ಬಳ್ಳಾರಿ: ಸಂಡೂರು ಭಾಗದ ಚೋರನೂರು, ಬಂಡ್ರಿ, ಮೆಟ್ರಿಕಿ, ವಿಠಲಾಪುರ, ತಾರಾನಗರ ಮತ್ತು ಬಳ್ಳಾರಿ ತಾಲೂಕಿನ ಶಿಡಗಿನಮೋಳ ಗ್ರಾಪಂ ವ್ಯಾಪ್ತಿಯಲ್ಲಿ ಬಾಲ್ಯವಿವಾಹ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಂಬಂಧಿಸಿದ ಅಧಿಕಾರಿಗಳು ಮುಂದಾಗಬೇಕು ಎಂದು ಜಿ.ಪಂ. ಸಿಇಒ ಮಹಮ್ಮದ್ ಹ್ಯಾರೀಸ್ ಸುಮೇರ್ ಅವರು ಸೂಚನೆ ನೀಡಿದರು.
ಸಂಡೂರು ತಾಲೂಕು ಹಾಗೂ ಬಳ್ಳಾರಿ ತಾಲೂಕಿನ ಕೆಲ ಗ್ರಾಪಂ ವ್ಯಾಪ್ತಿಯಲ್ಲಿ ಗರ್ಭಿಣಿಯರು ಕೇವಲ 35 ಕೆ.ಜಿ ತೂಕ ಇರುವುದು ಕಂಡುಬರುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಜಿಲ್ಲೆಯಲ್ಲಿ ಬಾಲ್ಯವಿವಾಹ ಸಂಪೂರ್ಣವಾಗಿ ತಡೆಗಟ್ಟಲು ಇರುವ ಸರ್ಕಾರದ ಕಾನೂನು ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತಾಗಬೇಕು. ಬಾಲ್ಯವಿವಾಹ ಪ್ರಕರಣಗಳ ನಿಯಂತ್ರಣಕ್ಕೆ ಕಾನೂನು ಕ್ರಮಗಳ ಜೊತೆಗೆ ಜನಸಮುದಾಯದಲ್ಲಿ ಅರಿವು ಮೂಡಿಸುವ ಕೆಲಸವೂ ಆಗಬೇಕು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್, ಜಿಲ್ಲೆಯಲ್ಲಿ ಬಾಲ್ಯವಿವಾಹ ನಡೆಯುತ್ತಿರುವುದು ಕಂಡುಬಂದಲ್ಲಿ ಹಾಗೂ ಘಟನೆ ನಡೆದಲ್ಲಿ ಸಂಬಂಧಿಸಿದವರ ವಿರುದ್ಧ ಯಾವುದೇ ವಿಳಂಬವಿಲ್ಲದೇ ಎಫ್‌ಐಆರ್ ದಾಖಲಿಸಬೇಕು. ಇದರಲ್ಲಿ ಯಾವೊಬ್ಬ ಅಧಿಕಾರಿ ಉದಾಸೀನತೆ ತೋರಿಸುವಂತಿಲ್ಲ ಎಂದು ಎಚ್ಚರಿಸಿದರು.ಜಿಲ್ಲೆಯ ಎಲ್ಲ ಉಪವಿಭಾಗಗಳ ಡಿವೈಎಸ್ಪಿಗಳೊಂದಿಗೆ ಸಭೆ ನಡೆಸಬೇಕು ಹಾಗೂ ಗ್ರಾಮಗಳಲ್ಲಿನ ದೇವಸ್ಥಾನ, ಚರ್ಚ್, ಕಲ್ಯಾಣ ಮಂಟಪ, ಸಮುದಾಯ ಭವನಗಳಲ್ಲಿ ನಡೆಯುವ ಮದುವೆ, ಈ ಕಾರ್ಯಕ್ರಮಕ್ಕೆ ಶ್ಯಾಮಿಯಾನ ಪರಿಕರ ವಿತರಿಸುವವರು ಒಳಗೊಂಡು ಮದುವೆ ಸಮಾರಂಭದ ಮಾಹಿತಿಯನ್ನು ಕಡ್ಡಾಯವಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಸಲ್ಲಿಸುವಂತೆ ಜಿಲ್ಲಾಧಿಕಾರಿಯವರ ಆದೇಶ ನೀಡಲು ಕ್ರಮವಹಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯ ಎಲ್ಲ ವಸತಿ ಶಿಕ್ಷಣ ಸಂಸ್ಥೆಗಳಲ್ಲಿನ ಮಕ್ಕಳಿಗೆ ತಮ್ಮ ಪೋಷಕರೊಂದಿಗೆ ಕರೆಮಾಡಿ ಮಾತನಾಡಲು ಸ್ಮಾರ್ಟ್ ಕಾರ್ಡ್ ಬಳಸಲಾಗುತ್ತಿದ್ದು, ಅದರಲ್ಲಿ ಕೇವಲ ವಿದ್ಯಾರ್ಥಿಯ ಪೋಷಕರ ಮೊಬೈಲ್ ಸಂಖ್ಯೆ ನಮೂದಾಗಿರುತ್ತದೆ. ಇದರ ಜೊತೆಗೆ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಸಹ ನಮೂದು ಮಾಡಬೇಕು. ಇದರಿಂದ ಪೋಷಕರ ಜೊತೆ ಹಂಚಿಕೊಳ್ಳಲಾಗದ ಕೆಲವು ಘಟನೆಗಳನ್ನು ಕರೆ ಮಾಡಿ ಮಾಹಿತಿ ನೀಡಲು ಸಹಾಯವಾಗಲಿದೆ. ಹಾಗಾಗಿ ಸಂಬಂಧಿಸಿದ ಇಲಾಖಾಧಿಕಾರಿಗಳು ಕ್ರಮವಹಿಸಬೇಕು ಎಂದು ಸೂಚಿಸಿದರು.ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ಜಿಲ್ಲೆಯಲ್ಲಿ ಗರ್ಭಿಣಿ ಮಹಿಳೆಯರು, ಬಾಣಂತಿ ಮಹಿಳೆಯರಿಗೆ ತಲುಪಬೇಕಾದ ಅನುದಾನ ಗುರಿ ನಿಗದಿತ ವೇಳೆಗೆ ಅವರಿಗೆ ತಲುಪಿಸಬೇಕು. ಅಧಿಕಾರಿಗಳು ತಮ್ಮಲ್ಲಿಯೇ ಇಟ್ಟುಕೊಂಡಲ್ಲಿ ಕ್ರಮ ಎದುರಿಸಬೇಕಾಗುತ್ತದೆ ಎಂದು ಸಿಡಿಪಿಒ ಅಧಿಕಾರಿಗಳಿಗೆ ಸೂಚಿಸಿದ ಅವರು, ಹಣ ಪಾವತಿ ಮಾಡಿರುವ ಕುರಿತು ವಾರದೊಳಗೆ ವರದಿ ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಿಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಮಕೃಷ್ಣ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುಭದ್ರಾದೇವಿ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ತ್ರಿವೇಣಿ ಪತ್ತಾರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಎನ್‌ಜಿಒ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.