ಬಿಜೆಪಿಯಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲು ಹುನ್ನಾರ: ಭೋಸರಾಜು

KannadaprabhaNewsNetwork |  
Published : Jan 22, 2026, 03:15 AM IST
ಚಿತ್ರ : 20ಎಂಡಿಕೆ1 : ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು ಮಾತನಾಡಿದರು.  | Kannada Prabha

ಸಾರಾಂಶ

ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ದೇಶದಲ್ಲಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹುನ್ನಾರ ನಡೆಸಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್. ಭೋಸರಾಜು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ದೇಶದಲ್ಲಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹುನ್ನಾರ ನಡೆಸಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್. ಭೋಸರಾಜು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಅಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಗ್ರಾಮೀಣ ಪ್ರದೇಶದ ಬಡಜನರ ಕಲ್ಯಾಣ ಮತ್ತು ಗ್ರಾಮೀಣ ಪ್ರದೇಶದ ಅಭಿವೃದ್ಧಿಯ ಚಿಂತನೆಯೊಂದಿಗೆ ಸುಮಾರು ಆರು ತಿಂಗಳ ಕಾಲ ಎಲ್ಲಾ ರೀತಿಯ ಚರ್ಚೆಗಳು, ಸಭೆಗಳನ್ನು ನಡೆಸಿ ಮನ್ರೇಗಾ ಯೋಜನೆಯನ್ನು ಜಾರಿಗೆ ತಂದು ಕೋಟ್ಯಾಂತರ ಜನರಿಗೆ ಉದ್ಯೋಗ ನೀಡಿ ದೇಶದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಜೊತೆಗೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸಿತು. ಆದರೆ ಈಗ ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರ ಕೇವಲ 72 ಗಂಟೆಗಳಲ್ಲಿ ಯಾವುದೇ ಸಭೆ, ಸಂವಾದ ಚಿಂತನೆಗಳನ್ನು ನಡೆಸದೆ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ರದ್ದುಪಡಿಸುವ ಮೂಲಕ ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಯನ್ನು ದುರ್ಬಲಗೊಳಿಸಿದ್ದಾರೆ ಎಂದು ಆರೋಪಿಸಿದರು.

ಹೋರಾಟ ನಡೆಸಲಿದೆ:

ದೇಶದ ಜನರ ಮನಸ್ಸಿನಿಂದ ರಾಷ್ಟ್ರ ಪಿತ ಮಹಾತ್ಮ ಗಾಂಧಿಯವರ ಹೆಸರನ್ನು ಅಳಸಿ ಹಾಕಿ ಸರ್ವಾಧಿಕಾರಿ ಆಡಳಿತದತ್ತ ದೇಶವನ್ನು ಕೊಂಡೊಯ್ಯುವ ಪ್ರಯತ್ನ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಹೋರಾಟ ನಡೆಸಲಿದೆ ಎಂದು ಮಾಹಿತಿ ನೀಡಿದರು.

ಕೇಂದ್ರಕ್ಕೆ ಅತಿ ಹೆಚ್ಚು 2ನೇ ರಾಜ್ಯವಾಗಿದ್ದು ಒಂದು ರುಪಾಯಿ ಕೊಟ್ಟರೆ ಕೇವಲ 13 ಪೈಸೆ ಮಾತ್ರ ರಾಜ್ಯಕ್ಕೆ ಬರುತ್ತಿದೆ. ಇವರಿಗೆ ಜನಪರ ಕಾಳಜಿ ಇಲ್ಲ. ತಮಿಳುನಾಡು, ಆಂದ್ರ ಸೇಷನ್ ನಲ್ಲಿ ಚರ್ಚೆ ಆಗಬೇಕಾಗಿದೆ. ವಿಶೇಷ ಅಧಿವೇಶನ ಕರೆದಿದ್ದೇವೆ ಎಂದರು.

ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಪ್ರಕರಣ ಗೊತ್ತಾಗುತ್ತಿದ್ದಂತೆ ಕ್ರಮಕೈಗೊಳ್ಳಲಾಗಿದೆ. ಈಗಾಗಲೇ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದರು. ತಪ್ಪು ಆಗುವುದು ಗೊತ್ತಾಗುತ್ತಿದ್ದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಹಾಗೆಯೆ ನಮ್ಮ ಸರ್ಕಾರ ಕ್ರಮಕೈಗೊಂಡಿದೆ. ಜಿಲ್ಲೆಗಳಲ್ಲಿ ಇರುವಾಗ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ನ್ಯಾಯಾಂಗ ಇಲಾಖೆ, ಸಿಬಿಐ ಮುಂತಾದ ಇಲಾಖೆಗಳಲ್ಲೇ ಇಂತಹ ಪ್ರಕರಣ ಆಗಿವೆ. ಇವೆಲ್ಲಾ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತವೆ ಅಲ್ಲವೆ. ಅಲ್ಲಿ ಏನು ಕ್ರಮ ಆಗಿದೆ ಎಂದು ಪ್ರಶ್ನಿಸಿದರು.ತನಿಖೆ ನಡೆಯುತ್ತಿದೆ:

ಕೇಂದ್ರ ಸರ್ಕಾರದ ಯಾವ ಇಲಾಖೆಯಲ್ಲಿ ಇಂತಹ ಘಟನೆಗಳು ನಡೆದಿಲ್ಲ ಹೇಳಿ. ಅವರೇನು ಇಂತಹ ಇಲಾಖೆಗಳನ್ನು ಮುಚ್ಚಿ ಹಾಕಿದ್ದಾರಾ ಎಂದು ಪ್ರಶ್ನೆ ಮಾಡಿದ ಅವರು, ಈಗ ಬಯಲಿಗೆ ಬಂದಿದೆ ಕ್ರಮ ಆಗಿದೆ. ತಪ್ಪು ಮಾಡಿದ್ದಾರೆ ಶಿಕ್ಷೆ ಅನುಭವಿಸುತ್ತಾರೆ. ಈಗ ಆಗಿರುವ ಪ್ರಕರಣವೋ ಯಾವಾಗ ಆಗಿದೆಯೋ ಗೊತ್ತಿಲ್ಲ . ತನಿಖೆ ನಡೆಯುತ್ತಿದೆ ಎಂದು ಹೇಳಿದರು.

ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಮಾತನಾಡಿ ಕೇಂದ್ರ ಸರ್ಕಾರ ಸಂವಿಧಾನಕ್ಕೆ ವಿರೋಧ ವಾಗಿ ಆಡಳಿತ ನಡೆಸುತ್ತಿದ್ದು, ಪಂಚಾಯತ್ ಗಳು ಮತ್ತು ರಾಜ್ಯ ಸರ್ಕಾರಗಳನ್ನು ನಿಷ್ಕ್ರಿಯ ಗೊಳಿಸುವ ಪ್ರಯತ್ನ ಪಡುತ್ತಿದೆ ಎಂದು ಆರೋಪಿಸಿದರು.

ಮನ್ರೆಗಾ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಬಿಜೆಪಿ ದೇಶದ ಬಹುಪಾಲು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದೆ.

ಹಾಗಾದರೆ ಅಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಒಪ್ಪಿದ್ದಾರೆ ಎಂದು ಅರ್ಥವಲ್ಲವೇ ಎಂಬುದಾಗಿ ಮಾರ್ಮಿಕವಾಗಿ ಪ್ರಶ್ನೆ ಮಾಡಿದರು.

ಒಕ್ಕೂಟ ವ್ಯವಸ್ಥೆಯ ಬಗ್ಗೆ ತಾತ್ಸಾರ ಹೊಂದಿರುವ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು.

ವಿಶೇಷ ಅಧಿವೇಶನದಲ್ಲಿ ಚರ್ಚಿಸಿದ ನಂತರ ಹೋರಾಟವನ್ನು ನಡೆಸಲಾಗುವುದು ಎಂದು ಪೊನ್ನಣ್ಣ ವಿವರಿಸಿದರು.

ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಗ್ಯಾರೆಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಬಿ.ಶಾಂತಪ್ಪ, ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುಸ್ತಕಗಳಲ್ಲಿ ಬೆಂಗಳೂರು ನಗರಕ್ಕೆ ಬರೋಬ್ಬರಿ ₹38 ಕೋಟಿ ಡ್ರಗ್ಸ್‌ ಸಾಗಾಟ
ಸರ್ಕಾರದಿಂದ ಗೋಬ್ಯಾಕ್‌ ಗೌರ್ನರ್‌ ಅಭಿಯಾನ ಚಿಂತನೆ