ಬಿಜೆಪಿ, ಜಾಧವ್ ಅಕ್ರಮ: ಚರ್ಚೆಗೆ ಕಾಂಗ್ರೆಸ್‌ ಪಂಥಾಹ್ವಾನ

KannadaprabhaNewsNetwork |  
Published : Sep 09, 2026, 01:30 AM IST
8ಕೆಡಿವಿಜಿ12, 13-ದಾವಣಗೆರೆಯಲ್ಲಿ ಮಂಗ‍ಳವಾರ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ.ಶೆಟ್ಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

BJP, Jadhav illegal: Congress invites Panth to debate

-ನಾವು ಯಶವಂತರಾವ್‌ ಆರೋಪಗಳನ್ನೂ ದಾಖಲೆ ಸಮೇತ ಸಾಬೀತುಪಡಿಸಲಿ । ಚರ್ಚೆಗೆ ಸಮಯ ಹೇಳಲಿ: ದಿನೇಶ ಕೆ.ಶೆಟ್ಟಿ ಸವಾಲು

--

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಾಂಗ್ರೆಸ್‌ ಅವಧಿಯ ಅಭಿವೃದ್ಧಿ ಕಾರ್ಯ, ಶಾಮನೂರು ಕುಟುಂಬದ ಕೊಡುಗೆ ಹಾಗೂ ಬಿಜೆಪಿ ಅಕ್ರಮ, ಯಶವಂತರಾವ್ ಅಕ್ರಮಗಳ ಕುರಿತಂತೆ ಚರ್ಚಿಸಲು ದಾಖಲೆ ಸಮೇತ ನಾವೂ ಚರ್ಚೆಗೆ ಸಿದ್ಧರಿದ್ದು, ಸ್ಥಳ, ಸಮಯ, ದಿನಾಂಕವನ್ನೂ ತಿಳಿಸಲು ಬಿಜೆಪಿ ಮುಖಂಡ ಯಶವಂತರಾವ್ ಜಾಧವ್‌ಗೆ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಪಂಥಾಹ್ವಾನ ನೀಡಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು 24*7 ಯಾವಾಗ ಬೇಕಿದ್ದರೂ, ಎಲ್ಲಿ ಬೇಕಿದ್ದರೂ ಚರ್ಚೆಗೆ ಬರಲು ಸಿದ್ಧರಿದ್ದೇವೆ. ನಾಳೆ ಅಂದರೆ ನಾಳೆ, ಈಗ ಅಂದರೆ ಇದೇ ಕ್ಷಣವೇ ಚರ್ಚೆಗೆ ಸಿದ್ದ. ಬೇಕಿದ್ದರೆ ಮಾಧ್ಯಮದವರ ಸಮ್ಮುಖದಲ್ಲೇ, ವರದಿಗಾರರ ಕೂಟದಲ್ಲೇ ಚರ್ಚೆಯಾಗಲಿ. ಯಾವಾಗ ಹೇಳಿದರೂ ಚರ್ಚೆಗೆ ನಾವು ಬದ್ಧರಿದ್ದು, ಯಶವಂತರಾವ್ ದಾಖಲೆ ಸಮೇತ ಬರಲಿ ಎಂದು ಸವಾಲು ಹಾಕಿದರು.

ಮನೆಯ ತೊಟ್ಟಿಯಲ್ಲೇ ಅಕ್ರಮವಾಗಿ ಮದ್ಯ ಸಂಗ್ರಹಿಸಿ, ಮಾರಾಟ ಮಾಡುತ್ತಿದ್ದ ಬಗ್ಗೆ ಯಶವಂತರಾವ್ ವಿರುದ್ಧ ಕೇಸ್ ದಾಖಲಾಗಿದ್ದವು.

ನಗರಸಭೆ, ದೂಡಾ ಅಧ್ಯಕ್ಷರಾಗಿದ್ದ ವೇಳೆ ಲೋಕಾಯುಕ್ತ ಸಂಸ್ಥೆಯಲ್ಲೂ ಕೇಸ್ ದಾಖಲಾಗಿವೆ. ಅಕ್ರಮ ಡೋರ್ ನಂಬರ್ ಪ್ರಕರಣವೂ ಲೋಕಾಯುಕ್ತ ಸಂಸ್ಥೆಯಲ್ಲಿ ಕೇಸ್ ಆಗಿತ್ತು. ಶಾಮನೂರು ಕುಟುಂಬದ ವಿರುದ್ಧ ಆರೋಪಿಸುವ ಮುನ್ನ ಜಾಧವ್ ಕಾಂಪ್ಲೆಕ್ಸ್ ಹೇಗೆ ಬಂದಿತೆಂಬುದನ್ನೂ ಜನರಿಗೆ ತಿಳಿಸಲಿ. ನಮ್ಮ ಆರೋಪಕ್ಕೆ ದಾಖಲೆ ಕೇಳುವ ಯಶವಂತರಾವ್ ತಾವು ಮಾಡುವ ಆರೋಪಗಳನ್ನೂ ದಾಖಲೆ ಸಮೇತವೇ ಸಾಬೀತುಪಡಿಸಲಿ ಎಂದು ಅವರು ತಾಕೀತು ಮಾಡಿದರು.

ಹಿಂದೂ ಮಹಾಗಣತಪಿ ಪ್ರತಿಷ್ಠಾಪನೆ ವೇಳೆ ಕಳೆದ ವರ್ಷ ವಸ್ತು ಪ್ರದರ್ಶಕರಿಂದ ನಾನು, ಹಣ ಪಡೆದ ಬಗ್ಗೆ ದಾಖಲೆ ಇದ್ದರೆ ಹಾಜರುಪಡಿಸಲಿ.

ಅದೇ ರೀತಿ 2 ದಶಕದಿಂದ ರಾಮ ಮಂದಿರ ಹೆಸರಲ್ಲಿ ಜನರಿಂದ ಸಂಗ್ರಹಿಸಿದ ದೇಣಿಗೆ, ಬೆಳ್ಳಿ, ಹಣ ಇತರೆ ಲೆಕ್ಕವನ್ನೂ ಯಶವಂತರಾವ್ ನೀಡಲಿ.

ಬೆಳ್ಳಿ ಇಟ್ಟಿಗೆಯನ್ನು ಅಯೋಧ್ಯೆ ರಾಮ ಮಂದಿರಕ್ಕೆ ಸಮರ್ಪಿಸಿದ್ದರೆ ಅದರ ಅಸಲಿ ರಸೀದಿಯನ್ನು ಕೊಡಲು ಇಂದಿಗೂ ಯಶವಂತರಾವ್ ಜಾಧವ್‌ಗೆ ಸಾಧ್ಯವಾಗಿಲ್ಲ. ಸುಖಾಸುಮ್ಮನೆ ನಾವೆಲ್ಲರೂ ಗೌರವಿಸುವ ಬಸವಪ್ರಭು ಸ್ವಾಮೀಜಿ ಹೆಸರನ್ನು ತಳಕು ಹಾಕುತ್ತಿದ್ದಾರೆ ಎಂದು ಅವರು ದೂರಿದರು.

ರಾಜನಹಳ್ಳಿ, ಚನ್ನಗಿರಿ, ಅಜ್ಜಂಪುರ, ಮಾಗನೂರು, ಮಾಗಾನಹಳ್ಳಿ, ಮುದೇಗೌಡ್ರು, ಕಾಸರ್, ಮುಂಡಾಸ್, ಐನಳ್ಳಿ ಸೇರಿದಂತೆ ಹಲವಾರು ಮನೆತನಗಳು ದಾವಣಗೆರೆ ಅಭಿವೃದ್ಧಿಗೆ ತಮ್ಮ ದೇ ಆದ ಕೊಡುಗೆ ನೀಡಿವೆ. ಶಾಮನೂರು ಕುಟುಂಬದ ಕೊಡುಗೆಯೂ ಅಪಾರ. ಹತ್ತಿ ಮಿಲ್‌ಗಳು ಬಂದ್‌ ಆದಾಗ ಶಾಮನೂರು ಶಿವಶಂಕರಪ್ಪ ದೂರದೃಷ್ಟಿಯಿಂದ ಶೈಕ್ಷಣಿಕ ನಗರಿಯಾಗಿ ದಾವಣಗೆರೆಯನ್ನು ಕಟ್ಟಿದರು. 5 ಅಂಗ ಸಂಸ್ಥೆಗಳಷ್ಟೇ ಇದ್ದ ಬಾಪೂಜಿ ವಿದ್ಯಾಸಂಸ್ಥೆ ಶಾಮನೂರು ಸಾರಥ್ಯದಲ್ಲಿ 58ಕ್ಕೂ ಹೆಚ್ಚು ಅಂಗ ಸಂಸ್ಥೆ ಹೊಂದಿದೆ. ಈ ಊರನ್ನು ಕರ್ನಾಟಕದ ಆಕ್ಸ್‌ಫರ್ಡ್‌ ಮಾಡುವಲ್ಲಿ ಶಾಮನೂರು ಪರಿಶ್ರಮ ದೊಡ್ಡದು. ಇಂತಹ ಹಿರಿಯರ ಬಗ್ಗೆ ಹಗುರ ಮಾತು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.

ಪಾಲಿಕೆ ವಿಪಕ್ಷದ ಮಾಜಿ ನಾಯಕ ಎ.ನಾಗರಾಜ ಮಾತನಾಡಿ, ಶಾಮನೂರು ಶಿವಶಂಕರಪ್ಪ, ಎಸ್ಸೆಸ್ ಮಲ್ಲಿಕಾರ್ಜುನ ದಾವಣಗೆರೆ ಜಿಲ್ಲೆಯಲ್ಲಿ ಹಲವಾರು ಶಾಶ್ವತ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಸಾಕಷ್ಟು ಅಭಿವೃದ್ಧಿ ಕಾರ್ಯ ಕಣ್ಣುಗಳ ಮುಂದಿವೆ. ಬರೀ ಶಾಮನೂರು ಕುಟುಂಬ ಮಾತ್ರ ಅಭಿವೃದ್ಧಿ ಮಾಡಿದೆಯನ್ನುತ್ತಿಲ್ಲ. ಸಾಕಷ್ಟು ಮನೆತನಗಳು ದಾವಣಗೆರೆ ಅಭಿವೃದ್ಧಿಗೆ ಕಾರಣೀಭೂತರಾಗಿದ್ದಾರೆ. ಶಾಮನೂರು ಕುಟುಂಬದ ಶ್ರಮವೂ ದೊಡ್ಡದಿದೆ. ದೊಡ್ಡವರ ಬಗ್ಗೆ ಮಾತನಾಡುವಾಗ ನಾಲಿಗೆ ಹಿಡಿದಲ್ಲಿಟ್ಟುಕೊಳ್ಳಬೇಕು ಎಂದು ಯಶವಂತರಾವ್ ಸೇರಿದಂತೆ ಬಿಜೆಪಿಯವರಿಗೆ ಎಚ್ಚರಿಸಿದರು.

ಕೆಪಿಸಿಸಿ ಸದಸ್ಯ, ನಗರಸಭೆ ಮಾಜಿ ಅಧ್ಯಕ್ಷ ಆರ್.ಎಚ್.ನಾಗಭೂಷಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ, ಮಾಜಿ ಮೇಯರ್ ಅನಿತಾ ಬಾಯಿ ಮಾಲತೇಶ, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಚೆಸ್ ಯುವರಾಜ, ಫಯಾಜ್ ಅಹಮ್ಮದ್, ಮುಜಾಹಿದ್ ಪಾಷ, ರಹಮತ್ತುಲ್ಲಾ, ದಾದಾಪೀರ್ ಇದ್ದರು.

....ಕೋಟ್‌....

ಬಡವರಾಗಿ ಹುಟ್ಟುವುದು ತಪ್ಪಲ್ಲ. ಯಾರೇನೂ ಚಿನ್ನದ ಚಮಚವನ್ನು ಬಾಯಲ್ಲಿ ಇಟ್ಟುಕೊಂಡೆ ಹುಟ್ಟಿರುವುದಿಲ್ಲ. ಶಾಮನೂರು ಶಿವಶಂಕರಪ್ಪ ಕಷ್ಟಪಟ್ಟು ಬೆಳೆದಿದ್ದಲ್ಲದೇ ದಾವಣಗೆರೆಯನ್ನೂ ಬೆಳೆಸಿದವರು. ಏಕವಚನ, ಅಸಭ್ಯ ಮಾತುಗಳು ನಮಗೂ ಸಹ ಬರುತ್ತವೆ. ಆದರೆ, ಅದು ನಮ್ಮ ಸಂಸ್ಕೃತಿ ಅಲ್ಲ. ಬಿಜೆಪಿಯವರು ಜಿಲ್ಲಾ ಕೇಂದ್ರದಲ್ಲಿ ಶಾಂತಿ, ಸಾಮರಸ್ಯ ಕದಡಲು ಪ್ರಯತ್ನಿಸುತ್ತಿದ್ದಾರೆ. ವ್ಯಾಪಾರಸ್ಥರು ಕಾಂಗ್ರೆಸ್ ಆಡಳಿತವನ್ನೇ ಬಯಸುತ್ತಾರೆ. ಬಿಜೆಪಿ ಆಡಳಿತದಲ್ಲಿ ಜನ ನೆಮ್ಮದಿಯಾಗಿ ಹಬ್ಬಗಳನ್ನು ಆಚರಿಸುವುದಕ್ಕೂ ಆಗುವುದಿಲ್ಲ.

-ದಿನೇಶ ಕೆ.ಶೆಟ್ಟಿ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ

...

ಪೋಟೊ:8ಕೆಡಿವಿಜಿ12, 13

ದಾವಣಗೆರೆಯಲ್ಲಿ ಮಂಗ‍ಳವಾರ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ.ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾನಪದವು ಆಳವಾದ ಒಂದು ವಿಶೇಷ ಸಂಸ್ಕೃತಿ
ಹಾಸನ ಮತ್ತು ಬೇಲೂರು ಚತುಷ್ಪಥ ಕಾಮಗಾರಿಗೆ ಅನುದಾನ ಮಂಜೂರು