ಮತೀಯ ಭಾವನೆ ಕೆರಳಿಸುತ್ತಿರುವ ಬಿಜೆಪಿ: ಡಾ. ಅಂಜಲಿ

KannadaprabhaNewsNetwork |  
Published : Apr 01, 2024, 12:46 AM IST
ಸಮಾವೇಶ ಉದ್ಘಾಟಿಸಲಾಯಿತು  | Kannada Prabha

ಸಾರಾಂಶ

ನಾವು ಛತ್ರಪತಿ ಶಿವಾಜಿ ಮಹಾರಾಜರ ಹೆಸರನ್ನು ರಾಜಕೀಯಕ್ಕೆ ಬಳಸದೇ ಶಿವಾಜಿ ತೋರಿದ ಸನ್ಮಾರ್ಗದಲ್ಲಿ ಆಡಳಿತ ನಡೆಸುತ್ತಿದ್ದೇವೆ ಎಂದು ಡಾ. ಅಂಜಲಿ ನಿಂಬಾಳ್ಕರ್ ತಿಳಿಸಿದರು.

ಹಳಿಯಾಳ: ಬಿಜೆಪಿ ಮತೀಯ ಭಾವನೆ ಕೆರಳಿಸುತ್ತಿದೆ. ಅಲ್ಲದೇ ಧರ್ಮ, ದೇವರು, ದೇವಸ್ಥಾನಗಳ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದು, ರಾಜಕೀಯ ಲಾಭಕ್ಕಾಗಿ ಛತ್ರಪತಿ ಶಿವಾಜಿ ಮಹಾರಾಜರ ಹೆಸರನ್ನು ದುರ್ಬಳಕೆ ಮಾಡುತ್ತಿದೆ ಎಂದು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ತಿಳಿಸಿದರು. ಪಟ್ಟಣದ ಚಂದಾವನ ಉದ್ಯಾನವನದಲ್ಲಿ ಭಾನುವಾರ ಆಯೋಜಿಸಿದ್ದ ಹಳಿಯಾಳ ತಾಲೂಕು ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಲೋಕಸಭಾ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ನಾವು ಛತ್ರಪತಿ ಶಿವಾಜಿ ಮಹಾರಾಜರ ಹೆಸರನ್ನು ರಾಜಕೀಯಕ್ಕೆ ಬಳಸದೇ ಶಿವಾಜಿ ತೋರಿದ ಸನ್ಮಾರ್ಗದಲ್ಲಿ ಆಡಳಿತ ನಡೆಸುತ್ತಿದ್ದೇವೆ. ಜತೆಗೆ ಎಲ್ಲ ಜಾತಿ, ಧರ್ಮದವರನ್ನು ಒಗ್ಗೂಡಿಸಿಕೊಂಡು ಹೋಗುತ್ತಿದ್ದೇವೆ. ಶಿವಾಜಿ ಮಹಾರಾಜರು ಕಂಡ ಹಿಂದೂ ಸ್ವರಾಜ್ಯ ಕಟ್ಟುವ ಕಾಲವೂ ಬಂದಿದೆ ಎಂದರು.

ಮತದಾರರು ಆಶೀರ್ವಾದ ಮಾಡಿದಲ್ಲಿ ಕ್ಷೇತ್ರದ ಜನರ ಬಹುವರ್ಷಗಳ ಬೇಡಿಕೆಯಾಗಿರುವ ಅತಿಕ್ರಮಣದಾರರಿಗೆ ಭೂ ಒಡೆತನದ ಹಕ್ಕನ್ನು ಕೊಡುವ ಸಮಸ್ಯೆಗಳ ಬಗ್ಗೆ ಸಂಸತ್ತಿನ ಮೊದಲು ಅಧಿವೇಶದಲ್ಲಿಯೇ ಅತಿಕ್ರಮಣದಾರರ ಪರವಾಗಿ ಧ್ವನಿಯೆತ್ತಿ ನ್ಯಾಯ ಒದಗಿಸುವೆ ಎಂದು ಭರವಸೆ ನೀಡಿದರು.

ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿ, ಕಾಂಗ್ರೆಸ್ ಚುನಾವಣಾ ಸಮಯದಲ್ಲಿ ಗ್ಯಾರಂಟಿ ಘೋಷಣೆ ಮಾಡಿದ್ದಾಗ ನಮ್ಮ ಯೋಜನೆಗಳನ್ನು ಟೀಕಿಸಿದ್ದ ಪ್ರಧಾನಿ ಇದೀಗ ನಮ್ಮ ಗ್ಯಾರಂಟಿ ಶಬ್ದವನ್ನೇ ಕದ್ದು ಯೇ ಮೋದಿ ಕಿ ಗ್ಯಾರಂಟಿ ಹೈ ಎಂದು ಬಿಂಬಿಸಲಾರಂಭಿಸಿದ್ದು, ಗ್ಯಾರಂಟಿ ಪ್ರಭಾವ ಪ್ರಧಾನಿಯವರಿಗೆ ಅರಿವಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಮಾತನಾಡಿ, ಕ್ಷೇತ್ರದಲ್ಲಿ ಮೂವತ್ತು ವರ್ಷ ದಬ್ಬಾಳಿಕೆ ನಡೆಸಿದ ಬಿಜೆಪಿಗೆ ಅವರ ಸುಳ್ಳೇ ಈಗ ಮುಳುವಾಗಿ ಪರಿಣಮಿಸಿದೆ. ಜಿಲ್ಲೆಯ ಕ್ಷೇತ್ರದ ಮತದಾರರು ಇವರ ಸುಳ್ಳನ್ನು ನಂಬುವ ಸ್ಥಿತಿಯಲ್ಲಿ ಇಲ್ಲ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ಕೆಪಿಸಿಸಿ ಸದಸ್ಯ ಸುಭಾಸ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ ಹಾಗೂ ಯುವ ಕಾಂಗ್ರೆಸ್ ಅಧ್ಯಕ್ಷ ರವಿ ತೋರಣಗಟ್ಟಿ ಮತ್ತು ಇತರರು ಇದ್ದರು ಎಚ್.ಬಿ. ಪರಶುರಾಮ ಕಾರ್ಯಕ್ರಮ ನಿರ್ವಹಿಸಿದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ