ಹಾವೇರಿ ಜಿಲ್ಲೆಯಲ್ಲಿ ಅನ್ನ ಸುವಿಧಾ ಯೋಜನೆಗೆ ಉತ್ತಮ ಸ್ಪಂದನೆ

KannadaprabhaNewsNetwork |  
Published : Dec 10, 2025, 01:00 AM IST
ಪೋಟೋ ಇದೆ. | Kannada Prabha

ಸಾರಾಂಶ

75 ವರ್ಷಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರು ಇರುವ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿದಾರರ ಕುಟುಂಬಗಳಿಗೆ ಮನೆ ಬಾಗಿಲಿಗೆ ರೇಶನ್ ವಿತರಿಸುವ ಅನ್ನ ಸುವಿಧಾ ಯೋಜನೆಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ ಹಾವೇರಿ

75 ವರ್ಷಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರು ಇರುವ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿದಾರರ ಕುಟುಂಬಗಳಿಗೆ ಮನೆ ಬಾಗಿಲಿಗೆ ರೇಶನ್ ವಿತರಿಸುವ ಅನ್ನ ಸುವಿಧಾ ಯೋಜನೆಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಈ ಯೋಜನೆ ಅಡಿಯಲ್ಲಿ 7 ಸಾವಿರಕ್ಕೂ ಹೆಚ್ಚು ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಈ ಪೈಕಿ ಮೊದಲ ತಿಂಗಳಲ್ಲೇ 400ಕ್ಕೂ ಹೆಚ್ಚು ಫಲಾನುಭವಿಗಳಿಂದ ಒಪ್ಪಿಗೆ ಪತ್ರ ಪಡೆಯಲಾಗಿದೆ.ವಯೋವೃದ್ಧರು ರೇಶನ್ ಅಂಗಡಿಗೆ ತೆರಳಿ ಸರದಿಯಲ್ಲಿ ನಿಂತು ಪಡಿತರ ಪಡೆಯುವುದು, ಅವುಗಳನ್ನು ಹೊತ್ತು ಮನೆಗೆ ತರುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಕಳೆದ ಬಜೆಟ್‌ನಲ್ಲಿ ಅನ್ನ ಸುವಿಧಾ ಯೋಜನೆಯನ್ನು ಘೋಷಿಸಿದೆ. ಗ್ರಾಮೀಣ ಭಾಗದಲ್ಲಿ ಸರ್ವರ್ ಸಮಸ್ಯೆಯಿಂದ, ಇನ್ನು ಕೆಲವು ಸಲ ಪಡಿತರಕ್ಕಾಗಿ ದಿನವಿಡೀ ಕಾಯುವ ಅನಿವಾರ್ಯತೆ ಎದುರಾಗುತ್ತಿದೆ. ಅಲ್ಲದೇ ಕಿಲೋಮೀಟರ್‌ಗಟ್ಟಲೆ ದೂರವಿರುವ ಪಡಿತರ ಅಂಗಡಿಗೆ ತಲುಪುವುದೇ ವಯೋವೃದ್ಧರಿಗೆ ಸವಾಲಾಗಿದೆ. ಹಿರಿಯರ ಅನುಕೂಲಕ್ಕಾಗಿ ರೂಪಿಸಿದ ಈ ಯೋಜನೆ ಅನುಷ್ಠಾನಗೊಂಡಿದ್ದು, ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ದೊರೆತಿದೆ.

ಯೋಜನೆಯಡಿ ಕೇವಲ 75 ವರ್ಷ ಮೇಲ್ಪಟ್ಟ ವೃದ್ಧರು ಮಾತ್ರ ಇರುವ ಕುಟುಂಬಗಳಿಗೆ ಸಂಬಂಧಪಟ್ಟ ಪಡಿತರ ಅಂಗಡಿಯವರು ಮನೆ ಬಾಗಿಲಿಗೇ ತೆರಳಿ ಪಡಿತರ ವಿತರಣೆ ಮಾಡಲಿದ್ದಾರೆ.ಯೋಜನೆ ಅನುಷ್ಠಾನ: ಯೋಜನೆಯಡಿ ರಾಜ್ಯಾದ್ಯಂತ ಒಟ್ಟು 2,58,154 ಫಲಾನುಭವಿಗಳನ್ನು ಗುರುತಿಸಲಾಗಿದೆ. ಪಡಿತರ ಅಂಗಡಿಯವರಿಗೆ ಸಾಮಾನ್ಯವಾಗಿ ಕೊಡುವ ಕಮಿಷನ್ ಜತೆಗೆ ಪ್ರತಿ ಮನೆಗೆ ಪಡಿತರ ವಿತರಣೆಗೆ ₹50 ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ₹15.48 ಕೊಟಿ ಹೆಚ್ಚು ಅನುದಾನವನ್ನು ಕಾಯ್ದಿರಿಸಲಾಗಿದೆ. ಕಳೆದ ಅಕ್ಟೋಬರ್ ತಿಂಗಳಿಂದ ಯೊಜನೆಯ ಅನುಷ್ಠಾನ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಪಡಿತರ ಅಂಗಡಿಕಾರರು ಪ್ರತಿ ಫಲಾನುಭವಿಗಳ ಮನೆಗೆ ತೆರಳಿ ಮನೆ ಬಾಗಿಲಿಗೆ ಪಡಿತರ ವಿತರಿಸುವ ನಿಟ್ಟಿನಲ್ಲಿ ಒಪ್ಪಿಗೆ ಪತ್ರ ಪಡೆಯಬೇಕಿದ್ದು ಪ್ರತಿ ತಿಂಗಳು 1-5ನೇ ತಾರೀಖಿನ ಒಳಗೆ ಈ ಪ್ರಕ್ರಿಯೆ ಮುಗಿಸಬೇಕಿದೆ. ಬಳಿಕ 6-15ನೇ ತಾರೀಖಿನ ಒಳಗೆ ಪಡಿತರ ವಿತರಣೆ ಮಾಡುತ್ತಾರೆ. ಉತ್ತಮ ಸ್ಪಂದನೆ: ಹಾವೇರಿ ಜಿಲ್ಲೆಯಲ್ಲಿ 75 ವರ್ಷಕ್ಕೂ ಮೇಲ್ಪಟ್ಟ ಅಂತ್ಯೋದಯ ಮತ್ತು ಬಿಪಿಎಲ್ ಸೇರಿ ಒಟ್ಟು 7211 ಫಲಾನುಭವಿಗಳನ್ನು ಗುರುತಿಸಲಾಗಿದೆ. ಈ ಪೈಕಿ 447 ಫಲಾನುಭವಿಗಳು ಈಗಾಗಲೇ ಒಪ್ಪಿಗೆ ಪತ್ರ ನೀಡಿದ್ದು, ಪಡಿತರ ಸಂಗ್ರಹ ಇರುವ ಅಂಗಡಿಕಾರರು ಈಗಾಗಲೇ ಪಡಿತರ ವಿತರಣೆ ಆರಂಭಿಸಿದ್ದಾರೆ.

ಪಡಿತರ ಅಂಗಡಿಕಾರರಿಗೆ ಕಿರಿಕಿರಿ: ಅನ್ನ ಸುವಿಧಾ ಯೋಜನೆಯ ಫಲಾನುಭವಿಗಳಿಂದ ಸಂಬಂಧಪಟ್ಟ ಪಡಿತರ ಅಂಗಡಿಕಾರರೇ ಒಪ್ಪಿಗೆ ಪತ್ರ ಪಡೆಯಬೇಕಿದೆ. ಇದು ಒಂದು ಸಲ ಕೈಗೊಳ್ಳುವ ಕೆಲಸವಲ್ಲ, ಬದಲಿಗೆ ಪ್ರತಿ ತಿಂಗಳೂ ಆರಂಭದ ಐದು ದಿನ ಒಪ್ಪಿಗೆ ಪತ್ರಕ್ಕಾಗಿ ಓಡಾಡಬೇಕು. ಫಲಾನುಭವಿಗಳು ಮನೆಯಲ್ಲಿ ಇಲ್ಲದಿದ್ದರೆ ಒಂದೇ ಮನೆಗೆ 2-3 ಸಲ ತಿರುಗಾಡುವ ಅನಿವಾರ್ಯತೆಯೂ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ಒಪ್ಪಿಗೆ ಪತ್ರದ ನಿಯಮಗಳನ್ನು ಇನ್ನಷ್ಟು ಸರಳೀಕರಣಗೊಳಿಸಬೇಕು. ಒಮ್ಮೆ ಒಪ್ಪಿಗೆ ಪತ್ರ ಪಡೆದರೆ ಮುಂದಿನ ತಿಂಗಳಿಂದ ರೇಶನ್‌ ಸಾಮಗ್ರಿ ನೀಡಿ ಸರಳೀಕರಣ ಮಾಡಬೇಕು ಎಂಬುದು ಪಡಿತರ ಅಂಗಡಿಕಾರರ ಆಗ್ರಹವಾಗಿದೆ.ತಾಲೂಕು ಫಲಾನುಭವಿಗಳು: ಬ್ಯಾಡಗಿ 681, ಹಾನಗಲ್ಲ 1268, ಹಾವೇರಿ 1429, ಹಿರೇಕೆರೂರು 668,ರಾಣಿಬೆನ್ನೂರ 1144, ಸವಣೂರು 674, ಶಿಗ್ಗಾಂವಿ 800, ರಟ್ಟಿಹಳ್ಳಿ 547, ಒಟ್ಟು 7211.

ಜಿಲ್ಲೆಯಲ್ಲಿ ಅನ್ನ ಸುವಿಧಾ ಯೋಜನೆಯಡಿ 7 ಸಾವಿರಕ್ಕೂ ಹೆಚ್ಚು ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಇವರಲ್ಲಿ 447 ಫಲಾನುಭವಿಗಳಿಂದ ಒಪ್ಪಿಗೆ ಪಡೆಯಲಾಗಿದೆ. 75 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಮಾತ್ರ ಇರುವ ಕುಟುಂಬಗಳ ಅರ್ಹ ಪಡಿತರ ಕಾರ್ಡ್‌ದಾರರು ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ಉಪನಿರ್ದೇಶಕ ಮಂಜುನಾಥ ಡಿ.ಜೆ.ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಸಿದ ಕರ್ನಾಟಕ ಕ್ರಿಕೆಟ್‌ ಗುಣಮಟ್ಟ - ಈ ಸಲ 7 ಟಿ20ಯಲ್ಲಿ ಗೆದ್ದಿದ್ದು ಕೇವಲ 2
ಬುರುಡೆ ಕೇಸ್‌ ಹಿಂದೆ ಅರ್ಬನ್‌ ನಕ್ಸಲ್‌ : ಬಿಜೆಪಿ