ಕಾಂಗ್ರೆಸ್ ಸರ್ಕಾರ ಅಸ್ತಿರಗೊಳಿಸುವ ಬಿಜೆಪಿ ಹುನ್ನಾರ

KannadaprabhaNewsNetwork | Published : Aug 20, 2024 12:53 AM

ಸಾರಾಂಶ

ಪ್ರಾಮಾಣಿಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಸುಳ್ಳು ಆರೋಪ ಹೊರೆಸಲಾಗುತ್ತಿದೆ. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ. 136 ಸೀಟು ಗೆದ್ದು ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಅಸ್ತಿರಗೊಳಿಸುವ ಹುನ್ನಾರ ಬಿಜೆಪಿ ನಡೆಸಿದೆ ಎಂದು ಸಚಿವ ಎಂ.ಬಿ.ಪಾಟೀಲ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಪ್ರಾಮಾಣಿಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಸುಳ್ಳು ಆರೋಪ ಹೊರೆಸಲಾಗುತ್ತಿದೆ. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ. 136 ಸೀಟು ಗೆದ್ದು ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಅಸ್ತಿರಗೊಳಿಸುವ ಹುನ್ನಾರ ಬಿಜೆಪಿ ನಡೆಸಿದೆ ಎಂದು ಸಚಿವ ಎಂ.ಬಿ.ಪಾಟೀಲ ಕಿಡಿಕಾರಿದರು.

ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿಚಾರದಲ್ಲಿ ನಡೆದುಕೊಂಡ ರಾಜ್ಯಪಾಲರ ನಡೆ ಹಾಗೂ ಬಿಜೆಪಿಯ ಕುತಂತ್ರ ಖಂಡಿಸಿ ನಗರದಲ್ಲಿ ಸೋಮವಾರ ಜಿಲ್ಲಾ ಕಾಂಗ್ರೆಸ್ ವತಿಯಿಂದ ರಾಜ್ಯಪಾಲರ ಹಟಾವೋ ಕರ್ನಾಟಕ ಬಚಾವೋ ಬೃಹತ್ ಪ್ರತಿಭಟನಾ ರ್‍ಯಾಲಿಯ ನೇತೃತ್ವ ವಹಿಸಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ಪಾತ್ರವೇ ಇಲ್ಲದ ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್‌ಗೆ ಆದೇಶಿಸಲಾಗಿದೆ. ಇದಕ್ಕೂ ಮೊದಲೇ ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ, ಮುರಗೇಶ ನಿರಾಣಿ, ಜನಾರ್ಧನ ರೆಡ್ಡಿ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮೇಲೆ ಪ್ರಾಥಮಿಕ ತನಿಖೆ ಆಗಿದ್ದು, ತನಿಖೆಗೆ ಪರವಾನಗಿ ಕೇಳಿದ್ದಾರೆ, ಕೊಟ್ಟಿಲ್ಲ. ಆದರೆ, ಸಿದ್ದರಾಮಯ್ಯನವರ ಮೇಲೆ ಪ್ರಾಥಮಿಕ ತನಿಖೆಯೇ ಆಗಿಲ್ಲ, ಆಗಲೇ ಪ್ರಾಸಿಕ್ಯೂಷನ್ ತನಿಖೆಗೆ ಆದೇಶಿಸಲಾಗಿದೆ ಎಂದು ಆರೋಪಿಸಿದರು.

ದೇವರಾಜ ಅರಸು ಅವರ ಬಳಿಕ ಐದು ವರ್ಷ ಪೂರೈಸಿದವರು ಸಿದ್ದರಾಮಯ್ಯನವರು 136 ಸೀಟ್ ಗೆದ್ದು ಅನೇಕ ಭಾಗ್ಯಗಳನ್ನು ಕೊಟ್ಟಿದ್ದಾರೆ. 2ನೇ ಬಾರಿ ಮುಖ್ಯಮಂತ್ರಿ ಆದಬಳಿಕ ಪಂಚ್‌ ಗ್ಯಾರಂಟಿಗಳನ್ನು ಕೊಟ್ಟು ಸಾಧಿಸಿದವರು. ಅವರ 40 ವರ್ಷದ ರಾಜಕೀಯದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಮುಡಾ ಹಗರಣದಲ್ಲಿ ತಪ್ಪು ಮಾಡಿದ್ದು ಬಿಜೆಪಿಯವರು ಎಂದು ದೂರಿದರು.ಸಿದ್ದರಾಮಯ್ಯ ರಾಜೀನಾಮೆ ಕೊಡುವ ಅಗತ್ಯವಿಲ್ಲ: ರಾಜೂ ಆಲಗೂರ

ಶಾಸಕ ರಾಜೂ ಆಲಗೂರ ಮಾತನಾಡಿ, ಇಂದು ದೇಶದಲ್ಲೇ ಪ್ರಾಮಾಣಿಕ ಸಿಎಂ ಸಿದ್ದರಾಮಯ್ಯನವರು ಬಡವರ ಪರವಾದ ಆಡಳಿತ, ದಲಿತರ ಪರವಾದ ಆಡಳಿತ ಕೊಟ್ಟವರು. ಆದರೆ, ಅವರ ಮೇಲೆ ಅಮೀತ್ ಶಾ, ಮೋದಿ ಅವರು ಸೇರಿ ದೊಡ್ಡ ಹುನ್ನಾರ ನಡೆಸಿದ್ದಾರೆ. ಹಾಗಾಗಿ ರಾಜ್ಯಪಾಲರ ವಿರುದ್ಧವಾಗಿ ರಾಜ್ಯಾದ್ಯಂತ ಹೋರಾಟ ಮಾಡುತ್ತಿದ್ದೇವೆ‌ ಎಂದರು. ಸಿಎಂ ಅವರು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವ ಅಗತ್ಯವಿಲ್ಲ. ಧೀಮಂತ ನಾಯಕನನ್ನು ದುಸ್ಥರಗೊಳಿಸುವ ಹುನ್ನಾರಕ್ಕೆ ನಮ್ಮ ಧಿಕ್ಕಾರವಿದೆ. ನೀವು ನಡೆಸಿದ ಹುನ್ನಾರ ಬರುವ ದಿನಗಳಲ್ಲಿ ನಿಮಗೆ ತಿರುಗುಮಂತ್ರವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನಾ ರ್‍ಯಾಲಿಯಲ್ಲಿ ಶಾಸಕರುಗಳಾದ ಸಿ.ಎಸ್.ನಾಡಗೌಡ(ಅಪ್ಪಾಜಿ), ಸುನೀಲಗೌಡ ಪಾಟೀಲ, ಅಶೋಕ ಮನಗೂಳಿ, ಮಾಜಿ ಶಾಸಕ ಡಾ.ಮಕ್ಬುಲ್ ಬಾಗವಾನ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಮುಖಂಡರುಗಳಾದ ಅಬ್ದುಲ್ ಹಮೀದ್ ಮುಶ್ರಿಫ್, ಎಸ್.ಎಂ.ಪಾಟೀಲ್ ಗಣಿಹಾರ, ಗಂಗಾಧರ ಸಂಬಣ್ಣಿ, ಸೋಮನಾಥ ಕಳ್ಳಿಮನಿ ಮಹಿಳಾ ನಾಯಕಿಯರಾದ ಕಾಂತಾ ನಾಯಕ, ವಿದ್ಯಾರಾಣಿ ತುಂಗಳ, ಸ್ನೇಹಲತಾ ಶೆಟ್ಟಿ, ಶ್ರೀದೇವಿ ಉತ್ಲಾಸರ್, ಮಹಾನಗರ ಪಾಲಿಕೆ ಸದಸ್ಯರು ಸೇರಿದಂತೆ ಜಿಲ್ಲೆ, ನಗರ, ತಾಲೂಕುಗಳ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಕಾರ್ಯಕರ್ತರು ಸಿದ್ದರಾಮಯ್ಯನವರ ಅಭಿಮಾನಿಗಳು ಭಾಗವಹಿಸಿದ್ದರು.ಶೋಷಿತ ವರ್ಗಕ್ಕೆ ಧ್ವನಿಯಾದ ಸಿಎಂ ವಿರುದ್ಧ ಷಡ್ಯಂತ್ರ: ಯಶವಂತರಾಯಗೌಡ

ಸಿದ್ದರಾಮಯ್ಯನವರು ಕಪ್ಪು ಚುಕ್ಕೆ ಇಲ್ಲದೇ ರಾಜಕಾರಣ ಮಾಡಿದ ಅಪರೂಪದ ನಾಯಕ‌. ಅಂತಹವರ ವಿರುದ್ಧ ಬಿಜೆಪಿ ಷಡ್ಯಂತ್ರ ಮಾಡಿದೆ ಎಂದು ಇಂಡಿ ಮತಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ರಾಜ್ಯಪಾಲರ ಹಠಾವೋ ಕರ್ನಾಟಕ ಬಚಾವೋ ಚಳುವಳಿ ನಡೆಸಲಾಗುತ್ತಿದೆ. ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಜನಾಂದೋಲನ ಶುರುವಾಗಿದೆ. ಬಿಜೆಪಿ ಷಡ್ಯಂತ್ರವನ್ನು ರಾಜ್ಯದ ಜನತೆ ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. 40 ವರ್ಷದ ರಾಜಕಾರಣದಲ್ಲೇ ಎಂದೂ ಅವರು ಕಳಂಕ ಹೊತ್ತಿಲ್ಲ. ಅಹಿಂದ ಶೋಷಿತ ವರ್ಗಕ್ಕೆ ಧ್ವನಿಯಾದವರು ಸಿಎಂ ಎಂದರು.ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಷಡ್ಯಂತ್ರ: ಮಲ್ಲಿಕಾರ್ಜುನ ಲೋಣಿ

ಸಿದ್ದರಾಮಯ್ಯನವರ ಜನತಾ ನ್ಯಾಯಾಲಯದ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಷಡ್ಯಂತ್ರ ರೂಪಿಸಿದೆ ಎಂದು ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ದೂರಿದರು.ರಾಜ್ಯಪಾಲರು ಬಿಜೆಪಿ ಕೈಗೊಂಬೆ ಆಗಿದ್ದಾರೆ. ನಾಡಿನ ಜನತೆಯ ಅಧಿಪತಿ ಸಿದ್ಧರಾಮಯ್ಯನವರು. 2023 ರಲ್ಲಿ 136 ಸೀಟು ಜನತೆ ಅವರಿಗೆ ಕೊಟ್ಟಿದ್ದಾರೆ. ಅಂದಿನಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಹೇಗೆ ಅಸ್ಥಿತರಗೊಳಿಸಬೇಕು ಎಂದು ಬಿಜೆಪಿ ನಿದ್ದೆಯೇ ಮಾಡಿಲ್ಲ. ರಾಜ್ಯಪಾಲರ ಹಟಾವೋ ಕರ್ನಾಟಕ ಬಚಾವೋ ಆಗಬೇಕು. ಆ ನಿಟ್ಟಿನಲ್ಲಿ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಗುಡುಗಿದರು.

ಬೃಹತ್ ಪ್ರತಿಭಟನಾ ರ್‍ಯಾಲಿ: ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ

ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿಚಾರದಲ್ಲಿ ನಡೆದುಕೊಂಡ ರಾಜ್ಯಪಾಲರ ನಡೆಯನ್ನು ಹಾಗೂ ಬಿಜೆಪಿಯ ಕುತಂತ್ರವನ್ನು ಖಂಡಿಸಿ ರಾಜ್ಯಪಾಲರ ಹಟಾವೋ ಕರ್ನಾಟಕ ಬಚಾವೋ ಎಂದು ನಗರದಲ್ಲಿ ಸೋಮವಾರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನಾ ರ್‍ಯಾಲಿ ನಡೆಸಲಾಯಿತು. ಸಚಿವ ಎಂ.ಬಿ.ಪಾಟೀಲ ನೇತೃತ್ವದಲ್ಲಿ ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಆರಂಭವಾದ ಬೃಹತ್ ರ್‍ಯಾಲಿಯಲ್ಲಿ ಸಾವಿರಾರು ಕಾರ್ಯಕರ್ತರು, ಸಿದ್ದರಾಮಯ್ಯನವರ ಅಭಿಮಾನಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು. ರ್‍ಯಾಲಿಯು ಮಹಾತ್ಮಾಗಾಂಧಿ ವೃತ್ತದ ಮೂಲಕ ಹಾದು, ಬಸವೇಶ್ವರ ಸರ್ಕಲ್, ಡಾ.ಬಿ.ಆರ್.ಅಂಬೇಡ್ಕರ್ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ತಲುಪಿತು. ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.ಹರಿದುಬಂದ ಜನಸಾಗರ

ನಿಷ್ಕಳಂಕ ರಾಜಕಾರಣಿ ಎನಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರ ವಿಚಾರದಲ್ಲಿ ಮುಡಾ ಹಗರಣ ಮಾಡಿದ್ದಾರೆಂದು ಸುಳ್ಳು ಆರೋಪ ಹೊರಿಸಲಾಗುತ್ತಿದೆ ಎಂದು ನಡೆಸಿದ ಪ್ರತಿಭಟನೆಯಲ್ಲಿ ಜಿಲ್ಲೆಯ ಮೂಲೆ ಮೂಲೆಯಿಂದ ಸಾವಿರಾರು ಕಾರ್ಯಕರ್ತರು ಆಗಮಿಸಿದ್ದರು. ಸುಮಾರು ಎರಡು ಕಿಲೋ ಮೀಟರ್ ಸುಡುಬಿಸಿಲಿನಲ್ಲಿ ನಡೆದ ಕಾಂಗ್ರೆಸ್ ಜಲಾಂದೋಲನ ರ್‍ಯಾಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಿಮಾನಿಗಳು, ವಿವಿಧ ಸಂಘಟನೆಗಳ ಮುಖಂಡರುಗಳು ಭಾಗವಹಿಸಿದ್ದರು.

ಮನಸೆಳೆದ ಹಲಗೆ ಮೇಳ, ಲಂಬಾಣಿ ನೃತ್ಯ

ಒಂದೆಡೆ ಪ್ರತಿಭಟನಾ ರ್‍ಯಾಲಿ ಜೋರಾಗಿ ನಡೆಯುತ್ತಿದ್ದರೇ ಇನ್ನೊಂದೆಡೆ ಲಂಬಾಣಿ ಉಡುಗೆ ತೊಟ್ಟ ಮಹಿಳೆಯರು ಹಲಗೆ ವಾದ್ಯಕ್ಕೆ ನೃತ್ಯ ಹಾಕಿದರು. ತಂಡ ತಂಡಗಳಾಗಿ ಅಲ್ಲಲ್ಲಿ ನೃತ್ಯ ಮಾಡುತ್ತಿದ್ದ ಲಂಬಾಣಿ ವೇಷಧಾರಿ ಮಹಿಳೆಯರು ಬಿಸಿಲಿನಲ್ಲೇ ಎಲ್ಲರ ಗಮನ ಸೆಳೆದರು. ಟಗರಿನೊಂದಿಗೆ ಬಂದಿದ್ದ ಕೆಲ ಅಭಿಮಾನಿಗಳು ಹಲಗೆ ಬಾರಿಸಿ ತಮ್ಮ ಪ್ರತಿಭಟನೆಯ ಕಿಚ್ಚನ್ನು ವ್ಯಕ್ತಪಡಿಸಿದರು.

ಸಿದ್ರಾಮೇಶ್ವರಗೆ ನಮಸ್ಕಾರ, ಪ್ರತಿಮೆಗಳಿಗೆ ಮಾಲಾರ್ಪಣೆ

ಪ್ರತಿಭಟನೆ ಆರಂಭಕ್ಕೂ ಮೊದಲು ನಗರದ ಆರಾಧ್ಯ ದೈವ ಶ್ರೀ ಸಿದ್ಧೇಶ್ವರ ದೇವಸ್ಥಾನಕ್ಕೆ ತೆರಳಿದ ಕಾಂಗ್ರೆಸ್ ಸಚಿವರು ಹಾಗೂ ಮುಖಂಡರು ಸಿದ್ರಾಮೇಶ್ವರ ದೇವರಿಗೆ ನಮಸ್ಕರಿಸಿದರು. ರ್‍ಯಾಲಿಯ ವೇಳೆ ಮಹಾತ್ಮಾ ಗಾಂಧಿಜಿ, ವಿಶ್ವಗುರು ಬಸವೇಶ್ವರ ಹಾಗೂ ಡಾ.ಅಂಬೇಡ್ಕರ್ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು.ಸಿಎಂ ಪತ್ನಿಯ ಹೆಸರಿನಲ್ಲಿದ್ದ 3.16 ಎಕರೆ ಭೂಮಿಯನ್ನು ಭೂ ಸ್ವಾಧೀನ ಮಾಡಿಕೊಳ್ಳದೆ ಮುಡಾದವರೇ ಅತಿಕ್ರಮಣ ಮಾಡಿ ಅಭಿವೃದ್ಧಿ ಪಡೆಸಿದ್ದಾರೆ. ಆಗ ಬಿಜೆಪಿ, ಜೆಡಿಎಸ್‌ನವರು ಸೇರಿ ತಪ್ಪು ಮಾಡಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ. ಅವರು ಮಾಡಿದ ತಪ್ಪಿಗೆ 50 ಪರ್ಸೆಂಟ್ ಸೈಟ್‌ಗಳನ್ನು ಕೊಟ್ಟಿದ್ದಾರೆ. ಆದರೂ ಇದೀಗ ಸುಳ್ಳು ಆರೋಪ ಮಾಡಲಾಗುತ್ತಿದ್ದು, ಇವರ ಕುತಂತ್ರವನ್ನು ಖಂಡಿಸಿ ನಾವು ಹೋರಾಟ ಮಾಡುತ್ತಿದ್ದೇವೆ. ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಕೊಟ್ಟಿದ್ದೇವೆ. ಬಿಜೆಪಿಯ ಕೈಗೊಂಬೆಯಾಗಿ ರಾಜ್ಯಪಾಲರು ಆದೇಶ ಮಾಡಿದ್ದಾರೆ. ಸಿದ್ದರಾಮಯ್ಯನವರ ಮೇಲೆ ಆರೋಪ ಹೊರೆಸಿದರೇ ಪಶ್ಚಾತಾಪ ಪಡೆಬೇಕಾಗುತ್ತದೆ. ನಿರಂತರ ಹೋರಾಟ ಮಾಡಿ ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಲಾಗುವುದು.

-ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವರು.ದೀನದಲಿತರ ವರ್ಗಕ್ಕೆ ₹95 ಸಾವಿರ ಕೋಟಿ ಮೀಸಲಿಟ್ಟಿದ್ದಾರೆ. ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಾವೆಲ್ಲ ಚುನಾವಣೆ ಮಾಡಿದ್ದೇವೆ. ನಾಡಿನ ಜನತೆ ಅವರಿಗೆ ಸೇವೆ ಮಾಡಲು ಅವಕಾಶ ಕೊಟ್ಟಿದ್ದಾರೆ. ಬಿಜೆಪಿಗೆ ತಕ್ಕ ಪಾಠ ಕಲಿಸುವ ಕೆಲಸವನ್ನು ನಾವು ನೀವೆಲ್ಲರೂ ಮಾಡಬೇಕಿದೆ. ಸಿಎಂ ಅವರ ಬೆಂಬಲಕ್ಕೆ ನಾವೆಲ್ಲ ಇದ್ದೇವೆ. ಅವರ ಆತ್ಮಬಲವನ್ನು ಕುಗ್ಗಿಸುವ ಕೆಲಸದಲ್ಲಿ ಬಿಜೆಪಿಗೆ ಜಯ ಆಗೋದಿಲ್ಲ. ನಮ್ಮ ನಾಯಕರು ಮುಂದೆ ನ್ಯಾಯಾಂಗ ಹೋರಾಟ ಮಾಡಲಿದ್ದಾರೆ. ಪ್ರಾಮಾಣಿಕರಿಗೆ ನ್ಯಾಯಲಯ ನ್ಯಾಯ ಕೊಟ್ಟೆ ಕೊಡುತ್ತದೆ. ನಮ್ಮ ಸರ್ಕಾರ ಅಸ್ಥಿರ ಗೊಳಿಸುವ ಪ್ರಯತ್ನ ಮಾಡಿದ್ದರ ಫಲವನ್ನು ಮುಂದಿನ ದಿನಗಳಲ್ಲಿ ಅವರು ಅನುಭವಿಸುತ್ತಾರೆ.

-ಯಶವಂತರಾಯಗೌಡ ಪಾಟೀಲ, ಶಾಸಕರು.

ರಾಜ್ಯಪಾಲರು ಬಿಜೆಪಿ ಕೈಗೊಂಬೆ ಆಗಿದ್ದಾರೆ. ನಾಡಿನ ಜನತೆಯ ಅಧಿಪತಿ ಸಿದ್ಧರಾಮಯ್ಯನವರು. 2023 ರಲ್ಲಿ 136 ಸೀಟು ಜನತೆ ಅವರಿಗೆ ಕೊಟ್ಟಿದ್ದಾರೆ. ಅಂದಿನಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಹೇಗೆ ಅಸ್ಥಿತರಗೊಳಿಸಬೇಕು ಎಂದು ಬಿಜೆಪಿ ನಿದ್ದೆಯೇ ಮಾಡಿಲ್ಲ. ರಾಜ್ಯಪಾಲರ ಹಟಾವೋ ಕರ್ನಾಟಕ ಬಚಾವೋ ಆಗಬೇಕು. ಆ ನಿಟ್ಟಿನಲ್ಲಿ ನಮ್ಮ ಹೋರಾಟ ಮುಂದುವರೆಯಲಿದೆ.

-ಮಲ್ಲಿಕಾರ್ಜುನ ಲೋಣಿ, ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷರು.

Share this article