ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ನೀಡಲು ಬಿಜೆಪಿ ಒತ್ತಾಯ

KannadaprabhaNewsNetwork |  
Published : Feb 12, 2024, 01:32 AM IST
ಚಿಕ್ಕಮಗಳೂರು ಕ್ಷೇತ್ರಕ್ಕೆ ಕಳೆದ 8 ತಿಂಗಳಲ್ಲಿ ಬಿಡುಗಡೆಯಾಗಿರುವ ಅನುದಾನದ ಬಗ್ಗೆ ಮಾಹಿತಿ ನೀಡಬೇಕೆಂದು ಆಗ್ರಹಿಸಿ ಶಾಸಕರ ಕಚೇರಿಯಲ್ಲಿ ಶನಿವಾರ ಬಿಜೆಪಿ ಮುಖಂಡರು ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಕಳೆದ 8 ತಿಂಗಳಲ್ಲಿ ಚಿಕ್ಕಮಗಳೂರು ಕ್ಷೇತ್ರಕ್ಕೆ ತಂದಿರುವ ಅನುದಾನ ಹಾಗೂ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಸಂಪೂರ್ಣ ಮಾಹಿತಿ ನೀಡಬೇಕೆಂದು ಬಿಜೆಪಿ ಶಾಸಕ ಎಚ್‌.ಡಿ. ತಮ್ಮಯ್ಯ ಅವರಿಗೆ ಆಗ್ರಹಿಸಿದೆ.

- ಪಕ್ಷದ ಮುಖಂಡರಿಂದ ಶಾಸಕರ ಕಚೇರಿಯಲ್ಲಿ ಎಚ್‌.ಡಿ. ತಮ್ಮಯ್ಯಗೆ ಮನವಿ ಸಲ್ಲಿಕೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕಳೆದ 8 ತಿಂಗಳಲ್ಲಿ ಚಿಕ್ಕಮಗಳೂರು ಕ್ಷೇತ್ರಕ್ಕೆ ತಂದಿರುವ ಅನುದಾನ ಹಾಗೂ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಸಂಪೂರ್ಣ ಮಾಹಿತಿ ನೀಡಬೇಕೆಂದು ಬಿಜೆಪಿ ಶಾಸಕ ಎಚ್‌.ಡಿ. ತಮ್ಮಯ್ಯ ಅವರಿಗೆ ಆಗ್ರಹಿಸಿದೆ.

ಈ ಸಂಬಂಧ ಶನಿವಾರ ಪಕ್ಷದ ಮುಖಂಡರು ಶಾಸಕರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ನಗರಸಭೆ ಮಾಜಿ ಅಧ್ಯಕ್ಷ ಪುಷ್ಪರಾಜ್‌, ಕ್ಷೇತ್ರದ ಅಭಿವೃಧ್ದಿ ಮಾಹಿತಿ ಒದಗಿಸಬೇಕಾಗಿರುವುದು ಶಾಸಕರ ಕರ್ತವ್ಯ, ಪ್ರಶ್ನಿಸುವ ಹಕ್ಕು ಮತದಾರರಿಗಿದೆ. ಆ ಹಿನ್ನೆಲೆಯಲ್ಲಿ ಮತದಾರರ ಧ್ವನಿಯಾಗಿ ಮನವಿ ಸಲ್ಲಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ವಿವರ ನೀಡಬೇಕೆಂದು ಹೇಳಿದರು.

ಚಿಕ್ಕಮಗಳೂರಿನ ಶಾಸಕರು ವರ್ಷ ಪೂರೈಸುವ ಹೊಸ್ತಿನಲ್ಲಿದ್ದು ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ಅಭಿವೃದ್ದಿ ಕಾರ್ಯ ಆರಂಭವಾಗಿಲ್ಲ. ಆ ಕಾರಣದಿಂದ ಪತ್ರದ ಮುಖೇನ ಶಾಸಕರು ಕ್ಷೇತ್ರಕ್ಕೆ ತಂದ ಹಾಗೂ ಇದುವರೆಗೂ ಬಿಡುಗಡೆಯಾಗಿರುವ ಅನುದಾನ ಅಥವಾ ಬಿಡುಗಡೆಗೊಂಡಿದ್ದರೆ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು ಯಾವುವು ಎಂಬುದನ್ನು ತಿಳಿಸಬೇಕು ಎಂದರು.

ಬರದ ಛಾಯೆಯಲ್ಲಿ ಸಿಲುಕಿ ನಲುಗುತ್ತಿರುವ ರೈತರಿಗೆ ಸರ್ಕಾರದಿಂದ ಬಿಡುಗಡೆಗೊಂಡ ಪರಿಹಾರ, ನಿರುದ್ಯೋಗ ನಿರ್ಮೂಲನೆಗೆ ಸೃಷ್ಟಿಸಲಾದ ಉದ್ಯೋಗಗಳ ವಿವರ, ಶೈಕ್ಷಣಿಕ ಅಭಿವೃದ್ಧಿಯಲ್ಲಿ ಕೈಗೊಂಡ ಕ್ರಮಗಳು, ಬಡಜನರ ಕೈಗೆ ಎಟಕುವ ಉತ್ತಮ ದರ್ಜೆ ಆರೋಗ್ಯ ಸೇವೆ ಒದಗಿಸಲು ರೂಪಿಸಿರುವ ಹೊಸ ಯೋಜನೆಗಳ ಮಾಹಿತಿ ಕೊಡಬೇಕೆಂದು ಒತ್ತಾಯಿಸಿದರು.

ಬಿಜೆಪಿ ನಗರಾಧ್ಯಕ್ಷ ಮಧುಕುಮಾರ್ ರಾಜ್ ಅರಸ್ ಮಾತನಾಡಿ, ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಪರಿ ಪೂರ್ಣಗೊಳಿಸಲು ಕೈಗೊಂಡ ಕಾಮಗಾರಿ, ಮೋದಿ ಸರ್ಕಾರ ನೀಡುತ್ತಿರುವ ಅನ್ನಭಾಗ್ಯದ 5 ಕೆಜಿ ಅಕ್ಕಿ ಹೊರತುಪಡಿಸಿ ರಾಜ್ಯದಲ್ಲಿ ವಿತರಿಸುತ್ತಿರುವ ಅಕ್ಕಿ ವಿವರ, ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ವೈದ್ಯಕೀಯ ಕಾಲೇಜು ಕಾಮಗಾರಿಗೆ ನೀವು ಶಾಸಕರಾಗಿ ಸರ್ಕಾರದಿಂದ ಎಷ್ಟು ಅನುದಾನ ಬಿಡುಗಡೆಗೊಳಿಸಲಾಗಿದೆ ಎಂಬುದನ್ನು ತಿಳಿಸಬೇಕು ಎಂದರು.

ಒಟ್ಟಾರೆ ಸಾರ್ವಜನಿಕರ ಹಿತದೃಷ್ಟಿ ಹಾಗೂ ಕ್ಷೇತ್ರದ ಸರ್ವಾಂಗೀಣ ಅಭಿವೃಧ್ದಿ ದೃಷ್ಟಿಯಿಂದ ಕ್ಷೇತ್ರಕ್ಕೆ ತಂದಿರುವ ಅನುದಾನದ ವಿವರವನ್ನು ಆಧಾರ ಸಹಿತ ಒದಗಿಸಿಕೊಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ನರೇಂದ್ರ, ಹಿರಿಯ ಮುಖಂಡರಾದ ಸಿ.ಎಚ್.ಲೋಕೇಶ್, ಬಿ.ರಾಜಪ್ಪ, ಯುವ ಮೋರ್ಚಾ ಅಧ್ಯಕ್ಷ ಸಂತೋಷ್‌ ಕೋಟ್ಯಾನ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಜಸಂತ ಅನಿಲ್ ಕುಮಾರ್, ಎಸ್ಸಿ ಘಟಕದ ನಗರಾಧ್ಯಕ್ಷ ಕೇಶವ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಅಬ್ದುಲ್ ಕಬೀರ್, ನಗರಸಭೆ ಮಾಜಿ ಉಪಾಧ್ಯಕ್ಷ ಸುಧೀರ್, ಸದಸ್ಯ ಶ್ರೀಧರ್ ಉರಾಳ್, ಅಂಕಿತಾ, ಮಂಜುನಾಥ್, ನರಸಿಂಹಮೂರ್ತಿ, ಪ್ರದೀಪ್ ಹಾಜರಿದ್ದರು.---- ಬಾಕ್ಸ್‌ ----

ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌

ಚಿಕ್ಕಮಗಳೂರು: ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಶನಿವಾರ ನಗರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕುವ ಸಾಧ್ಯತೆ ಇದ್ದರಿಂದ ಆಯಾ ಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್‌ ಮಾಡಿಕೊಳ್ಳಲಾಗಿತ್ತು.

ಬೆಳಿಗ್ಗೆ 9.30ಕ್ಕೆ ಸಚಿವರು ಹೆಲಿಕ್ಯಾಪ್ಟರ್‌ ಮೂಲಕ ಆಗಮಿಸಿದ್ದು ಅವರು ಪ್ರವಾಸಿಮಂದಿರಕ್ಕೆ ತೆರಳಿ ಅಲ್ಲಿಂದ ತಾಲೂಕು ಕಚೇರಿ, ನಂತರ ಕುವೆಂಪು ಕಲಾಮಂದಿರಕ್ಕೆ ಆಗಮಿಸಿದರು. ಈ ಎಲ್ಲಾ ಕಡೆಯಲ್ಲಿ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿತ್ತು. ಕಲಾಮಂದಿರದೊಳಗೆ ತೆರಳುವ ಪ್ರತಿಯೊಬ್ಬರನ್ನು ಪೊಲೀಸರು ತಪಾಸಣೆ ಮಾಡಿದರು.

ಎಲ್ಲಾ ಕಡೆಯಲ್ಲೂ ಬಿಗಿ ಪೊಲೀಸ್ ಬಂದೋಬಸ್ತ್‌ ವ್ಯವಸ್ಥೆ ಮಾಡಿದ್ದರಿಂದ ಬಿಜೆಪಿ ಕಾರ್ಯಕರ್ತರು ಶಾಸಕರ ಕಚೇರಿಗೆ ತೆರಳಿ ಮನವಿ ಸಲ್ಲಿಸಿ ವಾಪಸ್‌ ತೆರಳಿದರು.

10 ಕೆಸಿಕೆಎಂ 4ಚಿಕ್ಕಮಗಳೂರು ಕ್ಷೇತ್ರಕ್ಕೆ ಕಳೆದ 8 ತಿಂಗಳಲ್ಲಿ ಬಿಡುಗಡೆಯಾಗಿರುವ ಅನುದಾನದ ಬಗ್ಗೆ ಮಾಹಿತಿ ನೀಡಬೇಕೆಂದು ಆಗ್ರಹಿಸಿ ಶಾಸಕರ ಕಚೇರಿಯಲ್ಲಿ ಶನಿವಾರ ಬಿಜೆಪಿ ಮುಖಂಡರು ಮನವಿ ಸಲ್ಲಿಸಿದರು.

PREV

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ