ಕಾರವಾರ: ಮೀಸಲಾತಿ ರದ್ದತಿ ವಿಷಯವಾಗಿ ರಾಹುಲ್ ಗಾಂಧಿ ಹೇಳಿಕೆಯನ್ನು ಬಿಜೆಪಿಯವರು ತಿರುಚಿ ಅಪಪ್ರಚಾರಕ್ಕೆ ಇಳಿದಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಶಂಭು ಶೆಟ್ಟಿ ಆರೋಪಿಸಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಮಾಜಿ ಶಾಸಕ ಸುನೀಲ್ ಹೆಗಡೆ ಸೇರಿದಂತೆ ಹಲವು ಬಿಜೆಪಿ ನಾಯಕರು ರಾಹುಲ್ ಗಾಂಧಿ ಅವರು ಭಾರತದಲ್ಲಿ ಮೀಸಲಾತಿ ರದ್ದು ಮಾಡುವ ಹೇಳಿಕೆ ನೀಡಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಬಿಜೆಪಿ ಮೊದಲಿನಿಂದಲೂ ಜನರಿಗೆ ಅರೆಬರೆ ಸತ್ಯ ಹೇಳಿ ರಾಜಕೀಯ ಲಾಭ ಪಡೆಯಲು ನೋಡುತ್ತದೆ. ಇದರಲ್ಲಿಯೂ ಅಮೆರಿಕದಲ್ಲಿ ರಾಹುಲ್ ಗಾಂಧಿ ನೀಡಿದ ಹೇಳಿಕೆಯ ಭಾರತದಲ್ಲಿ ಮೀಸಲಾತಿ ರದ್ದತಿಗೆ ಚಿಂತಿಸಬಹುದು ಎಂಬ ಹೇಳಿಕೆಯನ್ನು ಮಾತ್ರ ಹೇಳುತ್ತಿದ್ದಾರೆ ಎಂದರು. ಆದರೆ ಅವರು ಹೇಳಿರುವುದು ₹100 ಗಳಲ್ಲಿ ಆದಿವಾಸಿಗಳಿಗೆ ₹10, ದಲಿತರಿಗೆ ₹5, ಒಬಿಸಿಯವರು ₹5 ಪಡೆಯುತ್ತಾರೆ. ಇಲ್ಲಿ ಸಮಾನತೆ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ. ಭಾರತದಲ್ಲಿ ಶೇ. 90ರಷ್ಟು ಜನರು ವ್ಯವಹಾರ ನಡೆಸಲು ಸಾಧ್ಯವಿಲ್ಲ. ಆದರೆ ಭಾರತದ ಪ್ರತಿಯೊಬ್ಬ ಉದ್ಯಮಿಗಳ ಪಟ್ಟಿ ನೋಡಿದರೆ ಅದರಲ್ಲಿ ಬುಡಕಟ್ಟು ಸಮುದಾಯದವರ ಹೆಸರು ಇಲ್ಲ. ದಲಿತ, ಒಬಿಸಿ ಅವರ ಹೆಸರು ಇಲ್ಲ. ಟಾಪ್ 200 ಉದ್ಯಮಿಗಳಲ್ಲಿಯೂ ಇವರು ಯಾರು ಇಲ್ಲ ಎಂದಿದ್ದಾರೆ. ಆದರೆ ಈ ಹೇಳಿಕೆಯನ್ನು ತಿರುಚಿ ಬಿಜೆಪಿಗರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ರಾಜೇಂದ್ರ ರಾಣೆ, ಬಾಬು ಶೇಖ್, ಪ್ರಕಾಶ್ ಸಾವಂತ್ ಇತರರು ಇದ್ದರು.
ಘೋಟ್ನೇಕರರ ಅವ್ಯವಹಾರ ಬಯಲಿಗೆಳೆಯುತ್ತೇವೆ: ಸುಭಾಸ್ಹಳಿಯಾಳ: ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ ಅವರು ಅಧಿಕಾರದಲ್ಲಿದ್ದಾಗ ಮಾಡಿರುವ ಅವ್ಯವಹಾರಗಳಿಂದ ಬಿಜೆಪಿಗೆ ತಗುಲಿದ ಮಸಿಯನ್ನು ತೊಲಗಿಸುವ ಪ್ರಯತ್ನವನ್ನು ಕಾಂಗ್ರೆಸ್ ಆರಂಭಿಸಿದ್ದು, ಘೋಟ್ನೇಕರ ಆಡಳಿತಾವಧಿಯಲ್ಲಿ ಮಾಡಿದ ಹಗರಣಗಳನ್ನು ಬಯಲಿಗೆ ತಂದು ಸಂತ್ರಸ್ತರಿಗೆ ನ್ಯಾಯ ಒದಗಿಸುವ ಕಾರ್ಯ ಕಾಂಗ್ರೆಸ್ ಆರಂಭಿಸಿದೆ ಎಂದು ಕೆಪಿಸಿಸಿ ಸದಸ್ಯ ಸುಭಾಸ್ ಕೊರ್ವೆಕರ ತಿಳಿಸಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಘೋಟ್ನೇಕರ ಅವರು ಮಾಡಿದ ಪ್ರತಿಯೊಂದು ಹಗರಣಗಳ ದಾಖಲೆಗಳು ನಮ್ಮ ಬಳಿಯಿದ್ದು, ಅವರು ಬಹಿರಂಗ ಚರ್ಚೆಗೆ ಬಂದರೆ ಅವ್ಯವಹಾರದ ದಾಖಲೆ ಬಹಿರಂಗಗೊಳಿಸುತ್ತೇನೆ ಎಂದು ಸವಾಲೆಸೆದರು.ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷರಾದ ಅಜರ್ ಬಸರಿಕಟ್ಟಿ, ಉಮೇಶ ಬೊಳಶೆಟ್ಟಿ, ಮಾಜಿ ಉಪಾಧ್ಯಕ್ಷ ಫಯಾಜ ಶೇಖ್, ಸತ್ಯಜಿತ ಗಿರಿ, ತಾಪಂ ಮಾಜಿ ಅಧ್ಯಕ್ಷ ದೇಮಾಣಿ ಶಿರೋಜಿ, ಪ್ರಕಾಶ ಪಾಕ್ರೆ, ರೋಹನ ಬೃಗಾಂಜಾ, ಅನಿಲ್ ಫರ್ನಾಂಡೀಸ್, ಅಣ್ಣಪ್ಪ ಬಂಡಿವಾಡ ಹಾಗೂ ಇತರರು ಇದ್ದರು.