ಬಿಜೆಪಿಗರು ರಾಜ್ಯದ ಬೊಕ್ಕಸ ಕೊಳ್ಳೆ ಹೊಡೆದಿದ್ದಾರೆ : ಶಾಸಕ ಗೋಪಾಲಕೃಷ್ಣ ಬೇಳೂರು ಆರೋಪ

KannadaprabhaNewsNetwork | Updated : Feb 22 2025, 12:33 PM IST

ಸಾರಾಂಶ

 ಕೊರೋನ ಕಾಲದಲ್ಲಿ ಬಿಜೆಪಿಗರು ರಾಜ್ಯದ ಬೊಕ್ಕಸವನ್ನು ಕೊಳ್ಳೆ ಹೊಡೆದಿದ್ದಾರೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಆರೋಪಿಸಿದರು.

ಆನಂದಪುರ: ಕೊರೋನ ಕಾಲದಲ್ಲಿ ಬಿಜೆಪಿಗರು ರಾಜ್ಯದ ಬೊಕ್ಕಸವನ್ನು ಕೊಳ್ಳೆ ಹೊಡೆದಿದ್ದಾರೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಆರೋಪಿಸಿದರು.

ಸಮೀಪದ ಆಚಾಪುರ ಗ್ರಾಮ ಪಂಚಾಯಿತಿಯಲ್ಲಿ ಒಂದು ಕೋಟಿ ರು. ವೆಚ್ಚದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕೊರೋನದ ಎರಡು ವರ್ಷಗಳ ಅವಧಿಯಲ್ಲಿನ ಬಿಜೆಪಿ ಸರ್ಕಾರ ಯಾವುದೇ ಅಭಿವೃದ್ಧಿಯನ್ನು ಮಾಡದೆ ಕೊರೋನದ ಹೆಸರಿನಲ್ಲಿ ರಾಜ್ಯದ ಬೊಕ್ಕಸವನ್ನು ಬರಿದಾಗಿಸಿದೆ ಎಂದು ದೂರಿದರು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದಂತಹ ಗ್ಯಾರಂಟಿ ಯೋಜನೆ ರಾಜ್ಯದ ಜನರಿಗೆ ನೇರವಾಗಿ ತಲುಪುತ್ತಿದ್ದೆ. ಇದರಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಶಕ್ತಿ ಬಂದಂತಾಗಿದೆ. 

ರಸ್ತೆ, ನೀರು, ಶಾಲೆ ಅಂಗನವಾಡಿ ಗಳ ನಿರ್ಮಾಣ ಮಾಡಿದರೆ ಮಾತ್ರ ಅಭಿವೃದ್ಧಿಯಲ್ಲ, ಗ್ಯಾರಂಟಿ ಯೋಜನೆಯು ಬಡವರ ಅಭಿವೃದ್ಧಿಗೆ ಪೂರಕವಾಗಿದೆ ಎಂದರು. ಸಾಗರದಲ್ಲಿ ರಸ್ತೆ ಅಗಲೀಕರಣಕ್ಕೆ 30 ಕೋಟಿ ರು. ಅನುದಾನ ಬಿಡುಗಡೆಯಾಗಿದೆ. ಕೆರೆಹಿತ್ರು ಗ್ರಾಮದ ಬಾಳೆಕೆರೆ ಅಭಿವೃದ್ಧಿಗೆ ಒಂದು ಕೋಟಿ ಅನುದಾನ ಬಿಡುಗಡೆಯಾಗಿದ್ದು, ಮುಂದಿನ ಮೂರು ವರ್ಷಗಳಲ್ಲಿ ಸಾಗರ ವಿಧಾನಸಭಾ ಕ್ಷೇತ್ರ ಸಮಗ್ರ ಅಭಿವೃದ್ಧಿಯಾಗಲಿದೆ. ಅಲ್ಲದೆ ಕ್ಷೇತ್ರದ ರೈತರ ಬಗರು ಹುಕ್ಕುಮ್ ಸಮಸ್ಯೆ ಶೀಘ್ರದಲ್ಲೇ ರೈತರಿಗೆ ಹಕ್ಕು ಪತ್ರ ವಿತರಿಸಲಾಗುವುದು ಎಂದರು. ಗ್ರಾಪಂ ಅಧ್ಯಕ್ಷ ಕಲೀಮುಲ್ಲಾ ಖಾನ್ ಮಾತನಾಡಿ, ಹಿಂದಿನ ಅವಧಿಯಲ್ಲಿ ಅಭಿವೃದ್ಧಿ ಕಾಣದ ಆಚಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಂದು ಕೋಟಿ ಅನುದಾನದ ಅಭಿವೃದ್ಧಿ ಕಾರ್ಯವಾಗುತ್ತಿರುವುದು ಹೆಮ್ಮೆಯ ವಿಚಾರ ಎಂದರು.

ಗ್ರಾಪಂ ಉಪಾಧ್ಯಕ್ಷ ನಾಗರತ್ನ, ತಾಲೂಕು ಕೆಡಿಪಿ ಸದಸ್ಯ ಅಬ್ದುಲ್ ರಜಾಕ್, ಬಗರ್ ಹುಕ್ಕಮ್ ಸಮಿತಿ ಸದಸ್ಯ ರವಿಕುಮಾರ್ ದಾಸಕೊಪ್ಪ, ಹೊಸೂರು ಗ್ರಾಪಂ ಉಪಾಧ್ಯಕ್ಷ ಚೌಡಪ್ಪ ವರದಮೂಲ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಸೋಮಶೇಖರ್ ಲಗ್ಗೆರೆ, ಗ್ರಾ.ಪಂ ಸದಸ್ಯರಾದ ಅಬ್ದುಲ್ ಘನ್ನಿ, ಲತಾ, ಕೋಮಲ, ಮೇನಕ, ಪುಷ್ಪ ಮತ್ತಿತರರಿದ್ದರು.

Share this article