ಕನ್ನಡಪ್ರಭ ವಾರ್ತೆ ಹಾಸನ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಬಿಜೆಪಿ ಹಾಗೂ ಜೆಡಿಎಸ್ ಸಂವಿಧಾನ ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ ಎಂದು ಆರೋಪಿಸಿ ಮಂಗಳವಾರ ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಇದೇ ವೇಳೆ ಸಮಿತಿ ಜಿಲ್ಲಾ ಸಂಯೋಜಕ ರಾಜಶೇಖರ್ ಮಾತನಾಡಿ, ಪ್ರಜಾಪ್ರಭುತ್ವದ ಆಶಯಗಳು ಜಾರಿಗೆ ಬಂದಿದ್ದರೂ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಅರಿವೇ ಇಲ್ಲದೇ ದೇಶದ ಕೋಟ್ಯಾನುಕೋಟಿ ದಲಿತರು, ತಳಸಮುದಾಯದವರು, ಆದಿವಾಸಿಗಳು, ಅಲೆಮಾರಿಗಳು ಈ ಸಮಾಜದಲ್ಲಿ ಅಭಿವೃದ್ಧಿ ಕಾಣದೆ ಆತಂತ್ರ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಚುನಾಯಿತ ಪ್ರತಿನಿಧಿಗಳು ಮತ್ತು ಆಡಳಿತರೂಢ ಸರ್ಕಾರಗಳು ಈ ಸಮುದಾಯಗಳ ಸಾರ್ವಭೌಮತ್ವವನ್ನು ಕಾಪಾಡಬೇಕಾಗಿರುವುದು ಇವರ ಆದ್ಯ ಕರ್ತವ್ಯವಾಗಬೇಕಿತ್ತು. ಪ್ರಜಾಪ್ರಭುತ್ವವೆಂದರೆ ಚುನಾವಣೆಗಳಲ್ಲಿ ಸ್ಪರ್ಧಿಸುವುದು, ಶಾಸಕರು, ಸಂಸದರು, ಮಂತ್ರಿಗಳು, ಮುಖ್ಯಮಂತ್ರಿಗಳು ಮತ್ತು ಪ್ರಧಾನಮಂತ್ರಿಯಾಗುವ ಪ್ರಕ್ರಿಯೆ ಅಲ್ಲ. ಸಮಾಜದ ನಾಗರಿಕರ ಸಮಗ್ರ ಅಭಿವೃದ್ಧಿ, ಅವರ ಜೀವನ ಕ್ರಮ ಮತ್ತು ಹಿತಾಸಕ್ತಿಗಳನ್ನು ಕಾಪಾಡುವುದು. ಸಾಮಾಜಿಕ ನ್ಯಾಯ, ಮಾನವ ಹಕ್ಕುಗಳು ದೊರೆಯದೆ ಇರುವ ಅವಮಾನಿತ, ಶೋಷಿತ ಸಮುದಾಯಗಳ ಬಗ್ಗೆ ಸಂಸತ್ತು, ಶಾಸನ ಸಭೆಗಳಲ್ಲಿ ಚರ್ಚಿಸಿ ಅಗತ್ಯ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರುವುದು. ಆದರೆ ಅಧಿಕಾರಕ್ಕೆ ಬರುವ ಸರ್ಕಾರಗಳು, ಸಾಮಾಜಿಕ ನ್ಯಾಯ, ಅಸ್ಪೃಶ್ಯತೆ, ಜಾತಿ ತಾರತಮ್ಯ, ಅಸಮಾನತೆಗಳನ್ನು ಹೋಗಲಾಡಿಸಲು ಯಾವುದೇ ರೀತಿಯ ಕ್ರಮಗಳನ್ನು ಕೈಗೊಳ್ಳದೆ ಇರುವುದರಿಂದ ಇಂದು ಮೂಲಭೂತ ಹಕ್ಕುಗಳಿಂದ ವಂಚಿತರಾಗಿ ಕನಿಷ್ಠ ಅವಕಾಶಗಳಿಲ್ಲದೆ ಜೀವನ ಸಾಗಿಸುತ್ತಿದ್ದಾರೆ ಎಂದರು. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಸಾರ್ವಜನಿಕರ ಪರವಾಗಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಅವರ ಸಮಸ್ಯೆಗಳ ಪರಿಹಾರಕ್ಕಾಗಿ ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ. ಬದಲಿಗೆ ರೈತ, ಕಾರ್ಮಿಕ ಮತ್ತು ಕೃಷಿ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿ ರೈತರ ಜೀವನ ಅತಂತ್ರಗೊಳಿಸಿದ್ದಾರೆ. ಸಿಎಎ,ಎನ್‌ಪಿಆರ್, ಎನ್‌ಆರ್‌ಸಿ ಯಂತಹ ಜನವಿರೋಧಿ ಕಾನೂನುಗಳು ಮತ್ತು ಇಡಬ್ಲ್ಯುಎಸ್ ನಂತಹ ಮೀಸಲಾತಿ ನೀತಿಗಳನ್ನು ತಂದು ಬಹುಜನರಲ್ಲಿ ಗೊಂದಲಗಳನ್ನು ಸೃಷ್ಟಿಸಿದ್ದಾರೆ. ನಿರುದ್ಯೋಗ ಸಮಸ್ಯೆಗಳು ನಿವಾರಿಸುವುದಾಗಿ ಹೇಳಿಕೊಳ್ಳುತ್ತಾ, ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸಿ, ಕಾರ್ಪೊರೇಟ್ ಸಂಸ್ಥೆಗಳಿಗೆ ಮಾರಾಟ ಮಾಡುವ ಮೂಲಕ ದೇಶದ ಯುವಕರಲ್ಲಿ ಅಭದ್ರತೆಯನ್ನು ಹೆಚ್ಚಿಸುತ್ತಿದ್ದಾರೆ ಎಂದು ದೂರಿದರು.ಚುನಾವಣೆಗಳನ್ನು ಕೇಂದ್ರವಾಗಿಟ್ಟುಕೊಂಡು ಅಧಿಕಾರ ದಾಹದಿಂದ ಹಿಂದುತ್ವ, ಅಖಂಡ ಭಾರತ ಮುಂತಾದ ಭಾವನಾತ್ಮಕ ವಿಷಯಗಳನ್ನು ಪ್ರಚಾರಪಡಿಸುತ್ತಾ ಆರ್.ಎಸ್.ಎಸ್ ಮತ್ತು ಸಂಘ ಪರಿವಾರದ ಗುಪ್ತ ಕಾರ್ಯಸೂಚಿಗಳಾದ ಮನುಧರ್ಮ ಶಾಸ್ತ್ರವನ್ನು ಮರುಸ್ಥಾಪಿಸಲು ಹೊರಟಿದ್ದಾರೆ. ಕರ್ನಾಟಕದ ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದಾಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ನಡೆಸುತ್ತಿರುವ ಸಂಚುಗಳು ಅರ್ಥವಾಗುತ್ತದೆ. ಅನಗತ್ಯವಾಗಿ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಪ್ರಕರಣವನ್ನು ಮುಂದಿಟ್ಟುಕೊಂಡು ಜನಸಾಮಾನ್ಯರಲ್ಲಿ ಗೊಂದಲಗಳನ್ನು ಸೃಷ್ಟಿಸುತ್ತಾ ಸಾರ್ವಜನಿಕ ಸಮಸ್ಯೆಗಳಾದ ರೈತ, ಕಾರ್ಮಿಕ, ಕೃಷಿ, ನಿರುದ್ಯೋಗ, ಆಹಾರ, ಆರೋಗ್ಯ, ಬೆಲೆ ಏರಿಕೆ ಮುಂತಾದ ಮೂಲಭೂತ ಸಮಸ್ಯೆಗಳನ್ನು ಮರೆತು ಜನಸಾಮಾನ್ಯರನ್ನು ದಿಕ್ಕುತಪ್ಪಿಸುತ್ತಾ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅಧಿಕಾರದ ಆಸೆಯಿಂದ ದುಷ್ಟಕೂಟ ಕಟ್ಟಿಕೊಂಡು ಕೋಮುವಾದಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ನಡೆಯುತ್ತಿರುವ ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಾ, ಸಂವಿಧಾನ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಇವರನ್ನು ಕಾನೂನುಬದ್ಧವಾಗಿ ನಿಯಂತ್ರಿಸಲು ಮತ್ತು ಮಾರ್ಗಸೂಚಿಗಳನ್ನು ನೀಡಲು ಕೋರುತ್ತೇವೆ ಎಂದರು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಮತ್ತು ಅಂಬೇಡ್ಕರ್ ಸಿದ್ಧಾಂತಗಳನ್ನು ಅಪ್ರಸ್ತುತಗೊಳಿಸಲು ಹೊರಟಿರುವ ಈ ಕೋಮುವಾದಿ ಶಕ್ತಿಗಳ ಕುತಂತ್ರಗಳನ್ನು ಬಯಲುಗೊಳಿಸಲು ಕರ್ನಾಟಕದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜನಾಂದೋಲನದ ಪ್ರತಿಭಟನೆಯನ್ನು ನಡೆಸುವ ಮೂಲಕ ಜನ ಜಾಗೃತಿಗೊಳಿಸುತ್ತಾ ಕರ್ನಾಟಕದ ಈ ಪರಿಸ್ಥಿತಿಯ ಬಗ್ಗೆ ಸಂವಿಧಾನಾತ್ಮಕ ಕ್ರಮಗಳ ಜಾರಿಗಾಗಿ ಒತ್ತಾಯಿಸುತ್ತಿದ್ದೇವೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ಸಂಯೋಜಕ ರಾಜ್ಯ ಸಂಯೋಜಕ ಎಚ್.ಎನ್. ಅಣ್ಣಯ್ಯ, ಸಂಘಟನಾ ಸಂಯೋಜಕ ಮಹಮದ್ ಷರೀಫ್, ನಾಗರಾಜು, ಜಿಲ್ಲಾ ಸಮಿತಿ ಸದಸ್ಯ ಕಲ್ಗಣೆ ಧರ್ಮರಾಯ, ರವಿ ಬೇಲೂರು, ಜಾಹಿರ ಬಾನು ಇತರರು ಇದ್ದರು.