ಹಳ್ಳದಲ್ಲಿ ಕೊಚ್ಚಿಹೋಗಿದ್ದ 12 ಎಮ್ಮೆಗಳ ಕಳೇಬರ ಪತ್ತೆ

KannadaprabhaNewsNetwork | Updated : Oct 24 2024, 12:45 AM IST

ಸಾರಾಂಶ

ಕೊಂಡುಬಾಯಿ ಜನ್ನು ಖರಾತ್ ಅವರ ೩ ಎಮ್ಮೆಗಳು, ಕೊಂಡು ಬಾಗು ಎಡಗೆ ಅವರ ೬ ಎಮ್ಮೆಗಳು, ಜಿಮ್ಮು ಬಾಬು ಎಡಗೆ ಅವರ ೨ ಎಮ್ಮೆಗಳು ಮತ್ತು ವಡಗಟ್ಟದ ವಾಚಮನ್ ಈರಪ್ಪ ಅವರ ೧ ಎಮ್ಮೆ ಸೇರಿದಂತೆ ಒಟ್ಟು ೧೨ ಎಮ್ಮೆಗಳು ಹಳ್ಳದಲ್ಲಿ ಮೃತಪಟ್ಟಿವೆ.

ಮುಂಡಗೋಡ: ನಿರಂತರ ಧಾರಾಕಾರವಾಗಿ ಸುರಿದ ಮಳೆಗೆ ಅತ್ತಿವೇರಿ ಗೌಳಿ ದಡ್ಡಿ ಸೋಮನಕೆರೆ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಸುಮಾರು ೧೨ ಎಮ್ಮೆಗಳ ಕಳೇಬರಗಳು ಬುಧವಾರ ಪತ್ತೆಯಾಗಿವೆ.ಕೊಂಡುಬಾಯಿ ಜನ್ನು ಖರಾತ್ ಅವರ ೩ ಎಮ್ಮೆಗಳು, ಕೊಂಡು ಬಾಗು ಎಡಗೆ ಅವರ ೬ ಎಮ್ಮೆಗಳು, ಜಿಮ್ಮು ಬಾಬು ಎಡಗೆ ಅವರ ೨ ಎಮ್ಮೆಗಳು ಮತ್ತು ವಡಗಟ್ಟದ ವಾಚಮನ್ ಈರಪ್ಪ ಅವರ ೧ ಎಮ್ಮೆ ಸೇರಿದಂತೆ ಒಟ್ಟು ೧೨ ಎಮ್ಮೆಗಳು ಹಳ್ಳದಲ್ಲಿ ಮೃತಪಟ್ಟಿವೆ.ಮಂಗಳವಾರ ಮೇಯಲು ಹೋಗಿದ್ದ ಎಮ್ಮೆಗಳು ಭಾರಿ ಮಳೆಯ ರಭಸಕ್ಕೆ ಅತ್ತಿವೇರಿ ಡ್ಯಾಂಗೆ ಸೇರುವ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದವು. ಇದೇ ರೀತಿ ಮಳೆಯ ರೌದ್ರಾವತಾರಕ್ಕೆ ತಾಲೂಕಿನ ಇನ್ನು ಹಲವು ಭಾಗಗಳಲ್ಲಿ ಜಾನುವಾರುಗಳು ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಕೇಳಿ ಬಂದಿದೆ. ವಾಹನಗಳ ಮೇಲೆ ಆಲದ ಮರದ ಕೊಂಬೆ ಬಿದ್ದು ಹಾನಿ

ಭಟ್ಕಳ: ಶಿರಾಲಿಯ ಗುಮ್ಮನಹಕ್ಕಲ ಕ್ರಾಸ್‌ನಲ್ಲಿದ್ದ ಬೃಹತ್ ಗಾತ್ರದ ಆಲದ ಮರದ ಕೊಂಬೆಯೊಂದು ಮುರಿದು ಬಿದ್ದ ಪರಿಣಾಮ ಒಂದು ಆಟೋ ರಿಕ್ಷಾ ಹಾಗೂ ಮೂರು ದ್ವಿಚಕ್ರ ವಾಹನ ಜಖಂಗೊಂಡಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.ಗುಮ್ಮನಹಕ್ಕಲ ಕ್ರಾಸ್ ಬಳಿಯಿರುವ ಆಲದ ಮರವು ನೂರಾರು ವರ್ಷಗಳ ಹಳೆಯದಾಗಿದ್ದು, ಬೃಹದಾಕಾರದ ಕೊಂಬೆಗಳನ್ನು ಹೊಂದಿದೆ. ಬುಧವಾರ ಬೆಳಗ್ಗೆ ಮರದ ದೊಡ್ಡ ಕೊಂಬೆಯೊಂದು ಮುರಿದು ಬಿದ್ದಿದ್ದು, ಆ ಸಮಯದಲ್ಲಿ ಮರದ ಕೆಳಗಡೆ ನಿಲ್ಲಿಸಿಡಲಾಗಿದ್ದ ಒಂದು ಆಟೋ ರಿಕ್ಷಾಕ್ಕೆ ಹಾಗೂ ಮೂರು ದ್ವಿಚಕ್ರ ವಾಹನಗಳಿಗೆ ಮರದ ಕೊಂಬೆ ಬಡಿದು ಹಾನಿಯಾಗಿದೆ.

ಮರದ ಅಡಿಯಲ್ಲಿ ಯಾರೂ ಇಲ್ಲವಾಗಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಮರದ ಕೊಂಬೆ ರಸ್ತೆಯ ಮೇಲೆಯೇ ಬಿದ್ದಿರುವುದರಿಂದ ಕೆಲಕಾಲ ಜನರಲ್ಲಿ ಆತಂಕದ ವಾತಾವರಣ ಮೂಡಿದ್ದು, ನಂತರ ಮರದ ಕೊಂಬೆಯಲ್ಲಿ ಸ್ಥಳಾಂತರ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

Share this article