ರಾಮನಗರ: ರಾಜ್ಯ ರಾಜಕಾರಣದಲ್ಲಿ ವಲಸೆ ಹಕ್ಕಿ ಎಂದೇ ಕರೆಯಲ್ಪಡುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಬಿಜೆಪಿ ತೊರೆದು ಕಾಂಗ್ರೆಸ್ ಗೂಡಿಗೆ ಹಾರಿರುವುದು ರಾಮನಗರ ಮಾತ್ರವಲ್ಲದೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಪರಿಸ್ಥಿತಿ ನಾವಿಕನಿಲ್ಲದ ಹಡಗಿನಂತಾಗಿದೆ.
ಮೈತ್ರಿ ಸರ್ಕಾರ ಕೆಡವಿದ ಸೈನಿಕ:
2018ರಲ್ಲಿ ಅಸ್ತಿತ್ವಕ್ಕೆ ಬಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಕೆಡವಿ 2019ರಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಯೋಗೇಶ್ವರ್ ಪ್ರಮುಖ ಪಾತ್ರ ವಹಿಸಿದ್ದರು. ಆದರೂ ಕಮಲ ಪಾಳಯದೊಳಗಿನ ಒಳಬೇಗುದಿ ಅವರಿಗೆ ಸಚಿವ ಸ್ಥಾನ ಕೈತಪ್ಪುವಂತೆ ಮಾಡಿತು. 2020ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ನೇಮಕಗೊಂಡರು.ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ನ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನ ಡಿ.ಕೆ.ಶಿವಕುಮಾರ್ ಪ್ರಭಾವಿ ಒಕ್ಕಲಿಗ ನಾಯಕರಾಗಿದ್ದರು. ಹೀಗಾಗಿ ಬಿಜೆಪಿ ಅವರಿಬ್ಬರ ಬಲ ಕುಗ್ಗಿಸಲು ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡಿತು. 2021ರಲ್ಲಿ ಕೇವಲ 7 ತಿಂಗಳು ಮಾತ್ರ ಪ್ರವಾಸೋದ್ಯಮ ಸಚಿವರಾಗಿದ್ದರು. ಇದರಿಂದ ಎದೆಗುಂದದ ಯೋಗೇಶ್ವರ್, ರಾಮನಗರ ಮಾತ್ರವಲ್ಲದೆ ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಅವಿರಿತವಾಗಿ ಹೋರಾಡಿ ಸ್ಥಳೀಯ ಸಂಸ್ಥೆಗಳಲ್ಲಿ ಕಮಲ ಅರಳಿಸಿದರು.
2023ರ ವಿಧಾನಸಭಾ ಚುನಾವಣೆ ವೇಳೆಗೆ ಹಳೇ ಮೈಸೂರು ಭಾಗದ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಲ್ಲಿ ಅಸಮಾಧಾನಗೊಂಡಿದ್ದ ನಾಯಕರು ಹಾಗೂ ಮಂಡ್ಯ ಸಂಸದರಾಗಿದ್ದ ಸುಮಲತಾ ಅಂಬರೀಷ್ ಅವರನ್ನು ಕರೆತಂದು ಬಿಜೆಪಿ ಪಕ್ಷಕ್ಕೆ ಶಕ್ತಿ ತುಂಬಿದರು. ಇದರಿಂದ ವಿಧಾನಸಭಾ ಚುನಾವಣೆಯಲ್ಲಿ ಮತಗಳಿಕೆ ಪ್ರಮಾಣ ಹೆಚ್ಚಿತು. ಆದರೆ, ಬಿಜೆಪಿ ಮತ್ತು ಜೆಡಿಎಸ್ ಮತಗಳ ಧ್ರುವೀಕರಣ ಕಾಂಗ್ರೆಸ್‌ಗೆ ಲಾಭ ತಂದುಕೊಟ್ಟಿತು.
ಹಳೇ ಮೈಸೂರು ಭಾಗ ಒಕ್ಕಲಿಗರ ಪ್ರಾಬಲ್ಯವುಳ್ಳ ಪ್ರದೇಶ. ಇಲ್ಲಿ ಪ್ರಬಲ ಒಕ್ಕಲಿಗ ನಾಯಕರಾಗಿದ್ದ ಯೋಗೇಶ್ವರ್, ಬಿಜೆಪಿ ಪಾಲಿನ ರಾಜಕೀಯ ಚಾಣಕ್ಷನಂತಿದ್ದರು. ಇಷ್ಟಾದರೂ ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನಿರಾಕರಿಸಿದ್ದು ಯೋಗೇಶ್ವರ್ ಅವರಿಗೆ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಹಿನ್ನಡೆಯಾದಂತಾಯಿತು.
ಈ ಕಾರಣದಿಂದಲೇ ಬಿಜೆಪಿ ತೊರೆಯುವ ದೃಢ ನಿರ್ಧಾರ ಮಾಡಿದ ಯೋಗೇಶ್ವರ್ ಅಂತಿಮವಾಗಿ ಕಾಂಗ್ರೆಸ್ ಪಾಳಯ ಸೇರಿಕೊಂಡಿದ್ದಾರೆ. ಪ್ರಬಲ ನಾಯಕನನ್ನು ಕಳೆದುಕೊಂಡು ಸೊರಗಿರುವ ಕಮಲಕ್ಕೆ ಬಲ ತುಂಬುವವರು ಯಾರು ಎಂಬ ಪ್ರಶ್ನೆ ಬಿಜೆಪಿಯಲ್ಲಿ ಮೂಡಿದೆ.
ಇದೆಲ್ಲದರ ನಡುವೆ ಜಿಲ್ಲೆಯಲ್ಲಿ ಬಿಜೆಪಿ ಬಲಹೀನವಾಗುತ್ತಿದೆಯೇನೋ ಎನ್ನುವ ಪ್ರಶ್ನೆ ಸಹಜವಾಗಿಯೇ ಮೂಡಿದೆ. ಮುಂಬರುವ ಚುನಾವಣೆಗಳನ್ನು ಹೇಗೆ ಎದುರಿಸಬೇಕು ಎಂಬ ಆತಂಕ ಕಾರ್ಯಕರ್ತರನ್ನು ಕಾಡಲಾರಂಭಿಸಿದೆ. ರಾಜ್ಯ ನಾಯಕ ಎನಿಸಿಕೊಂಡಿರುವ ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಬೆಂಗಳೂರಿಗೆ ಸೀಮಿತವಾಗಿದ್ದಾರೆ.
ಗೊಂದಲದಲ್ಲಿ ಕಾರ್ಯಕರ್ತರು:
ಬಾಕ್ಸ್ ..............
ರಾಜಕೀಯ ನಿಂತ ನೀರಲ್ಲರಾಜಕೀಯ ನಿಂತ ನೀರಲ್ಲ. ಇಲ್ಲಿ ಯಾರೂ ಶತ್ರುಗಳಲ್ಲ, ಮಿತ್ರರೂ ಅಲ್ಲ ಎನ್ನುವ ಮಾತಿಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಸಾಕ್ಷಿಯಾಗಿದ್ದಾರೆ. ಒಂದು ಕಾಲದಲ್ಲಿ ಡಿ.ಕೆ.ಶಿವಕುಮಾರ್ ಆಪ್ತರಾಗಿದ್ದ ಯೋಗೇಶ್ವರ್ ಬಿಜೆಪಿ ಸೇರಿ ಕಡು ವೈರಿಯಾಗಿದ್ದರು. ಉಭಯ ನಾಯಕರ ನಡುವೆ ವಾಕ್ಸಮರವೇ ನಡೆದು ಹೋಗಿತ್ತು. 2018ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ರಾಜೀನಾಮೆ ಕೊಡಿಸಿದ್ದು ಮಾತ್ರವಲ್ಲದೆ ಬಂಡಾಯ ಶಾಸಕರನ್ನು ಎತ್ತಿ ಕಟ್ಟಿ ಮೈತ್ರಿ ಸರ್ಕಾರ ಕೆಡವಿದ ಕೀರ್ತಿಯೂ ಯೋಗೇಶ್ವರ್ ಅವರಿಗೆ ಸಲ್ಲುತ್ತದೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಯೋಗೇಶ್ವರ್ ವಿರುದ್ಧ ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸಿದರು. ಈ ವೇಳೆ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ತಮ್ಮ ಬದ್ಧ ರಾಜಕೀಯ ವೈರಿ ಯೋಗೇಶ್ವರ್ ಸೋಲಿಸಲು ಹಿಂಬಾಗಿಲ ಮೂಲಕ ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಿದ್ದು ಬಹಿರಂಗ ಸತ್ಯ.2024ರ ಲೋಕಸಭಾ ಚುನಾವಣೆಯಲ್ಲಿ ಶತ್ರುವಿನ ಶತ್ರು ಮಿತ್ರ ಎಂಬ ಮಾತಿನಂತೆ ಯೋಗೇಶ್ವರ್ ತಮ್ಮ ರಾಜಕೀಯ ವಿರೋಧಿ ಕುಮಾರಸ್ವಾಮಿ ಅವರೊಂದಿಗೆ ಕೈಜೋಡಿಸಿದರು. ಈಗ ಚನ್ನಪಟ್ಟಣ ಉಪಚುನಾವಣೆ ಎದುರಾದ ಮೇಲೆ ಯೋಗೇಶ್ವರ್ ಹಳೆಯ ರಾಜಕೀಯ ವೈಷಮ್ಯ ಮರೆತು ಡಿ.ಕೆ.ಶಿವಕುಮಾರ್ ಅವರೊಂದಿಗೆ ಕೈ ಜೋಡಿಸಿದ್ದಾರೆ.
(ಸಿ.ಪಿ.ಯೋಗೇಶ್ವರ್ ಮಗ್‌ಶಾಟ್ ಬಳಸಿ)