ವೈಯಕ್ತಿಕ ಅಂದ್ರೆ ಏನೆಂದು ಸಿಎಂ ಹೇಳಲಿ: ನೇಹಾ ತಂದೆ

KannadaprabhaNewsNetwork |  
Published : Apr 20, 2024, 01:08 AM IST

ಸಾರಾಂಶ

ಮುಖ್ಯಮಂತ್ರಿ, ಗೃಹ ಸಚಿವರು ವೈಯಕ್ತಿಕ ಕಾರಣಕ್ಕೆ ನೇಹಾ ಹತ್ಯೆ ನಡೆದಿರುವುದು ಎಂದು ಹೇಳಿಕೆ ನೀಡಿರುವುದು ಸರಿಯಲ್ಲ. ನಾವೇನು ಮುಸ್ಲಿಮರ ಸಂಬಂಧಿಕರಾ? ವೈಯಕ್ತಿಕ ಎಂದರೆ ಏನೆಂಬುದನ್ನು ಮುಖ್ಯಮಂತ್ರಿ ಸ್ಪಷ್ಟಪಡಿಸಲಿ ಎಂದು ಕೊಲೆಯಾದ ನೇಹಾ ತಂದೆಯೂ ಆಗಿರುವ ಪಾಲಿಕೆಯ ಕಾಂಗ್ರೆಸ್‌ ಸದಸ್ಯ ನಿರಂಜನಯ್ಯ ಹಿರೇಮಠ ಒತ್ತಾಯಿಸಿದರು.

- ವೈಯಕ್ತಿಕ ಕಾರಣಕ್ಕೆ ನಡೆದ ಕೊಲೆ ಎಂಬ ಸಿಎಂ ಹೇಳಿಕೆಗೆ ನೇಹಾ ತಂದೆ ನಿರಂಜನಯ್ಯ ಕಿಡಿಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ನಮ್ಮ ಕುಟುಂಬ ಈಗಾಗಲೇ ಮಗಳನ್ನು ಕಳೆದುಕೊಂಡು ದುಖಃದಲ್ಲಿದೆ. ಮುಖ್ಯಮಂತ್ರಿ, ಗೃಹ ಸಚಿವರು ವೈಯಕ್ತಿಕ ಕಾರಣಕ್ಕೆ ಹತ್ಯೆ ನಡೆದಿರುವುದು ಎಂದು ಹೇಳಿಕೆ ನೀಡಿರುವುದು ಸರಿಯಲ್ಲ. ನಾವೇನು ಮುಸ್ಲಿಮರ ಸಂಬಂಧಿಕರಾ? ವೈಯಕ್ತಿಕ ಎಂದರೆ ಏನೆಂಬುದನ್ನು ಮುಖ್ಯಮಂತ್ರಿ ಸ್ಪಷ್ಟಪಡಿಸಲಿ ಎಂದು ಕೊಲೆಯಾದ ನೇಹಾ ತಂದೆಯೂ ಆಗಿರುವ ಪಾಲಿಕೆಯ ಕಾಂಗ್ರೆಸ್‌ ಸದಸ್ಯ ನಿರಂಜನಯ್ಯ ಹಿರೇಮಠ ಒತ್ತಾಯಿಸಿದರು.

ಶುಕ್ರವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಕುಟುಂಬ ಈಗಾಗಲೇ ಈ ಘಟನೆಯಿಂದಾಗಿ ಭಯದಲ್ಲಿಯೇ ಕಾಲಕಳೆಯುತ್ತಿದೆ. ನಾನು ಕಾಂಗ್ರೆಸ್‌ ಪಕ್ಷದಿಂದಲೇ ಚುನಾಯಿತನಾಗಿರುವ ಪಾಲಿಕೆ ಸದಸ್ಯ. ಇಂತಹ ಘಟನೆ ನಡೆದ ವೇಳೆ ರಾಜ್ಯ ಸರ್ಕಾರ ನಮ್ಮ ಪರವಾಗಿ ನಿಲ್ಲದೆ ಈ ರೀತಿಯ ಹೇಳಿಕೆ ನೀಡುತ್ತಿರುವುದು ನೋವುಂಟು ಮಾಡಿದೆ. ಇದನ್ನೆಲ್ಲ ನಮ್ಮ ಸಮಾಜ ಬಾಂಧವರು ನೋಡುತ್ತಿದ್ದಾರೆ. ಈಗಾಗಲೇ ವೀರಶೈವ ಲಿಂಗಾಯತ ಸಮಾಜದ ಹಿರಿಯರಾದ ಶಾಮನೂರು ಶಿವಶಂಕರಪ್ಪ ಕರೆ ಮಾಡಿ ಧೈರ್ಯ ತುಂಬಿ, ಯಾವುದೇ ರೀತಿಯಲ್ಲೂ ಭಯಬೇಡ. ನಿಮ್ಮೊಂದಿಗೆ ಸಮಾಜ ನಿಲ್ಲಲಿದೆ. ಪಕ್ಷದ ಬಗ್ಗೆ ತಲೆಕೆಡಿಸಿಕೊಳ್ಳದೇ ಆಗಿರುವ ಘಟನೆ ಕುರಿತು ನೇರವಾಗಿ ಉತ್ತರ ನೀಡುವಂತೆ ತಿಳಿಸಿದ್ದಾರೆ ಎಂದರು.

ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ: ನನ್ನ ಮಗಳು ಲವ್‌ ಜಿಹಾದ್‌ಗೆ ಬಲಿಯಾಗಿಲ್ಲ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಮಗಳದೇ ತಪ್ಪು ಇರುವಂತೆ ಬಿಂಬಿಸಿ ಸುಳ್ಳು ವಿಡಿಯೋ ಹರಿಬಿಟ್ಟು ಅವಳ ತೇಜೋವಧೆ ಮಾಡುವ ಯತ್ನ ಮಾಡಲಾಗುತ್ತಿದೆ. ಇದೆಲ್ಲ ಸಂಪೂರ್ಣ ಸುಳ್ಳು. ಇದನ್ನು ತಕ್ಷಣ ನಿಲ್ಲಿಸಲಿ. ಆರೋಪಿಯನ್ನು ಗುಂಡಿಟ್ಟು ಕೊಲ್ಲಬೇಕು, ಇಲ್ಲವೇ ಗಲ್ಲುಶಿಕ್ಷೆಗೆ ಒಳಪಡಿಸಬೇಕು. ಅಂದಾಗ ಮಾತ್ರ ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದರು.

ಬಿಜೆಪಿಯ ಅನೇಕ ನಾಯಕರು ನನ್ನ ಮನೆಗೆ ಭೇಟಿ ನೀಡಿ ನನ್ನ ಕುಟುಂಬದವರನ್ನು ಭೇಟಿಯಾಗಿ ಧೈರ್ಯ ತುಂಬುವ ಕಾರ್ಯ ಮಾಡಿದ್ದಾರೆ. ನಿಮ್ಮೊಂದಿಗೆ ನಾವಿದ್ದೇವೆ ಧೈರ್ಯ ಕಳೆದುಕೊಳ್ಳಬೇಡಿ ಎಂದು ತಿಳಿಸಿದ್ದಾರೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್‌ಪಿಜಿ ಪೂರೈಕೆ ಸುಧಾರಣೆ: ಸಪ್ಲೈ ಶೇ.20ರಷ್ಟು ಏರಿಕೆ
ಬಾಗಲಕೋಟೆ, ದಾವಣಗೆರೆ ಕ್ಷೇತ್ರಕ್ಕೆ ಏ.9ಕ್ಕೆ ಉಪಸಮರ