ಹೊಸಪೇಟೆ: ಮುಡಾದಲ್ಲಿ ನಿವೇಶನ ಹಂಚಿಕೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೆ ಬದಲಿ ನಿವೇಶನ ಹಂಚಿಕೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ. ಕೋಟ್ಯಂತರ ಮೌಲ್ಯದ ಹಗರಣದ ಕುರಿತು ಸಿಬಿಐ ತನಿಖೆ ನಡೆಯಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜೀವ್ ರೆಡ್ಡಿ ಆಗ್ರಹಿಸಿದರು.ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಬಂದು 13 ತಿಂಗಳು ಕಳೆಯುತ್ತಿದೆ. ಆದರೆ, ಅಭಿವೃದ್ಧಿಗಿಂತ ಹಗರಣದ ಕಡೆ ಹೆಚ್ಚು ಗಮನ ಹರಿಸುತ್ತಿದೆ. ಸಮಾಜವಾದಿ ಎನ್ನುವ ಸಿದ್ದರಾಮಯ್ಯ ರಾಜ್ಯದ ಸಂಪತ್ತು ಲೂಟಿ ಹೊಡೆಯುತ್ತಿದ್ದಾರೆ. ಒಂದೊಂದು ಹಗರಣ ಬಯಲಿಗೆ ಬರುತ್ತಿವೆ. ಮುಡಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ನಿಯಮ ಉಲ್ಲಂಘಿಸಿ ನಿವೇಶನಗಳನ್ನು ಹಂಚಲಾಗಿದೆ. ಸಿಎಂ ಪತ್ನಿ ಎನ್ನುವ ಕಾರಣಕ್ಕೆ ನಿಯಮಕ್ಕಿಂತಲೂ ಹೆಚ್ಚು ನಿವೇಶನ ಹಂಚಿಕೆ ಮಾಡಲಾಗಿದೆ ಎಂದರು.
ಈ ಹಿಂದೆ ಸುಳ್ಳು ಆರೋಪದಿಂದ ಬಿಜೆಪಿಯ ಕಾಲೆಳೆದಿದ್ದರು. ಆದರೆ, ಕಾಂಗ್ರೆಸ್ ಭ್ರಷ್ಟಾಚಾರದ ವಿಶ್ವವಿದ್ಯಾಲಯ ಆಗಿದೆ. ಒತ್ತಡದಿಂದ ಅಧಿಕಾರಿಗಳು ಬಲಿಯಾಗುತ್ತಿದ್ದಾರೆ. ಭ್ರಷ್ಟಾಚಾರ ರಹಿತ ಎನ್ನುವ ಸರ್ಕಾರ ಶೇ.100ರಷ್ಟು ಭ್ರಷ್ಟರು ತುಂಬಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಸಮಾಜವಾದಿಯಲ್ಲ ಮಜವಾದಿ. ಮುಡಾ ಸ್ವಾಧೀನ ಪಡಿಸಿಕೊಂಡ ಭೂಮಿ ಹಾಗೂ ಹಂಚಿಕೆ ಮಾಡಿದ ವಿಧಾನದಲ್ಲಿ ಲೋಪ ಎಸಗಿರುವುದು ಸ್ಪಷ್ಟವಾಗಿದೆ. ಸಿಎಂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಈ ಪ್ರಕರಣವನ್ನು ತ್ವರಿತವಾಗಿ ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.ನಿವೇಶನ ಹಂಚಿಕೆಯಲ್ಲಿ ಭಾರೀ ಗೋಲ್‌ಮಾಲ್ ನಡೆದಿದೆ. ಸಿಎಂ ಪತ್ನಿ ಎನ್ನುವ ಕಾರಣಕ್ಕೆ ನಿಯಮ ಉಲ್ಲಂಘಿಸಲಾಗಿದೆ. ರಾಜ್ಯದ ರೈತರು ಜಮೀನು ಕಳೆದುಕೊಂಡಾಗ ಇದೇ ನಿಯಮ ಪಾಲನೆ ಮಾಡಲಾಗಿಲ್ಲ. 2020ರಲ್ಲೇ ಆಗಿನ ಬಿಜೆಪಿ ಸರ್ಕಾರ ಈ ಕುರಿತು ಅಧಿಕಾರಿಗಳಿಂದ ವರದಿ ಕೇಳಿತ್ತು. ಈ ವರದಿ ಈಗ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಮೈಸೂರು ಜಿಲ್ಲಾಧಿಕಾರಿ ಕೂಡ 14 ಬಾರಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ, ಎಲ್ಲವನ್ನೂ ಕಸದ ಬುಟ್ಟಿಗೆ ಎಸೆಯಲಾಗಿದೆ. ನ್ಯಾಯಾಂಗ ತನಿಖೆಗೂ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಕೂಡ ಈ ಪ್ರಕರಣ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಕುರಿತು ತನಿಖೆಗೆ ಒತ್ತಾಯಿಸಿದ್ದಾರೆ. ಸಿಎಂ ಕುಟುಂಬ ಮುಡಾದಿಂದ ಸೈಟ್ ಪಡೆದ ಪ್ರಕರಣದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಈ ಬಗ್ಗೆಯೂ ತನಿಖೆ ಆಗಲಿ. ಒಂದು ವೇಳೆ ಆಗಿನ ಮುಡಾ ಅಧ್ಯಕ್ಷರು ತಪ್ಪು ಮಾಡಿದರೂ ಅವರನ್ನು ಅರೆಸ್ಟ್ ಮಾಡಲಿ. ಅವರು ಬಿಜೆಪಿಯವರು ಆಗಿದ್ದರೂ ಕಾನೂನು ಎಲ್ಲರಿಗೂ ಒಂದೇ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಪಕ್ಷದ ಉಪಾಧ್ಯಕ್ಷ ಸಾಲಿ ಸಿದ್ದಯ್ಯಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೆ.ಎಸ್.ರಾಘವೇಂದ್ರ, ಹೊಸಪೇಟೆ ಮಂಡಲ ಅಧ್ಯಕ್ಷ ಶಂಕರ್ ಮೇಟಿ, ಮುಖಂಡರಾದ ಅಶೋಕ್ ಜೀರೆ, ಅನುರಾಧಾ, ಆರ್.ಮಧುಸೂದನ್, ವಿನೋದ್, ವೀರಣ್ಣ ಗೌಡ, ರಾಘವೇಂದ್ರ, ಪ್ರಮೋದ್, ಬಸವರಾಜ ಕರ್ಕಿಹಳ್ಳಿ ಮತ್ತಿತರರಿದ್ದರು.