ಬಿ.ಎಚ್‌.ಎಂ. ಗುರುಶಾಂತ ಶಾಸ್ತ್ರಿ

ಕಂಪ್ಲಿ: ಅಭಿವೃದ್ಧಿ ಮಾನದಂಡದಲ್ಲಿ ಅತ್ಯಂತ ಹಿಂದುಳಿದಿರುವ ಕಂಪ್ಲಿ ತಾಲೂಕು ಈ ಬಾರಿಯ ಬಜೆಟ್‌ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಹೊತ್ತು ಕೂತಿದೆ.

ಹೆಸರಿಗಷ್ಟೇ ತಾಲೂಕು ಕೇಂದ್ರ. ಅಭಿವೃದ್ಧಿಯಲ್ಲಿ ಹೋಬಳಿಗಿಂತಲೂ ತಾತ್ಸಾರ ಹೊಂದಿರುವ ಕಂಪ್ಲಿ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಪ್ರಗತಿಗೆ ಈವರೆಗಿನ ನಿರ್ಲಕ್ಷ್ಯದಿಂದ ರೋಸಿ ಹೋಗಿರುವ ಜನರು ಕಲ್ಯಾಣ ಕಾರ್ಯಗಳಿಗೆ ಬಜೆಟ್‌ನಲ್ಲಿ ಅನುದಾನ ಸಿಗುವ ಆಸೆ ಹೊಂದಿದ್ದಾರೆ.

ತಾಲೂಕು ಮಟ್ಟದ ಸರ್ಕಾರಿ ಕಚೇರಿಗಳ ಸ್ಥಾಪನೆ, ಸಕ್ಕರೆ ಕಾರ್ಖಾನೆ, ಕೃಷಿ ಸಂಶೋಧನಾ ಕೇಂದ್ರ ಹಾಗೂ ಸಮಗ್ರ ಕ್ರೀಡಾಂಗಣ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳಿಗೆ ಈ ಬಾರಿ ಹಸಿರು ನಿಶಾನೆ ಸಿಗಬಹುದೆಂಬ ಆಶಾಭಾವನೆ ಮೂಡಿದೆ.

ಗತಿಸಿದ ಎಂಟು ವರ್ಷ: 2018ರಲ್ಲಿ ಕಂಪ್ಲಿ ನೂತನ ತಾಲೂಕು ಕೇಂದ್ರವಾಗಿ ಘೋಷಣೆಯಾದ ಬಳಿಕ ಜನರಲ್ಲಿ ಅಭಿವೃದ್ಧಿಯ ನಿರೀಕ್ಷೆ ಮೂಡಿತ್ತು. ಆದರೆ ಎಂಟು ವರ್ಷಗಳು ಕಳೆದರೂ ಸಂಪೂರ್ಣ ಆಡಳಿತ ವ್ಯವಸ್ಥೆ ಸ್ಥಾಪನೆಯಾಗಿಲ್ಲ ಎಂಬ ದೂರುಗಳು ಹೆಚ್ಚಾಗಿವೆ.


ಕೆಲವೇ ಇಲಾಖೆಗಳ ತಾಲೂಕು ಮಟ್ಟದ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, ಇನ್ನೂ ಅನೇಕ ಪ್ರಮುಖ ಇಲಾಖೆಗಳ ಸೇವೆಗಳು ಪ್ರಾರಂಭವಾಗಿಲ್ಲ.

ಇದರಿಂದ ಸಣ್ಣ ಪುಟ್ಟ ಆಡಳಿತಾತ್ಮಕ ಕೆಲಸಗಳಿಗೂ ಜನರು ಬಳ್ಳಾರಿ ನಗರಕ್ಕೆ ತೆರಳಬೇಕಾದ ಅನಿವಾರ್ಯ ಪರಿಸ್ಥಿತಿ ಮುಂದುವರಿದಿದೆ. ಮಿನಿ ಸೌಧದ ಕಾಮಗಾರಿ ಪೂರ್ಣಗೊಳ್ಳದಿರುವುದು ಸ್ಥಳೀಯರಲ್ಲಿ ಬೇಸರ ಮೂಡಿಸಿದೆ.

ವಸತಿ ಶಾಲೆಗಳ ಸ್ಥಾಪಿಸಿ: ಪಟ್ಟಣದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಅನುಕೂಲವಾಗುವಂತೆ ನವೋದಯ ಶಾಲೆ, ಏಕಲವ್ಯ ಮಾದರಿ ವಸತಿ ಶಾಲೆ ಹಾಗೂ ರಾಣಿ ಚೆನ್ನಮ್ಮ ವಸತಿ ನಿಲಯಗಳ ಸ್ಥಾಪನೆ ಕುರಿತು ಶಾಸಕ ಜೆ.ಎನ್. ಗಣೇಶ ಅವರು ಹಿಂದಿನ ಅವಧಿಯಲ್ಲಿ ಭರವಸೆ ನೀಡಿದ್ದರು. ಗ್ರಾಮೀಣ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಈ ಯೋಜನೆಗಳನ್ನು ಘೋಷಿಸಲಾಗಿತ್ತು.

ಪ್ರಸ್ತುತ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಹೊರ ತಾಲೂಕುಗಳಿಗೆ ತೆರಳಬೇಕಾಗಿರುವುದು ಪೋಷಕರಿಗೆ ಆರ್ಥಿಕ ಭಾರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಜೆಟ್‌ನಲ್ಲಿ ಅಗತ್ಯ ಅನುದಾನ ಬಿಡುಗಡೆಯಾಗಿ ವಸತಿ ಶಾಲೆಗಳ ಸ್ಥಾಪನೆಗೆ ಚಾಲನೆ ಸಿಗಬಹುದೇ ಎಂಬ ನಿರೀಕ್ಷೆ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ವ್ಯಕ್ತವಾಗಿದೆ.

ಕೃಷಿ ಸಂಶೋಧನಾ ಕೇಂದ್ರಕ್ಕೆ ಒತ್ತಾಯ: ಕೃಷಿ ಪ್ರಧಾನ ಪ್ರದೇಶವಾಗಿರುವ ಕಂಪ್ಲಿ ತಾಲೂಕಿನ ರೈತರು ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆಗೆ ಬಹುಕಾಲದ ಬೇಡಿಕೆಯಿದೆ. ಸ್ಥಳೀಯ ಮಣ್ಣಿನ ಗುಣಮಟ್ಟ, ನೀರಿನ ಲಭ್ಯತೆ ಹಾಗೂ ಹವಾಮಾನಕ್ಕೆ ಅನುಗುಣವಾದ ಬೆಳೆ ಪದ್ಧತಿಗಳ ಕುರಿತು ತಾಂತ್ರಿಕ ಮಾರ್ಗದರ್ಶನ ದೊರೆಯಲು ಈ ಕೇಂದ್ರ ಸಹಕಾರಿ ಆಗಲಿದೆ ಎಂಬ ಅಭಿಪ್ರಾಯ ರೈತರದ್ದು.

ಪ್ರಸ್ತುತ ಕೃಷಿ ತಂತ್ರಜ್ಞಾನ ಹಾಗೂ ಮಾರುಕಟ್ಟೆ ಮಾಹಿತಿ ಕೊರತೆಯಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸಂಶೋಧನಾ ಕೇಂದ್ರ ಸ್ಥಾಪನೆಯಾದರೆ ಬೆಳೆ ಉತ್ಪಾದನೆ ಹೆಚ್ಚಲು, ಹೊಸ ಬೆಳೆ ವಿಧಾನಗಳನ್ನು ಅಳವಡಿಸಿಕೊಳ್ಳಲು ಹಾಗೂ ಕೃಷಿ ಆದಾಯ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.

ತಾಲೂಕು ಕ್ರೀಡಾಂಗಣ-ಗ್ರಾಮೀಣ ಪ್ರತಿಭೆಗೆ ವೇದಿಕೆ: ತಾಲೂಕು ಮಟ್ಟದ ಸಮಗ್ರ ಕ್ರೀಡಾಂಗಣ ನಿರ್ಮಾಣವೂ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದೆ. ಸೂಕ್ತ ಕ್ರೀಡಾ ಸೌಲಭ್ಯಗಳ ಕೊರತೆಯಿಂದ ಗ್ರಾಮೀಣ ಯುವಕರ ಪ್ರತಿಭೆಗಳು ಬೆಳಕಿಗೆ ಬರಲು ಸಾಧ್ಯವಾಗುತ್ತಿಲ್ಲ. ಆಧುನಿಕ ಸೌಲಭ್ಯಗಳೊಂದಿಗೆ ಕ್ರೀಡಾಂಗಣ ನಿರ್ಮಾಣವಾದರೆ ಅಥ್ಲೆಟಿಕ್ಸ್, ಕ್ರಿಕೆಟ್, ವಾಲಿಬಾಲ್ ಸೇರಿದಂತೆ ವಿವಿಧ ಕ್ರೀಡೆಗಳಿಗೆ ತರಬೇತಿ ಕೇಂದ್ರಗಳ ಸ್ಥಾಪನೆ ಸಾಧ್ಯವಾಗಲಿದೆ.

ಇದರೊಂದಿಗೆ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೆ ಯುವಕರನ್ನು ಸಿದ್ಧಪಡಿಸಲು ಉತ್ತಮ ಅವಕಾಶ ದೊರೆಯಲಿದೆ. ಒಟ್ಟಾರೆ ಆಡಳಿತ, ಶಿಕ್ಷಣ, ಕೃಷಿ, ಕೈಗಾರಿಕೆ ಮತ್ತು ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳು ಸಮರ್ಪಕ ಅನುಷ್ಠಾನಕ್ಕೆ ಬಜೆಟ್‌ನಲ್ಲಿ ಸಾಕಷ್ಟು ಅನುದಾನ ಸಿಗುವ ನಿರೀಕ್ಷೆ ಗರಿಗೆದರಿದೆ.

ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ನೆರವಾಗುವ ಹಲವು ಪ್ರಮುಖ ಯೋಜನೆಗಳಿಗೆ ಅನುಮೋದನೆ ಸಿಗುವ ನಿರೀಕ್ಷೆ ಇದೆ. ವಿಶೇಷವಾಗಿ ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆಗೆ ಸರ್ಕಾರ ಹಸಿರು ನಿಶಾನೆ ತೋರಿಸಬಹುದು ಎಂಬ ನಿರೀಕ್ಷೆಯಿದೆ ಎನ್ನುತ್ತಾರೆ ಕಂಪ್ಲಿ ಶಾಸಕ ಜೆ.ಎನ್.ಗಣೇಶ.