ದೇಶಕ್ಕೆ ಏನೂ ಮಾಡದೇ ಪುಕ್ಕಟೆ ಅಧಿಕಾರದಲ್ಲಿದೆ ಬಿಜೆಪಿ: ಖರ್ಗೆ

KannadaprabhaNewsNetwork |  
Published : Jan 25, 2026, 02:15 AM IST
ಆಶ್ರಯ ಮನೆಗಳನ್ನು ವೀಕ್ಷಿಸಿದ ಮಲ್ಲಿಕಾರ್ಜುನ ಖರ್ಗೆ, ಸಿಎಂ | Kannada Prabha

ಸಾರಾಂಶ

ಅತಿವೃಷ್ಟಿ-ಅನಾವೃಷ್ಟಿ ಸೇರಿದಂತೆ ನಾನಾ ಕಾರಣಗಳಿಂದ ದೇಶದಲ್ಲಿ ಜನರು ಸಾಯುತ್ತಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ, ಫ್ರಾನ್ಸ್, ಯುಕೆ, ಜಪಾನ್ ಎಂದು ಜಗತ್ತು ಸುತ್ತುತ್ತಿದ್ದಾರೆ. ನಾವು ದೇಶವೇ ಮೊದಲು ಎಂದರೆ, ಬಿಜೆಪಿಯವರು ಆರ್‌ಎಸ್‌ಎಸ್, ಬಿಜೆಪಿ ಮೊದಲು ಎನ್ನುತ್ತಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಹುಬ್ಬಳ್ಳಿ:

ದೇಶದ ಸ್ವಾತಂತ್ರ್ಯಕ್ಕಾಗಿ ಸಾಕಷ್ಟು ಜನರು ಜೈಲಿಗೆ ಹೋಗಿದ್ದಾರೆ, ಅನೇಕರು ರಕ್ತ ಹರಿಸಿದ್ದಾರೆ. ಆದರೆ, ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಮುಖಂಡರು ದೇಶಕ್ಕಾಗಿ ಏನೂ ಕೊಡುಗೆ ನೀಡಿಲ್ಲ. ಪುಕ್ಕಟೆಯಾಗಿ ಅಧಿಕಾರದಲ್ಲಿ ಕೂತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.

ಶನಿವಾರ ನಡೆದ ಮನೆಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅತಿವೃಷ್ಟಿ-ಅನಾವೃಷ್ಟಿ ಸೇರಿದಂತೆ ನಾನಾ ಕಾರಣಗಳಿಂದ ದೇಶದಲ್ಲಿ ಜನರು ಸಾಯುತ್ತಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ, ಫ್ರಾನ್ಸ್, ಯುಕೆ, ಜಪಾನ್ ಎಂದು ಜಗತ್ತು ಸುತ್ತುತ್ತಿದ್ದಾರೆ. ನಾವು ದೇಶವೇ ಮೊದಲು ಎಂದರೆ, ಬಿಜೆಪಿಯವರು ಆರ್‌ಎಸ್‌ಎಸ್, ಬಿಜೆಪಿ ಮೊದಲು ಎನ್ನುತ್ತಾರೆ ಎಂದ ಖರ್ಗೆ, ಇನ್ನೂ ಎಷ್ಟು ವರ್ಷ ನೀವು ಇರುತ್ತೀರಿ. ನಿಮ್ಮ ಅಧಿಕಾರ ಶಾಶ್ವತ ಅಲ್ಲ ಎಂದು ಎಚ್ಚರಿಸಿದರು.

ಕೇಂದ್ರದಿಂದ ಬರಬೇಕಾದ ಹಣ ಕರ್ನಾಟಕ ರಾಜ್ಯಕ್ಕೆ ಬರುತ್ತಿಲ್ಲ, ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತದ ಹಿನ್ನೆಲೆಯಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಈ ರೀತಿ ಮಾಡುತ್ತಿದ್ದು, ಇಂತಹ ಮೊಂಡ ಸರ್ಕಾರಕ್ಕೆ ರಾಜ್ಯದ ಜನತೆ ಸರಿಯಾಗಿ ಪಾಠ ಕಲಿಸಬೇಕು ಎಂದ ಖರ್ಗೆ, ದೇಶದ ಬಡವರು, ಮಧ್ಯಮ ವರ್ಗದವರು ಜಾತಿ, ಧರ್ಮ ಬಿಟ್ಟು ಬಿಜೆಪಿ ವಿರುದ್ಧ ಹೋರಾಟ ನಡೆಸುವ ಶಕ್ತಿ ಬೆಳೆಸಿಕೊಳ್ಳಬೇಕು. ಇಲ್ಲದೇ ಹೋದಲ್ಲಿ ಹತ್ತಾರು ಕಾನೂನುಗಳ ಮೂಲಕ ಜನರ ಸ್ವಾತಂತ್ರ್ಯ ಕಸಿದುಕೊಂಡು ಗುಲಾಮಗಿರಿಯಲ್ಲಿ ಬದುಕುವಂತೆ ಈ ಬಿಜೆಪಿ ಸರ್ಕಾರ ಮಾಡುತ್ತದೆ ಎಂದರು.

ಬರೀ ನಗರ ಪ್ರದೇಶದಲ್ಲಿ ಇಂತಹ ಮನೆ ಹಂಚಿಕೆ ಕಾರ್ಯಕ್ರಮಗಳ ಜತೆಗೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲೂ ಇಂತಹ ಕಾರ್ಯಕ್ರಮಗಳನ್ನು ಮಾಡಲು ಇದೇ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ವಸತಿ ಸಚಿವ ಜಮೀರ ಅಹಮದ್‌ಖಾನ್‌ ಅವರಿಗೆ ಸೂಚಿಸಿದರು.

ಬೆಂಗಳೂರು, ಹುಬ್ಬಳ್ಳಿ ಮಾತ್ರ ಕರ್ನಾಟಕವಲ್ಲ, ಬೆಳಗಾವಿ, ಕಲಬುರ್ಗಿ, ಕೋಲಾರ, ಮೈಸೂರು ಅಂತಹ ನಗರಗಳೂ ಇವೆ. ಎಲ್ಲ ಕಡೆಗಳಲ್ಲೂ ಇಂತಹ ಯೋಜನೆಗಳು ಎಲ್ಲರನ್ನೊಳಗೊಂಡು ಜಾರಿಗೆ ತರಬೇಕು ಎಂಬ ಸಲಹೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸ್ಟೆಲ್ ಮಕ್ಕಳಿಗೆ ಹೊಸ ಜಾತಿ ಪ್ರಮಾಣಪತ್ರ ಶಾಕ್‌
₹400 ಕೋಟಿ ಇದ್ದ 2 ಕಂಟೇನರ್‌ ಲಾರಿಗಳೇ ಬೆಳಗಾವೀಲಿ ನಾಪತ್ತೆ!