪರ ಇಲ್ಲ:

ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಮಾತನಾಡಿ, ವಿರೋಧ ಪಕ್ಷ ಇರುವುದೇ ಪ್ರತಿಭಟನೆ ಮಾಡುವುದಕ್ಕೆ. ಅವರು ಯಾವ ವಿಚಾರ ತೆಗೆದುಕೊಂಡು ಪ್ರತಿಭಟನೆ ಮಾಡುತ್ತಾರೆ ಎನ್ನುವುದು ಮುಖ್ಯ. ಅದು ರಾಜಕೀಯವೋ ಅಥವಾ ಸಾರ್ವಜನಿಕ ಹಿತಾಸಕ್ತಿಯೋ, ಜನರನ್ನು ಮೆಚ್ಚಿಸಲು ಮಾಡುತ್ತಾರೋ ಗೊತ್ತಿಲ್ಲ. ಬಿಜೆಪಿ ಹಳ್ಳಿ, ಕೃಷಿ ಕಾರ್ಮಿಕರ ಪರ ಇರುವ ಪಕ್ಷವಲ್ಲ. ಅದರ ಇತಿಹಾಸ ನೋಡಿದರೆ ರೈತರ ಪರವಾದ ಪಕ್ಷವಲ್ಲ. ಅವರ ಕಾರ್ಯಕ್ರಮಗಳೇ ಬೇರೆ. ಇರುವ ರೈತರ ಪರ ಹೋರಾಟ ಮಾಡುತ್ತೇವೆ ಎಂದರೆ, ಅವರ ಸಮಸ್ಯೆಗಳೇನು? ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಏನೇನು ಪರಿಹಾರ ನೀಡಬೇಕು ಎಂದು ವಿಂಗಡಿಸಿ ಹೇಳಬೇಕು. ಇಲ್ಲವಾದರೆ, ಈ ಪ್ರತಿಭಟನೆ ರಾಜಕೀಯಕೋಸ್ಕರ ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.

ಕಾಂಗ್ರೆಸ್‌ ಯಾವತ್ತೂ ರೈತರ ಪರ:

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ಬಿಜೆಪಿ ಪ್ರತಿಭಟಿಸಲು ಬೇಡ ಎಂದರ್‍ಯಾರು? ರೈತರ ಬಗ್ಗೆ ಪಾಪ ಅವರಿಗೆ ಕರುಣೆ ಬಂದಿದೆ. ಕಾಂಗ್ರೆಸ್‌ ಪಕ್ಷ ಯಾವತ್ತೂ ರೈತರ ಪರ. ಬಿಜೆಪಿ ಅವರು ರೈತರ ಪರ ಏನು ಮಾಡಿದ್ದಾರೆ ಎಂದು ಪಟ್ಟಿ ಬಿಡುಗಡೆ ಮಾಡಲಿ. ರೈತರ ಹೆಸರಲ್ಲಿ ರಾಜಕೀಯ ಮಾಡುವ ಬಿಜೆಪಿ ಅವರಿಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ರೈತರ ಬಗ್ಗೆ ಕಾಳಜಿಯಿದೆ ಎಂದು ತೋರಿಸಲು ಬಿಜೆಪಿ ಪ್ರತಿಭಟನೆ ನಾಟಕವಾಡುತ್ತಿದೆ. ಬಿ.ಎಸ್‌.ಯಡಿಯೂರಪ್ಪ ಸಿಎಂ ಆಗಿದ್ದಾಗ ರೈತರ ಮೇಲೆ ಗೋಲಿಬಾರ್‌ ಮಾಡಿಸಿದ್ದರು. ಅಪ್ಪ ಶೂಟೌಟ್‌ ಮಾಡಿಸುವುದು, ಮಗ ರೈತರ ಪರ ಹೋರಾಟಕ್ಕೆ ಬಂದಿದ್ದಾರೆ. ಈ ಹೋರಾಟ ಯಾವ ಉದ್ದೇಶಕ್ಕೆ? ವಿಧಾನಸೌಧದಲ್ಲಿ ಚರ್ಚೆ ಮಾಡಲಿ. ಸರ್ಕಾರದ ತಪ್ಪಿದ್ದರೆ ಹೇಳಲಿ. ರೈತರನ್ನು ಕರೆತಂದು ಮುತ್ತಿಗೆ ಹಾಕುತ್ತೇವೆ ಎಂದು ಹೇಳುವುದು ಸರಿಯಲ್ಲ. ನಮ್ಮ ಸರ್ಕಾರ ರೈತರ ಪರವಾಗಿದೆ ಎಂದು ಹೇಳಿದರು.

ಅಧಿವೇಶನ ಹೊರಗೆ ಪ್ರತಿಭಟನೆಗಳ ಭರಾಟೆ:ವಿಧಾನಮಂಡಲ ಚಳಿಗಾಲದ ಅಧಿವೇಶನದ 2ನೇ ದಿನ ಸಾಲು ಸಾಲು ಪ್ರತಿಭಟನೆಗಳು ನಡೆದವು. ಬಿಜೆಪಿ ಸೇರಿದಂತೆ ಒಟ್ಟು 9 ವಿವಿಧ ಸಂಘಟನೆಗಳು ತಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿವೆ.

ಸುವರ್ಣ ವಿಧಾನಸೌಧ ಸಮೀಪದ ಸುವರ್ಣ ಗಾರ್ಡನ್ ಟೆಂಟ್‌ನಲ್ಲಿ ಪ್ರತಿಭಟನೆಗಳ ಕಾವು ಜೋರಾಗಿತ್ತು. ರಾಜ್ಯ ಸರ್ಕಾರ ರೈತರಿಗೆ ಮಾರಕವಾಗಿರುವ ಮೂರು ಕೃಷಿ ಮಸೂದೆಯನ್ನು ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಹಲಗಾ ರಾಷ್ಟ್ರೀಯ ಹೆದ್ದಾರಿಯ ಬಳಿಯ ಸರ್ವೀಸ್ ರಸ್ತೆ ತಡೆ ನಡೆಸಿದರು. ಕರ್ನಾಟಕ ರಾಜ್ಯ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕರ ಸಂಘದಿಂದ‌ ದ್ವಿಭಾಷಾ ನೀತಿ ಕೈಬಿಟ್ಟು ತ್ರಿಭಾಷಾ ನೀತಿ ಮುಂದುವರಿಕೆಗೆ, ಖಾಲಿ ಹುದ್ದೆಗಳ ನೇಮಕಾತಿ, ಹಳೆಯ ನಿವೃತ್ತಿ ವೇತನ‌ ಜಾರಿಗೆ ಆಗ್ರಹಿಸಿ ನೌಕರರ ಸಂಘ ಪ್ರತಿಭಟನೆ ನಡೆಸಿತು.

ಅಕ್ರಮ ಸಕ್ರಮದಡಿ ಭೂಮಿ ಮಂಜೂರಾತಿಗಾಗಿ ನೇಗಿಲಯೋಗಿ ರೈತ ಸಂಘವು ಪ್ರತಿಭಟಿಸಿ ಮೆಕ್ಕೆಜೋಳ ಖರೀದಿ ಕೇಂದ್ರ ಕನಿಷ್ಠ ₹2400 ಬೆಲೆ‌ಗೆ ಆಗ್ರಹಿಸಿತು. ಅತಿವೃಷ್ಟಿ- ಅನಾವೃಷ್ಟಿ ಬೆಳೆಹಾನಿಗೆ ಪ್ರತಿ ಎಕರೆಗೆ 30 ಸಾವಿರ ಪರಿಹಾರ ಘೋಷಣೆ ಮಾಡಬೇಕು ಎಂದು ಕೆಆರ್‌ಎಸ್ ಪಕ್ಷದಿಂದ ಪ್ರತಿಭಟನೆ ನಡೆಯಿತು. ಎಐಯುಟಿಯುಸಿ ನೇತೃತ್ವದಲ್ಲಿ ಸರ್ಕಾರದ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡೋರನ್ನು ಕಾಯಂ ಮಾಡಬೇಕೆಂದು ಒತ್ತಾಯಿಸಿತು.ಅದರಂತೆ ಕರ್ನಾಟಕ ರಾಜ್ಯ ಪಂಚಾಯಿತಿ ಮಹಾ ಒಕ್ಕೂಟದ ನೇತೃತ್ವದಲ್ಲಿ 15ನೇ ಹಣಕಾಸು ಯೋಜನೆಗೆ ಅನುದಾನ ಬಿಡುಗಡೆ ಮಾಡಬೇಕುಗೆ ಆಗ್ರಹಿಸಲಾಯಿತು. ಮಡಿವಾಳ ಸಮಾಜವನ್ನು ಎಸ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿ ಮಡಿವಾಳ ಸಮಾಜದಿಂದ ಪ್ರತಿಭಟನೆ ನಡೆದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಕುಸಿದ ಕರ್ನಾಟಕ ಕ್ರಿಕೆಟ್‌ ಗುಣಮಟ್ಟ - ಈ ಸಲ 7 ಟಿ20ಯಲ್ಲಿ ಗೆದ್ದಿದ್ದು ಕೇವಲ 2
ಬುರುಡೆ ಕೇಸ್‌ ಹಿಂದೆ ಅರ್ಬನ್‌ ನಕ್ಸಲ್‌ : ಬಿಜೆಪಿ