ಧಾರವಾಡ:
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಯೋಜನೆ ಕುರಿತು ಮತ್ತಷ್ಟು ವಿಸ್ಕೃತ ಚರ್ಚೆ ನಡೆಯಿತು. ಸಭೆಯಲ್ಲಿ ಶಾಸಕರಾದ ಎನ್.ಎಚ್. ಕೋನರಡ್ಡಿ, ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ, ಜಿಲ್ಲಾಧಿಕಾರಿ ದಿವ್ಯಪ್ರಭು, ಸಾರಿಗೆ ಇಲಾಖೆ ಕಾರ್ಯದರ್ಶಿ ಎನ್.ವಿ. ಪ್ರಸಾದ ಸೇರಿದಂತೆ ಈ ಕುರಿತು ರಾಜ್ಯ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿರುವ ಹೆಸ್ ಇಂಡಿಯಾ ಕಂಪನಿಯ ಪ್ರತಿನಿಧಿಗಳಿದ್ದರು.
ಏನಿದು ಯೋಜನೆ?ಅವಳಿ ನಗರದ ಮಧ್ಯೆ ಈಗಿರುವ ಬಿಆರ್‌ಟಿಎಸ್‌ನಿಂದ ಹಲವು ಸಮಸ್ಯೆಗಳು ಉದ್ಭವಿಸಿರುವ ಹಿನ್ನೆಲೆಯಲ್ಲಿ ಇಆರ್‌ಟಿ ಎಂಬ ಹೊಸ ಸಾರಿಗೆ ವ್ಯವಸ್ಥೆಯನ್ನು ಅಂದಾಜು ₹3ರಿಂದ ₹ 4000 ಕೋಟಿ ವೆಚ್ಚದಲ್ಲಿ ತರಲು ವಿಶೇಷವಾಗಿ ಸಚಿವ ಸಂತೋಷ ಲಾಡ್, ಸ್ವಿಸ್ ಮೂಲದ ಹೆಸ್ ಕಂಪನಿಯೊಂದಿಗೆ ರಾಜ್ಯ ಸರ್ಕಾರವು ಸ್ವಂತ ವೆಚ್ಚದಲ್ಲಿ ವಿಸ್ಕೃತ ವರದಿ ನೀಡಲು ಒಪ್ಪಂದ ಮಾಡಿಕೊಂಡಿದೆ. ಪಿಪಿಪಿ ಮಾದರಿಯಲ್ಲಿ ಯೋಜನೆಯಾಗಿದ್ದು, ಹುಬ್ಬಳ್ಳಿ ರೈಲು ನಿಲ್ದಾಣದಿಂದ ಧಾರವಾಡದ ಕೃಷಿ ವಿವಿ ವರೆಗೆ 26 ಕಿಮೀ ಇಆರ್‌ಟಿ ಸೇವೆ ಇರಲಿದೆ. ಈ ಪೈಕಿ 14 ಕಿಮೀ ಮೇಲ್ಸುತುವೆ, 10 ಕಿಮೀ ಈಗಿರುವ ರಸ್ತೆಯನ್ನೇ ಸಂಚಾರಕ್ಕೆ ಬಳಸಿಕೊಳ್ಳಲಾಗುವುದು. ಇನ್ನುಳಿದ ಎರಡು ಕಿಮೀ ಕೆಳಸೇತುವೆ ಮೂಲಕ ಬಸ್‌ಗಳು ಸಂಚಾರ ನಡೆಸಲಿವೆ. ಹೀಗಾಗಿ ಟ್ರಾಫಿಕ್ ಜಾಮ್ ಸಮಸ್ಯೆ ಬರುವುದಿಲ್ಲ ಎಂದು ಹೆಸ್ ಕಂಪನಿ ಹೇಳಿಕೊಂಡಿದೆ.
ಆಧುನಿಕ ತಂತ್ರಜ್ಞಾನದ 25 ಮೀಟರ್ ಉದ್ದದ ಇಆರ್‌ಟಿ ಬಸ್‌ಗಳಿದ್ದು, ಏಕಕಾಲಕ್ಕೆ 250 ಜನರನ್ನು ಕರೆದೊಯ್ಯುವ ಸಾಮರ್ಥ್ಯ ಹೊಂದಿವೆ. ಮೇಲ್ಸೇತುವೆಗೆ ಹೋಗಿ ಬರಲು ಎಸ್ಕ್‌ಲೇಟರ್ ಅಥವಾ ಲಿಫ್ಟ್ ವ್ಯವ್ಯಸ್ಥೆ ಇರಲಿದೆ. ಎಲ್ಲ ನಿಲ್ದಾಣಗಳಲ್ಲಿ ಡಿಸಪ್ಲೇ ಮೂಲಕ ಬಸ್‌ಗಳ ಸಂಚಾರದ ಮಾಹಿತಿ ದೊರೆಯಲಿದೆ. ಒಟ್ಟಾರೆ ಇಆರ್‌ಟಿ ಮೆಟ್ರೋ ಅನುಭವ ನೀಡಲಿದೆ ಎಂದು ಹೆಸ್ ಕಂಪನಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಈಗಾಗಲೇ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಈ ಯೋಜನೆ ಬಗ್ಗೆ ಧಾರವಾಡದಲ್ಲಿ ಪ್ರಾತ್ಯಕ್ಷಿಕೆ ನೀಡಿದ್ದು, ಅದೇ ರೀತಿ ಮುಖ್ಯಮಂತ್ರಿಗಳಿಗೂ ಯೋಜನೆ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ವಿಸ್ಕೃತ ಮಾಹಿತಿ ಒದಗಿಸಲಾಗಿದೆ. ಇದೀಗ ಬೆಳಗಾವಿ ಚಳಿಗಾಲದ ಅಧಿವೇಶನ ಸಮಯದಲ್ಲಿ ಮಂಗಳವಾರ ಸಾರಿಗೆ ಹಾಗೂ ನಗರಾಭಿವೃದ್ಧಿ ಸಚಿವರಿಗೂ ಪ್ರಾತ್ಯಕ್ಷಿಕೆ ನೀಡಿದ್ದು, ಈ ಸಾರಿಗೆ ವ್ಯವಸ್ಥೆ ಬಗ್ಗೆ ಮುಂದಿನ ನಿರ್ಧಾರವನ್ನು ಸರ್ಕಾರ ಪ್ರಕಟಿಸಬೇಕಿದೆ.