ಯುನೆಸ್ಕೊ ಮಾನ್ಯತೆ ಪಡೆದ ಸಂಸ್ಥೆಯಾದ ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಜಿಲ್ಲಾ ಘಟಕ ಮತ್ತು ತಾಲ್ಲೂಕು ಘಟಕ ಹಾಸನ, ಎಸ್. ಆರ್. ಎಸ್ ಪ್ರಜ್ಞಾ ವಿದ್ಯಾಶಾಲೆ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಎಸ್. ಆರ್. ಎಸ್ ಪ್ರಜ್ಞಾ ವಿದ್ಯಾಶಾಲೆ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಜಾನಪದ ದಿನಾಚರಣೆ ಮತ್ತು ಜಾನಪದ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರಾಚೀನ ಕಾಲದಿಂದಲೂ ಬಂದಿರುವ ಕಲೆಯೇ ಜಾನಪದ ಕಲೆ, ಜಾನಪದವು ಆಳವಾದ ಒಂದು ವಿಶೇಷ ಸಂಸ್ಕೃತಿಯಾಗಿದೆ ಜಾನಪದ ಕಲೆ ಒಂದು ಮೌಖಿಕ ಕಲೆಯಾಗಿ ಮುಂದುವರಿಯುತ್ತಿದೆ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಹಾಸನ
ಜಾನಪದವು ಯಾವುದೇ ಅಕ್ಷರ ಜ್ಞಾನವಿಲ್ಲದ ಗ್ರಾಮೀಣ ಜನರಿಂದ ಹುಟ್ಟಿ, ಬಾಯಿಯಿಂದ ಬಾಯಿಗೆ ಹರಿದುಬಂದಿರುವ ಅಪೂರ್ವ ಸಾಹಿತ್ಯವಾಗಿದೆ. ಸ್ಥಳೀಯ ಭಾಷೆಯನ್ನು ಸಮೃದ್ಧಿಯಾಗಿ ಬೆಳೆಸುವ ಒಂದು ಕಲೆ ಅಂದರೆ ಅದು ಜಾನಪದ ಕಲೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಬಲರಾಮ ಕೆ.ಎನ್ ಅವರು ತಿಳಿಸಿದ್ದಾರೆ.ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು (ಯುನೆಸ್ಕೊ ಮಾನ್ಯತೆ ಪಡೆದ ಸಂಸ್ಥೆ) ಜಿಲ್ಲಾ ಘಟಕ ಮತ್ತು ತಾಲ್ಲೂಕು ಘಟಕ ಹಾಸನ, ಎಸ್. ಆರ್. ಎಸ್ ಪ್ರಜ್ಞಾ ವಿದ್ಯಾಶಾಲೆ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಎಸ್. ಆರ್. ಎಸ್ ಪ್ರಜ್ಞಾ ವಿದ್ಯಾಶಾಲೆ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಜಾನಪದ ದಿನಾಚರಣೆ ಮತ್ತು ಜಾನಪದ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರಾಚೀನ ಕಾಲದಿಂದಲೂ ಬಂದಿರುವ ಕಲೆಯೇ ಜಾನಪದ ಕಲೆ, ಜಾನಪದವು ಆಳವಾದ ಒಂದು ವಿಶೇಷ ಸಂಸ್ಕೃತಿಯಾಗಿದೆ ಜಾನಪದ ಕಲೆ ಒಂದು ಮೌಖಿಕ ಕಲೆಯಾಗಿ ಮುಂದುವರಿಯುತ್ತಿದೆ ಎಂದು ಹೇಳಿದರು.ಕರ್ನಾಟಕ ಜಾನಪದ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ. ಹಂಪನಹಳ್ಳಿ ತಿಮ್ಮೇಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಹಳ್ಳಿಯ ರೈತರು, ಶ್ರಮಿಕರು ತಮ್ಮ ಆಯಾಸವನ್ನು ಮರೆಯಲು ಹೊಲಗದ್ದೆಗಳಲ್ಲಿ ಹಾಡಿದ ಹಾಡುಗಳೇ ಜಾನಪದ ಗೀತೆಗಳು ಎಂದು ತಿಳಿಸಿದರು. ಹಳ್ಳಿಯ ಜನರ ನಿಷ್ಕಲ್ಮಶ ಮನಸ್ಸಿನಿಂದ, ಶ್ರಮದ ಸಂಸ್ಕೃತಿಯಿಂದ ಸ್ವಾಭಾವಿಕವಾಗಿ ಹುಟ್ಟಿಕೊಂಡ ಕಲೆ ಜಾನಪದ, ಇದಕ್ಕೆ ಯಾವುದೇ ಲಿಖಿತ ರೂಪವಿಲ್ಲ, ಒಬ್ಬರಿಂದ ಮತ್ತೊಬ್ಬರಿಗೆ ಬಾಯಿಂದ ಬಾಯಿಗೆ ಹರಿದು ಬಂದಿರುವ ಅಮೂಲ್ಯ ಕಲೆಯೇ ಜಾನಪದ ಕಲೆ ಎಂದು ಹೇಳಿದರುಯುವಜನರಲ್ಲಿ ಹೆಚ್ಚು ಜಾನಪದ ಕಲೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದ ಅವರು, ಮಣ್ಣಿನ ಸಂಸ್ಕೃತಿಯನ್ನು ಉಳಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು. ಭಾರತ ಸಂಸ್ಕೃತಿಯ ಮೂಲ ಬೇರು ಎಂದರೆ ಜಾನಪದ ಕಲೆ, ಕಾಲಕಾಲಕ್ಕೆ ಅನುಗುಣವಾಗಿ ಜಾನಪದ ಹೊಸ ಅಧ್ಯಯಗಳೊಂದಿಗೆ ಹುಟ್ಟುತ್ತ ಬೆಳೆಯುತ್ತಿದೆ ಎಂದು ಹೇಳಿದರು.
ಜಾನಪದ ಕಲೆಯು ಮರವಾಗಿ ಬೆಳೆದಿದೆ ಅದನ್ನು ಉಳಿಸಿ ಬೆಳೆಸುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ, ಜಾನಪದ ಸಂಸ್ಕೃತಿಯನ್ನು ನಾಶವಾಗದಂತೆ ಉಳಿಸಿ ಬೆಳೆಸಬೇಕು ಎಂದು ತಿಳಿಸಿದರು. ಎಸ್.ಆರ್.ಎಸ್ ಪ್ರಜ್ಞಾ ವಿದ್ಯಾಶಾಲೆಯ ಕಾರ್ಯದರ್ಶಿಗಳಾದ ನಟರಾಜ್.ಎಂ ಮಾತನಾಡಿ, ಜಾನಪದ ಎಂದರೆ ಜನರಿಂದ, ಜನರಿಗೆ ತಲುಪುವ ಒಂದು ಕಲೆಯಾಗಿದೆ ಎಂದು ಹೇಳಿದರು. ಅಕ್ಷರವಿಲ್ಲದ ಕಾಲದಿಂದಲೂ ಜಾನಪದ ಶ್ರೀಮಂತವಾಗಿ ಬೆಳೆದು ಬಂದಿದೆ, ಕರ್ನಾಟಕ ರಾಜ್ಯವು ಜಾನಪದ ಕಲೆಯ ತವರೂರು, ತಾಂತ್ರಿಕವಾಗಿ ಮತ್ತು ಆಧುನಿಕವಾಗಿ ಜಾನಪದ ತುಂಬಾ ವಿಶೇ?ವಾಗಿ ಬೆಳೆಯುತ್ತಿದೆ ಎಂದು ಹೇಳಿದರು.ವೇದಿಕೆಯಲ್ಲಿ ಡೋಳ್ಳು, ಕಂಸಾಳೆ, ತತ್ವಪದ, ಜಾನಪದ ಗೀತೆ, ಸೋಬಾನೆ ಪದ ಕಾರ್ಯಕ್ರಮದಲ್ಲಿ ಪ್ರರ್ದಶನ ನಡೆದವು.
ಬೆಂಗಳೂರು ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾದ ದೇವಾನಂದ ವರಪ್ರಸಾದ್, ಹಿರಿಯ ಜನಪದ ಕಲಾವಿದರಾದ ಯೋಗೇಂದ್ರ ದುದ್ದ, ಹಿರಿಯ ಕಲಾವಿದರಾದ ಗ್ಯಾರಂಟಿ ರಾಮಣ್ಣ, ಚನ್ನರಾಯಪಟ್ಟಣ ಸಾಹಿತಿಗಳಾದ ಮೇಟಿಕೆರೆ ಹಿರಿಯಣ್ಣ, ಚನ್ನರಾಯಪಟ್ಟಣ ಹಿರಿಯ ಜನಪದ ಕಲಾವಿದರಾದ ಶಿವನಗೌಡ ಪಾಟೀಲ, ಜಿಲ್ಲಾ ಘಟಕದ ಕಾರ್ಯದರ್ಶಿಗಳಾದ ಬಿ. ಟಿ ಮಾನವ, ಕಲಾವಿದರಾದ ನೀಲಮ್ಮ ಜಾಗರವಳ್ಳಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.