ಹೊಸಪೇಟೆ: ಅನೇಕ ಜನರ ತ್ಯಾಗ ಬಲಿದಾನದಿಂದ ಭಾರತೀಯ ಜನತಾ ಪಕ್ಷ ಬಲಿಷ್ಠವಾದ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದೆ. ಅಂದಿನಿಂದ ಇಂದಿನವರೆಗೆ ಅನೇಕ ನಿಷ್ಠಾವಂತ ಮುಖಂಡರು, ಧೀಮಂತ ನಾಯಕರು ಬಿಜೆಪಿ ಪಕ್ಷಕ್ಕಾಗಿ ಶ್ರಮಿಸಿದ್ದಾರೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಕೆ.ಎಸ್. ರಾಘವೇಂದ್ರ ಹೇಳಿದರು.
ನಿಷ್ಠಾವಂತ ಹಾಗೂ ಧೀಮಂತ ನಾಯಕರಾದ ಶ್ಯಾಮ್ ಪ್ರಸಾದ್ ಮುಖರ್ಜಿ, ದೀನ್ ದಯಾಳ ಉಪಾಧ್ಯಾಯ ಅವರ ನೇತೃತ್ವದಲ್ಲಿ 1951ರಲ್ಲಿ ಜನಸಂಘ ಎಂಬ ಪಕ್ಷ ನಿರ್ಮಾಣವಾಯಿತು. 1980ರಲ್ಲಿ ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾನಿ, ಮುರಳಿ ಮನೋಹರ ಜೋಶಿ ಅವರ ನೇತೃತ್ವದಲ್ಲಿ ಜನಸಂಘ ಭಾರತೀಯ ಜನತಾ ಪಕ್ಷವಾಗಿ ಮರುಸ್ಥಾಪನೆಗೊಂಡಿತು ಎಂದರು.
ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮುಖಂಡರಾದ ಅನಂತ್ ಕುಮಾರ್, ಅನಂತ್ ಕುಮಾರ್ ಹೆಗಡೆ, ಕೆ.ಎಸ್. ಈಶ್ವರಪ್ಪ ಸೇರಿದಂತೆ ಅನೇಕರು ಬಿಜೆಪಿ ಸಂಘಟನೆ ಮಾಡಿ ಕರ್ನಾಟಕದಲ್ಲಿ ಆಡಳಿತಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅವರು ಹೇಳಿದರು.ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂದೀಪ್ ಸಿಂಗ್, ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಹನುಮಂತಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಶಂಕರ್ ಮೇಟಿ ಸೇರಿದಂತೆ ಬಿಜೆಪಿ ಹಿರಿಯ ಮುಖಂಡರು ಭಾರತೀಯ ಜನತಾ ಪಕ್ಷದ ಧ್ವಜಾರೋಹಣ ನೆರವೇರಿಸಿದರು.
ಬಿಜೆಪಿ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಅನುಪಮಾ ಮತ್ತು ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾಗಿ ಇಮ್ತಿಯಾಜ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರೆಹಮಾನ್ ಅವರು ತಮ್ಮ ಸಂಗಡಿಗರೊಂದಿಗೆ ಬಿಜೆಪಿ ಸೇರ್ಪಡೆಯಾದರು. ಬಿಜೆಪಿ ಮಂಡಲದ ಅಧ್ಯಕ್ಷ ಶಂಕರ್ ಮೇಟಿ ಶಾಲು ಹಾಕಿ ಸ್ವಾಗತಿಸಿದರು.