ಹೊಸಕೋಟೆ: ದೇಶದಲ್ಲಿ ಬಿಜೆಪಿ ಪಕ್ಷ ದೇಶಭಕ್ತಿ, ಜನಸೇವೆಗಾಗಿ ಸ್ಥಾಪನೆಗೊಂಡ ಏಕೈಕ ಪಕ್ಷವಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ತ.ರಾ. ವೆಂಕಟೇಶ್ ತಿಳಿಸಿದರು
ಹೊಸಕೋಟೆ: ದೇಶದಲ್ಲಿ ಬಿಜೆಪಿ ಪಕ್ಷ ದೇಶಭಕ್ತಿ, ಜನಸೇವೆಗಾಗಿ ಸ್ಥಾಪನೆಗೊಂಡ ಏಕೈಕ ಪಕ್ಷವಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ತ.ರಾ. ವೆಂಕಟೇಶ್ ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷ ಸ್ಥಾಪನೆಯಾದ ಸಂದರ್ಭದಲ್ಲಿ ದೇಶದಲ್ಲಿ ಕೇವಲ ಎರಡು ಲೋಕಸಭಾ ಸ್ಥಾನಗಳನ್ನು ಪಡೆದಿತ್ತು. ಆದರೆ ಇಂದು ಪ್ರಪಂಚದ ಯಾವುದೇ ಪಕ್ಷಕ್ಕೂ ಇಲ್ಲದಷ್ಟು ಕಾರ್ಯಕರ್ತರನ್ನು ಹೊಂದುವ ಮೂಲಕ ವಿಶ್ವದಲ್ಲೆ ದೊಡ್ಡ ಪಕ್ಷವಾಗಿದೆ. ಸಂಕಲ್ಪ ಸೇವೆ ಮತ್ತು ಸಮರ್ಪಣಾ ಮನೋಭಾವದ ಮೂಲಕ ಬಿಜೆಪಿಯನ್ನು ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಬೆಳೆಸಿದ ಪ್ರತಿಯೊಬ್ಬ ಕಾರ್ಯಕರ್ತನಿಗೆ ಸಲ್ಲುವಂತಹದು. ಪ್ರತಿ ಹೆಜ್ಜೆಯಲ್ಲೂ ಕಾರ್ಯಕರ್ತರ ತ್ಯಾಗ, ಹಿರಿಯರ ಮಾರ್ಗದರ್ಶನ, ಮತ್ತು ಜನರ ವಿಶ್ವಾಸದೊಂದಿಗೆ ಕೆಲಸ ಮಾಡುತ್ತಿದೆ. ಅದರ ಪರಿಣಾಮ ಇಂದು ನರೇಂದ್ರ ಮೋದಿಯಂತಹ ಓರ್ವ ಸಾಮಾನ್ಯ ಕಾರ್ಯಕರ್ತ ಇಂದು ದೇಶದ ಪ್ರಧಾನಿಯಾಗಲು ಸಾಧ್ಯವಾಗಿದೆ. ಇದು ಬಿಜೆಪಿ ಪಕ್ಷದಲ್ಲಿ ಮಾತ್ರ ಸಾಧ್ಯ ಎಂದರು.
ಹೊಸಕೋಟೆ ಟೌನ್ ಬಿಜೆಪಿ ಅದ್ಯಕ್ಷ ಬಾಲಚಂದ್ರ ಮಾತನಾಡಿ, 1980ರಲ್ಲಿ ಪಕ್ಷ ಸ್ಥಾಪನೆಯಾಗಿದ್ದು ಅಂದಿನಿಂದ ಇಂದಿನವರೆಗೆ ಕಾರ್ಯಕರ್ತರು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದಲೆ ಜನರ ವಿಶ್ವಾಸವನ್ನು ಗಳಿಸಲು ಸಾಧ್ಯವಾಗಿದೆ. ಬಿಜೆಪಿ ಸಂಸ್ಥಾಪನಾ ದಿನ ಕೇವಲ ಆಚರಣೆಯ ದಿನವಲ್ಲ, ಬದಲಾಗಿ ಪ್ರತಿಯೊಬ್ಬ ಕಾರ್ಯಕರ್ತನಿಗೆ ಭಾವನಾತ್ಮಕ ಸಂದರ್ಭವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ್‌ಗೌಡ, ಜಿಲ್ಲಾ ಕಾರ್ಯದರ್ಶಿ ಮುರಳಿ, ಟೌನ್ ಅಧ್ಯಕ್ಷ ಬಾಲಚಂದ್ರ, ತಾಲೂಕು ಪ್ರಧಾನ ಕಾರ್ಯದರ್ಶಿ ಮುನಿನಂಜಪ್ಪ, ನಗರ ಮಂಡಲ ಯುವ ಮೋರ್ಚಾ ಅಧ್ಯಕ್ಷ ಕಿರಣ್, ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಯಶೋಧಾ, ಎಸ್ಸಿ ಮೋರ್ಚಾ ಅಧ್ಯಕ್ಷ ನರಸಿಂಹಯ್ಯ, ಆರೆಸ್ಸೆಸ್ ಪ್ರಮುಖರಾದ ಮಹೇಶ್ ಯಾದವ್, ರವಿ ಇತರರು ಹಾಜರಿದ್ದರು.
ಫೋಟೋ: 7 ಹೆಚ್‌ಎಸ್‌ಕೆ 2
ಹೊಸಕೋಟೆಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸಂಸ್ಥಾಪನಾ ದಿನದ ಪ್ರಯುಕ್ತ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತ.ರಾ.ವೆಂಕಟೇಶ್ ಹಾಗೂ ಕಾರ್ಯಕರ್ತರು ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.