ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೈಪ್ಲೈಯರ್ಸ್ ತಂಡದ ಅಧ್ಯಕ್ಷ ಅಮ್ಮಣಿಚಂಡ ರಂಜು ಪೂಣಚ್ಚ, ಈ ಕೌಟುಂಬಿಕ ಹಾಕಿ ಪಂದ್ಯಾವಳಿ ವಿ. ಬಾಡಗ ಗ್ರಾಮದಲ್ಲಿ 3ನೇ ಬಾರಿಗೆ ಜರುಗುತ್ತಿದೆ. ವಿ.ಬಾಡಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಒಟ್ಟು 5 ದಿನಗಳ ಕಾಲ ನಡೆಯುವ ಈ ಹಾಕಿ ಪಂದ್ಯಾವಳಿಗಾಗಿ ಈಗಾಗಲೇ ಸಿದ್ಧತೆಗಳು ಆರಂಭಗೊಂಡಿರುವುದಾಗಿ ತಿಳಿಸಿದರು.
ಕುಟುಂಬ ತಂಡಗಳಲ್ಲಿ ಗರಿಷ್ಠ 4 ಅತಿಥಿ ಆಟಗಾರರು ಭಾಗವಹಿಸಬಹುದು. ಆದರೆ ಅತಿಥಿ ಆಟಗಾರರು ಕಡ್ಡಾಯವಾಗಿ ಕೊಡವ ಆಟಗಾರರಾಗಿರಬೇಕು. ವಿಜೇತ ತಂಡಗಳಿಗೆ ಆಕರ್ಷಕ ನಗದು ಬಹುಮಾನ ಮತ್ತು ಕೊಡವ ಸಾಂಪ್ರದಾಯಿಕ ಪಾರಿತೋಷಕಗಳನ್ನು ನೀಡಿ ಗೌರವಿಸಲಾಗುವುದು ಎಂದರು.ಕ್ರೀಡಾ ಪ್ರೇಮಿಗಳ ಆರ್ಥಿಕ ನೆರವಿನಿಂದ ಕಳೆದ ಎರಡು ವರ್ಷ ಪಂದ್ಯಾವಳಿ ಯಶಸ್ವಿಯಾಗಿ ನಡೆದಿದೆ. ಈ ಬಾರಿಯೂ ಸಂಪೂರ್ಣವಾಗಿ ದಾನಿಗಳ ನೆರವಿನಿಂದಲೇ ಪಂದ್ಯಾವಳಿ ಜರುಗಲಿದ್ದು, ಗ್ರಾಮಸ್ಥರು ಮತ್ತು ಪ್ರಾಯೋಜಕರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು.
ಆಸಕ್ತ ಕುಟುಂಬ ತಂಡಗಳು ಪಂದ್ಯಾವಳಿಗೆ ಹೆಸರು ನೋಂದಾಯಿಸಲು ನ.20 ಕೊನೆಯ ದಿನವಾಗಿರುತ್ತದೆ. ಪಂದ್ಯಾವಳಿಯ ಕುರಿತು ಹೆಚ್ಚಿನ ಮಾಹಿತಿಗಾಗಿ 9481883738/ 9448306340 ಅನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಸಂಸ್ಥೆಯ ಕ್ರೀಡಾ ಕಾರ್ಯದರ್ಶಿ ಕುಪ್ಪಂಡ ದಿಲನ್ ಬೋಪಣ್ಣ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಹಾಕಿ ಪಂದ್ಯಾವಳಿಯನ್ನು ನಿರಂತರವಾಗಿ ಆಯೋಜಿಸುವುದರಿಂದ ಹಾಕಿ ಕ್ರೀಡೆಗೆ ಮತ್ತಷ್ಟು ಉತ್ತೇಜನ ದೊರೆತಂತಾಗುತ್ತದೆ. ಗ್ರಾಮೀಣ ಮಟ್ಟದ ಕ್ರೀಡಾಕೂಟಗಳಿಂದ ಸಾಕಷ್ಟು ಹೊಸ ಪ್ರತಿಭೆಗಳಿಗೆ ಅವಕಾಶ ದೊರೆತಂತಾಗುತ್ತದೆ. ಕಳೆದ ಬಾರಿ ಆಯೋಜಿಸಿದ್ದ ಈ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಒಟ್ಟು 19 ಕುಟುಂಬ ತಂಡಗಳು ಭಾಗವಹಿಸಿದ್ದವು. ಈ ಬಾರಿ 25 ತಂಡಗಳನ್ನು ನಿರೀಕ್ಷಿಸಲಾಗಿದೆ ಎಂದು ಹೇಳಿದರು.ಸಂಸ್ಥೆಯ ಸಲಹಾ ಸಮಿತಿ ನಿರ್ದೇಶಕ ಕೊಂಗಂಡ ಕಾಶಿ ಕಾರ್ಯಪ್ಪ, ಉಪಾಧ್ಯಕ್ಷರಾದ ಕಂಜಿತಂಡ ವಿಕ್ರಾಂತ್ ಮತ್ತು ಸ್ವಾಗತ ಸಮಿತಿ ಸಂಚಾಲಕ ಚೇಮಿರ ಪ್ರಭು ಪೂವಯ್ಯ ಇದ್ದರು.