ಕೊಪ್ಪಳ: ಮತಗಳ್ಳತನ ಮಾಡುವ ಮೂಲಕ ಬಿಜೆಪಿ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮೋಸ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಆರೋಪಿಸಿದ್ದಾರೆ.
ಈ ಮೂಲಕ ಮತಗಳ್ಳತನ ಮಾಡುವ ಬಿಜೆಪಿಗರಿಗೆ ಎಚ್ಚರಿಕೆ ಕೊಡುವಂತಹದ್ದು ಅಭಿಯಾನದ ಉದ್ದೇಶವಾಗಿದೆ. ಅಲ್ಲದೆ, ಇನ್ನೂ ಮುಂದೆ ಬಿಜೆಪಿಗರು ಇಂತಹ ಕಳ್ಳಾಟ ನಿಲ್ಲಿಸಬೇಕು, ಜನರು ಬುದ್ದಿವಂತರಾಗಿದ್ದಾರೆ ಎಂದರು.
ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪೂರ ಮಾತನಾಡಿ, ಸಂವಿಧಾನ ಬದ್ಧವಾಗಿ ದೊರೆತ ಅನೇಕ ಹಕ್ಕುಗಳಲ್ಲಿ ಮತದಾನದ ಹಕ್ಕು ಕೂಡ ಪವಿತ್ರ. ಆ ಹಕ್ಕಿನ ಮೂಲಕ ಗ್ರಾಪಂನಿಂದ ಹಿಡಿದು ಲೋಕಸಭಾ ಸದಸ್ಯರ ಆಯ್ಕೆಯವರೆಗೆ ಜನರಿಗೆ ಅವಕಾಶ ನೀಡಲಾಗಿದೆ. ಆದರೆ, ಮತಗಳ್ಳತನದ ಮೂಲಕ ಬಿಜೆಪಿಗರು ಅಧಿಕಾರದ ಚುಕ್ಕಾಣಿ ಹಿಡಿದಿರುವುದು ದುರಂತದ ಸಂಗತಿ.ಕೇವಲ ಒಂದು ಕ್ಷೇತ್ರದಲ್ಲಲ್ಲ ಸುಮಾರು ನೂರಾರು ಕ್ಷೇತ್ರದಲ್ಲಿ ಮತಗಳ್ಳನದ ಮೂಲಕ ಬಿಜೆಪಿ ಗೆದ್ದಿದೆ. ಚುನಾವಣಾಧಿಕಾರಿಗಳು ಪ್ರಧಾನಿ ಮೋದಿ ಮಾತನ್ನು ಕೇಳಿ ಮತಗಳ್ಳತನ ಮಾಡುತ್ತಿದ್ದಾರೆ.ಇದನ್ನು ನ್ಯಾಯಾಲಯದಲ್ಲಿ ನಮ್ಮ ಪಕ್ಷ ಚಾಲೆಂಜ್ ಮಾಡಿದೆ. ಆದರೆ, ಇನ್ನೂ ಮುಂದೆ ಇಂತಹ ಪ್ರಕರಣ ನಡೆಯದಂತೆ ನೋಡಿಕೊಳ್ಳುವ ಭಾಗವಾಗಿ ನಾವೆಲ್ಲರೂ ಭೂತ್ ಮಟ್ಟದಲ್ಲಿ ಕಾರ್ಯತತ್ಪರಾಗೋಣ, ಪ್ರಮುಖವಾಗಿ ಚುನಾವಣೆ ಸಂದರ್ಭದಲ್ಲಿ ಭೂತ್ ಏಜೆಂಟರು ಮುತುವರ್ಜಿ ವಹಿಸಿ ಕೆಲಸ ಮಾಡಬೇಕೆಂದರು.
ಶಾಸಕ ರಾಘವೇಂದ್ರ ಹಿಟ್ನಾಳ್ ಮಾತನಾಡಿ, ಎನ್‌ಡಿಎ ನೇತೃತ್ವದ ಪ್ರಧಾನಿ ಮೋದಿ ದುರಾಡಳಿತದಿಂದ ದೇಶದ ಜನರಿಗೆ ಸಿಗಬೇಕಾದ ಸವಲತ್ತು ಸಿಗುತ್ತಿಲ್ಲ.ಅಲ್ಲದೆ,ಮತಗಳ್ಳತನದ ಮೂಲಕ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯುವ ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೋಲೆ ಬಿಜೆಪಿ ಮಾಡಿದೆ. ಸಂವಿಧಾನ ಬದ್ಧವಾಗಿ ಜನರಿಗಿರುವ ಆಯ್ಕೆಯ ಸ್ವಾತಂತ್ರ್ಯವನ್ನು ಕಸಿದುಕೊಂಡು ದೇಶಕ್ಕೆ ಅಪಮಾನ ಮಾಡಿರುವ ಬಿಜೆಪಿಯ ದುಷ್ಟತನ ಜನರಿಗೆ ಈಗಾಗಲೇ ಸಂಪೂರ್ಣವಾಗಿ ತಿಳಿದಿದೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ, ಕಾಟನ ಪಾಷಾ, ಯಂಕಣ್ಣ ಯರಾಶಿ, ರವಿ ಕುರುಗೋಡ, ಗಾಳೆಪ್ಪ ಪ್ರಜಾರ ಸೇರಿದಂತೆ ಇತರರು ಇದ್ದರು.