ಕನ್ನಡಪ್ರಭ ವಾರ್ತೆ ಮೈಸೂರು
ನಗರದ ನಂಜುಮಳಿಗೆ ಬಳಿಯ ಗೋಪಾಲಸ್ವಾಮಿ ಶಿಶು ವಿಹಾರದಲ್ಲಿ ಪದ್ಮಶ್ರೀ ಪುರಸ್ಕೃತರಾದ ಬುಡಕಟ್ಟು ಸಮುದಾಯದ ಮುಖಂಡ ಸೋಮಣ್ಣ ಮತ್ತು ಮಾನಸಿಕ ಆರೋಗ್ಯದ ಚಿಕಿತ್ಸಾ ತಜ್ಞ ಡಾ.ಸಿ.ಆರ್. ಚಂದ್ರಶೇಖರ್ ಅವರನ್ನು ಭಾನುವಾರ ಅಭಿನಂದಿಸಲಾಯಿತು.ನಗರದ ಆದಿವಾಸಿ ಸಮನ್ವಯ ಮಂಚ್ ಭಾರತ, ಎಲ್ಲಾ ತಾಲೂಕು, ಜಿಲ್ಲಾ ಬುಡಕಟ್ಟು ಸಮುದಾಯದ ಅಭಿವೃದ್ಧಿ ಸಂಘಟನೆಗಳು, ವನವಾಸಿ ಕಲ್ಯಾಣ ಸಂಸ್ಥೆ, ಮಹಾರಾಜ ಎಜುಕೇಷನ್ ಟ್ರಸ್ಟ್ ಸೇರಿದಂತೆ ವಿವಿಧ ಸಂಘ- ಸಂಸ್ಥೆಗಳ ಸಹಯೋಗದಲ್ಲಿ ಪದ್ಮಶ್ರೀ ಪುರಸ್ಕೃತರನ್ನು ಸನ್ಮಾನಿಸಲಾಯಿತು.
ಅಭಿನಂದನೆ ಸ್ವೀಕರಿಸಿದ ಡಾ.ಸಿ.ಆರ್. ಚಂದ್ರಶೇಖರ್ ಮಾತನಾಡಿ, ಕಳೆದ 50 ವರ್ಷಗಳಿಂದ ಔಷಧಿ ಕೊಡುವುದರ ಜೊತೆಗೆ ಮಾನಸಿಕ ಆರೋಗ್ಯದ ಅರಿವು ಮೂಡಿಸಿದ್ದೇನೆ. ಜನ ಸಾಮಾನ್ಯರು ಮೌಢ್ಯ, ಕಂದಾಚಾರದಂತಹ ಮೂಢನಂಬಿಕೆಗಳನ್ನು ಬಿಡಬೇಕು. ದೆವ್ವವು ಇಲ್ಲ, ದೇವರ ಶಾಪವು ಇಲ್ಲ. ದೇವರ ಮೇಲೆ ನಂಬಿಕೆ ಇರಿಸುವುದು ಸಹಜ. ಆದರೆ, ಮೌಢ್ಯವನ್ನು ಆಚರಿಸಬಾರದು ಎಂದರು.ಆಹಾರ, ಆಚಾರ, ವಿಚಾರ, ವಿಹಾರ ಸಮತೋಲನದಿಂದ ಕೂಡಿದ್ದರೆ ಮಾನಸಿಕ ಆರೋಗ್ಯ ಸುಸ್ಥಿಯಲ್ಲಿರಲಿದೆ. ಆದರೆ, ಪ್ರಸ್ತುತ ಕಾಲಘಟ್ಟದಲ್ಲಿ ಬಹುತೇಕರಿಗೆ ಮಾನಸಿಕ ಆರೋಗ್ಯದ ಕಾಳಜಿ ಇಲ್ಲದಂತಾಗಿದೆ. ಎಷ್ಟು ವಿದ್ಯಾವಂತರಿಗೆ ಮಾನಸಿಕ ಆರೋಗ್ಯದ ಬಗ್ಗೆ ತಿಳಿವಳಿಕೆ ಇಲ್ಲವಾಗಿದೆ ಎಂದು ಅವರು ವಿಷಾದಿಸಿದರು.
ಮನಸ್ಸಿನ ಅನಾರೋಗ್ಯಕ್ಕೆ ದೇವರ ಶಾಪ, ಮಾಟ ಮಂತ್ರದಂತಹ ಮೂಢನಂಬಿಕೆಗಳು ಕಾರಣವೆಂದು ಭಾವಿಸಿ ಹಣ, ನೆಮ್ಮದಿ ಕಳೆದುಕೊಂಡು ಖಿನ್ನತೆಗೆ ಒಳಗಾಗುತ್ತಾರೆ. ಎಲ್ಲಿಯೂ ಸಮಸ್ಯೆ ಬಗೆಹರಿದ ನಂತರ ಮನೋವೈದ್ಯರ ಬಳಿ ಚಿಕಿತ್ಸೆಗೆ ಬರುತ್ತಾರೆ. ಪ್ರಪಂಚದ ವೈಜ್ಞಾನಿಕವಾಗಿ ಮುಂದುವರಿದರೂ ಇಲ್ಲಿನ ಮನಸ್ಥಿತಿಗಳು ಮೌಢ್ಯದಿಂದ ಪೂರ್ಣ ಪ್ರಮಾಣದಲ್ಲಿ ಮುಕ್ತವಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.ಗೋಪಾಲಸ್ವಾಮಿ ಶಿಶು ವಿಹಾರ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎ.ಎಸ್. ಚಂದ್ರಶೇಖರ್, ವ್ಯವಸ್ಥಾಪಕ ಬಿ.ಆರ್. ದಿನೇಶ್, ಗೋಪಾಲಸ್ವಾಮಿ ಶಿಶು ವಿಹಾರ ಪೌಢ್ರಶಾಲೆಯ ಶಿಕ್ಷಕ ಎನ್. ನಾಗರಾಜ, ಜನಾಭಿವೃದ್ಧಿ ಪರಿಣಿತ ಡಾ. ಅಚ್ಯುತ ರಾಜ್, ಸುಯೋಗ್ ಆಸ್ಪತ್ರೆಯ ಎಚ್.ಆರ್. ವಿಭಾಗದ ಮುಖ್ಯಸ್ಥ ಪ್ರಭುದೇವ್, ಮೈಸೂರು ವಿವಿ ಸಮಾಜಕಾರ್ಯ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಎಚ್.ಪಿ. ಜ್ಯೋತಿ ಮೊದಲಾದವರು ಇದ್ದರು.
ಪದ್ಮಶ್ರೀ ನೀಡಿ ಗೌರವಿಸಿದ ಕೇಂದ್ರ ಸರ್ಕಾರಕ್ಕೆ ಜನಾಂಗದ ಪರವಾಗಿ ಧನ್ಯವಾದ ತಿಳಿಸುವೆ. ಪದ್ಮಶ್ರೀ ಪುರಸ್ಕಾರದ ಪ್ರೀತಿ ನನ್ನೆದೆಯಲ್ಲಿ ಮತ್ತಷ್ಟು ಧೈರ್ಯ ತುಂಬಿದೆ. ಎಷ್ಟೇ ಆಸ್ತಿ ಮಾಡಿದರೂ ಇಂತಹ ಪ್ರೀತಿ ಲಭಿಸುತ್ತಿರಲಿಲ್ಲ. ಆದಿವಾಸಿ ಸಮುದಾಯಗಳು ಸೇರಿದಂತೆ ಎಲ್ಲಾ ಬಡ ವರ್ಗದ ಜನತೆಯ ಪರವಾಗಿ ನನ್ನ ನಿಲುವು ಸದಾ ಇರಲಿದೆ. ದೇಶದ ಆದಿವಾಸಿ ಮತ್ತು ದೇಶದ ಬಡ ಜನತೆಗೆ ಸ್ಥಿತಿವಂತರು ದನಿಯಾಗಬೇಕು.- ಪದ್ಮಶ್ರೀ ಸೋಮಣ್ಣ, ಬುಡಕಟ್ಟು ಸಮುದಾಯದ ಮುಖಂಡ