ಬಿಜೆಪಿ ಭ್ರಷ್ಟರ ಕೂಟ, ರೈತರ ಸಾಲಮನ್ನಾ ಮಾಡದ ಮೋದಿ: ಬಸವರಾಜ ರಾಯರಡ್ಡಿ

KannadaprabhaNewsNetwork |  
Published : Apr 20, 2024, 01:08 AM IST
ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ ನಡೆದ ಲೋಕಸಭಾ ಚುನಾವಣೆಯ ಪ್ರಚಾರ ಕಾರ್ಯಕ್ರಮದಲ್ಲಿ ಶಾಸಕ ಬಸವರಾಜ ರಾಯರೆಡ್ಡಿ ಶುಕ್ರವಾರ ಮಾತನಾಡಿದರು. | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ನಾವು ತಿನ್ನೋದಿಲ್ಲ, ತಿನ್ನೋದಕ್ಕೆ ಬಿಡೋದಿಲ್ಲ ಅನ್ನುತ್ತಾರೆ. ಆದರೆ ಅಧಿಕಾರದ ಹೆದರಿಕೆಯಿಂದ ಭ್ರಷ್ಟರನ್ನು ಬಿಜೆಪಿಗೆ ಸೇರಿಸಿಕೊಂಡಿದ್ದಾರೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಟೀಕಿಸಿದ್ದಾರೆ.

ಕುಕನೂರು: ಬಿಜೆಪಿಯಲ್ಲಿ ಅಕ್ರಮವಾಗಿ ಹಣ ಗಳಿಸಿ ತಿಂದು ತೇಗಿದವರು ಇದ್ದಾರೆ. ಬಿಜೆಪಿ ಭ್ರಷ್ಟರ ಕೂಟ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಟೀಕಿಸಿದ್ದಾರೆ.

ತಾಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ ಶುಕ್ರವಾರ, ಲೋಕಸಭಾ ಚುನಾವಣೆಯ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ನಾವು ತಿನ್ನೋದಿಲ್ಲ, ತಿನ್ನೋದಕ್ಕೆ ಬಿಡೋದಿಲ್ಲ ಅನ್ನುತ್ತಾರೆ. ಆದರೆ ಅಧಿಕಾರದ ಹೆದರಿಕೆಯಿಂದ ಭ್ರಷ್ಟರನ್ನು ಬಿಜೆಪಿಗೆ ಸೇರಿಸಿಕೊಂಡಿದ್ದಾರೆ. ಭ್ರಷ್ಟರ ಕೂಟವಾಗಿರುವ ಬಿಜೆಪಿ ಎಂದಿಗೂ ರಾಷ್ಟ್ರದ ಅಭಿವೃದ್ಧಿ ಚಿಂತನೆ ಮಾಡಿಲ್ಲ. ₹42 ಇದ್ದ ಅಮೆರಿಕದ ಡಾಲರ್ ವಿದೇಶಿ ವಿನಿಮಯ ದರ ₹ 87ಕ್ಕೆ ಬಂದಿದೆ. ಪ್ರಧಾನಿ ಮೋದಿ ಆಡಳಿತದಲ್ಲಿ ಆರ್ಥಿಕ ನೀತಿ ಹದಗೆಟ್ಟಿದೆ. ಭಾರತದ ಉತ್ಪನ್ನಗಳನ್ನು ವಿದೇಶಗಳು ಗುಣಮಟ್ಟ ಇಲ್ಲವೆಂದು ಖರೀದಿಸುತ್ತಿಲ್ಲ. ಇದು ಆರ್ಥಿಕ ನೀತಿ ಮೇಲೆ ಪರಿಣಾಮ ಬೀರಿದೆ. ಖಾಸಗಿ ಕಂಪನಿಗಳ ವ್ಯಾಮೋಹದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರೈತರ ಸಾಲ ಕಾಣಲಿಲ್ಲ. ಹತ್ತು ವರ್ಷದಲ್ಲಿ ಒಂದು ರು. ರೈತರ ಸಾಲಮನ್ನಾ ಮಾಡಿಲ್ಲ ಎಂದು ದೂರಿದರು.

ದೇಶ ಸ್ವಾತಂತ್ರ್ಯ ಪಡೆದ ಆನಂತರ ಕಾಂಗ್ರೆಸ್‌ ನೀರಾವರಿಗಾಗಿ ೫೬೦ಕ್ಕೂ ಹೆಚ್ಚು ಅಣೆಕಟ್ಟುಗಳನ್ನು ನಿರ್ಮಿಸಿದೆ. ಕರ್ನಾಟಕದಲ್ಲಿ ೨೦ಕ್ಕೂ ಡ್ಯಾಂಗಳು ಇವೆ. ೧೦ ವರ್ಷದಲ್ಲಿ ಮೋದಿ ಅವರು ನೀರಾವರಿಗೆ ಒಂದಾದರೂ ಡ್ಯಾಂ ನಿರ್ಮಾಣ ಮಾಡಿದ್ದಾರಾ? ಬಡವರಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದರು. ಬಡವರು ಉದ್ಧಾರವಾದರೆ ಅದುವೇ ರಾಮರಾಜ್ಯ. ರಾಮಮಂದಿರ ಕಟ್ಟಲು ಯಾರು ಬೇಡ ಅಂದಿದ್ದಾರೆ? ಪ್ರಧಾನಿ ನರೇಂದ್ರ ಮೋದಿ ಹಿಂದೂ-ಮುಸ್ಲಿಮರ ನಡುವೆ ಜಗಳ ಹಚ್ಚುವ ಕೆಲಸ ಮಾಡುತ್ತಾರೆ. ಜನಪರ ಆಡಳಿತದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಜನರ ಮನ ಗೆದ್ದಿದೆ. ಸಿದ್ದರಾಮಯ್ಯ ಸರ್ಕಾರ ಗ್ಯಾರಂಟಿಯಾಗಿ ಪೂರ್ಣಾವಧಿ ಪೂರೈಸುತ್ತದೆ ಎಂದರು.

ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಯಂಕಣ್ಣ ಯರಾಸಿ ಮಾತನಾಡಿ, ಬಿಜೆಪಿ ಜನರನ್ನು ಮರಳು ಮಾಡಿ ಮತ ಪಡೆಯುತ್ತದೆ. ಅವರಿಗೆ ಬಡವರ ಅಭಿವೃದ್ಧಿ ಬೇಕಿಲ್ಲ. ಅವರಿಗೆ ಅಧಿಕಾರದ ದಾಹ ಇದೆ. ಕಾಂಗ್ರೆಸ್ ಜನರ ಬಾಗಿಲಿಗೆ ಯೋಜನೆಗಳನ್ನು ತಲುಪಿಸಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಗೌಡ ಚಂಡೂರು, ಹಾಲುಮತ ಸಮಾಜದ ತಾಲೂಕಾಧ್ಯಕ್ಷ ಮಂಜುನಾಥ ಕಡೆಮನಿ, ತಾಲೂಕು ವಕ್ತಾರರಾದ ಶಿವನಗೌಡ ದಾನರೆಡ್ಡಿ, ಸಂಗಮೇಶ ಗುತ್ತಿ, ಮುಖಂಡ ಹೇಮರೆಡ್ಡಿ ಮುಂಡರಗಿ, ಸುಭಾಸ್ ಮಾದಿನೂರು, ಶಿವು ಆದಾಪುರ, ಕಾಂಗ್ರೆಸ್ ಕುಕನೂರು ನಗರ ಘಟಕದ ಅಧ್ಯಕ್ಷ ರೆಹಮಾನ್‌ಸಾಬ್‌ ಮಕ್ಕಪ್ಪನವರ್, ಮಲ್ಲು ಜಕ್ಕಲಿ, ಸಂತೋಷ ಮೆಣಸಿನಕಾಯಿ ಇತರರಿದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ