ದಾಬಸ್‍ಪೇಟೆ: ಸೋಂಪುರ ಹೋಬಳಿಯ ಶಿವಗಂಗೆ ಸಮೀಪದ ದೇವರ ಅಮಾನಿಕೆರೆ ಕೋಡಿ ಹರಿದದ್ದರಿಂದ ನವದೇವತೆಗಳ ತಪ್ಪೋತ್ಸವ, ಗಂಗಾಪೂಜೆ, ಕನ್ಯಾಮಣಿ ಪೂಜೆ, ಗಂಗಾರತಿ ಪೂಜಾ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸದಸ್ಯ ಎಸ್.ರವಿ, ನೆಲಮಂಗಲ ಶಾಸಕ ಶ್ರೀನಿವಾಸ್ ಹಾಗೂ ತುಮಕೂರು ಗ್ರಾಮಾಂತರ ಮಾಜಿ ಶಾಸಕ ಗೌರಿಶಂಕರ್ ಚಾಲನೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಎಸ್.ರವಿ ಮಾತನಾಡಿ, ನೆಲಮಂಗಲ ಹಾಗೂ ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ದೇವರ ಅಮಾನಿಕೆರೆಯ ನೀರೇ ಜೀವನಾಡಿ. ಈ ಕೆರೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ದೇವರ ಕರೆತಂದು ಪುಣ್ಯಮಾಡಿಸಿ ದೇವರಿಗೆ ಜೀವತುಂಬಿಸುವರು ಎಂದರು.ಮುಂದಿನ ಬಾರಿ ಗೆಲುವು ಶತಸಿದ್ದ: ತುಮಕೂರು ಗ್ರಾಮಾಂತರ ಮಾಜಿ ಶಾಸಕ ಗೌರಿಶಂಕರ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಂದಿದ್ದರೆ ಗೆಲ್ಲುತ್ತಿದ್ದರು. ಅಲ್ಪ ಮತಗಳ ಅಂತರದಲ್ಲಿ ಸೋತಿದ್ದಾರೆ. ಮಾಜಿ ಸಚಿವ ಚನ್ನಿಗಪ್ಪ ವಂಶದ ಕುಡಿಯನ್ನು ಬೆಳೆಸಬೇಕೆಂದು ನಮ್ಮ ನಾಯಕರಾದ ಡಿ.ಕೆ.ಶಿವಕುಮಾರ್ ಅವರ ಅಪೇಕ್ಷೆ ಪಟ್ಟಿದ್ದು, 2028ರ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಶತಸಿದ್ದ ಎಂದರು.
224 ಕ್ಷೇತ್ರಗಳ ಅಭಿವೃದ್ದಿಯಲ್ಲಿ ನೆಲಮಂಗಲ ತಾಲೂಕೇ ನಂ.1:ನೆಲಮಂಗಲ ಶಾಸಕ ಶ್ರೀನಿವಾಸ್ ಎರಡೂವರೆ ವರ್ಷದ ಅವಧಿಯಲ್ಲಿ 1500 ಕೋಟಿ ಅನುದಾನ ತಂದು ಕ್ಷೇತ್ರ ಅಭಿವೃದ್ದಿಪಡಿಸುತ್ತಿದ್ದಾರೆ. ಇಡೀ ರಾಜ್ಯದ 224 ಕ್ಷೇತ್ರಗಳ ಅಭಿವೃದ್ಧಿಯಲ್ಲಿ ನೆಲಮಂಗಲ ಕ್ಷೇತ್ರವೇ ಮುಂದಿದ್ದು, ಭ್ರಷ್ಟಾಚಾರಕ್ಕೆ ಆಸ್ಪದ ಕೊಡದೆ ಶಾಸಕರು ಕೆಲಸ ಮಾಡುತ್ತಿರುವುದು ಗಮನಾರ್ಹ ಎಂದರು.
ವಿರೋಧಿಸುವುದೇ ಬಿಜೆಪಿ-ಜೆಡಿಎಸ್ ಕೆಲಸ:ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ 5 ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದ್ದಕ್ಕೆ ಜೆಡಿಎಸ್ ಪಕ್ಷದ ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಗ್ಯಾರಂಟಿ ಯೋಜನೆಗಳಿಂದ ಜನರು ಸೋಮಾರಿಗಳಾಗುತ್ತಿದ್ದಾರೆ ಎನ್ನುತ್ತಿದ್ದಾರೆ. ಆದರೆ ಲಕ್ಷಾಂತರ ಹೆಣ್ಣು ಮಕ್ಕಳ ಸಂಸಾರಕ್ಕೆ ಈ ಗ್ಯಾರಂಟಿ ಯೋಜನೆಗಳೇ ಸಹಕಾರಿಯಾಗಿವೆ ಎನ್ನುವುದನ್ನು ಅವರು ಮರೆಯಬಾರದು, ಗ್ಯಾರಂಟಿ ಯೋಜನೆ ವಿರೋಧಿಸುವುದೇ ಬಿಜೆಪಿ ಹಾಗೂ ಜೆಡಿಎಸ್ ಕೆಲಸವಾಗಿದೆ ಎಂದರು.
ಶೀಘ್ರದಲ್ಲೇ ರಸ್ತೆ ನಿರ್ಮಾಣ:ನೆಲಮಂಗಲ ಶಾಸಕ ಶ್ರೀನಿವಾಸ್ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ತುಂಬಿದ ಕೆರೆಗಳಿಗೆ ಬಾಗಿನ ಅರ್ಪಿಸುವುದು ಸಂಪ್ರದಾಯ. ಈ ವರ್ಷ ಉತ್ತಮ ಮಳೆಯಾದ ಪರಿಣಾಮ ಹಳ್ಳಕೊಳ್ಳ, ಕೆರೆಗಳಿಗೆ ನೀರು ಹರಿದು ತುಂಬಿವೆ. ಶಿವಗಂಗೆ ಬೆಟ್ಟದ ನೀರು ಸೀದಾ ದೇವರ ಅಮಾನಿಕೆರೆಗೆ ಸೇರುತ್ತದೆ. ಗ್ರಾಮಸ್ಥರ ಮನವಿಯಂತೆ ರಾಜ್ಯಹೆದ್ದಾರಿಯಿಂದ ದೇವರು ಪುಣ್ಯಮಾಡುವ ಸ್ಥಳದವರೆಗೆ ಅತಿಶೀಘ್ರದಲ್ಲೇ ರಸ್ತೆ ನಿರ್ಮಿಸಿ ಭಕ್ತಾದಿಗಳಿಗೆ ಅನುಕೂಲ ಮಾಡಿಕೊಡುವುದಲ್ಲದೆ, ದೇವರ ಅಮಾನಿಕೆರೆಯ ಅಭಿವೃದ್ಧಿಗೆ ಸಹಕರಿಸುತ್ತೇನೆ ಎಂದರು.
30 ವರ್ಷಗಳಿಂದ ಸಾಧ್ಯವಾದುದು ಈ ಬಾರಿ ಯಶ್ವಸ್ವಿ:ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ, ನನ್ನ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಈ ಕೆರೆಗೆ ಸುಮಾರು 30 ವರ್ಷಗಳಿಂದ ತೆಪ್ಪೋತ್ಸವ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ. ಇದೀಗ ನೆಲಮಂಗಲ ಶಾಸಕ ಶ್ರೀನಿವಾಸ್ ನೇತೃತ್ವದಲ್ಲಿ ಈ ಬಾರಿ ಅದ್ದೂರಿಯಾಗಿ ಕೆರೆಗೆ ಬಾಗಿನ ಅರ್ಪಿಸುವುದರ ಜೊತೆಗೆ ನವದೇವತೆಗಳ ತೆಪ್ಪೋತ್ಸವ ಮಾಡಿ ದೇವರ ಸೇವೆ ಯಶಸ್ವಿಯಾಗಿ ಮಾಡಿದ್ದೇವೆ. ದೇವಾನುದೇವತೆಗಳ ಆಶೀರ್ವಾದವಿದ್ದರೆ ಪ್ರತಿಯೊಬ್ಬರು ಶಾಂತಿ, ನೆಮ್ಮದಿ, ಸಮೃದ್ದಿಯಿಂದ ಬದುಕಲು ಸಾಧ್ಯ ಎಂದರು.
ಮುತ್ತೈದೆಯರಿಗೆ ಬಾಗಿನ ಪುರುಷರಿಗೆ ಬೇಡ್ ಶಿಟ್:ಕಾರ್ಯಕ್ರಮಕ್ಕೆ ನೆಲಮಂಗಲ ಹಾಗೂ ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಸುಮಾರು ಎಂಟು ಸಾವಿರಕ್ಕೂ ಹೆಚ್ಚು ಜನ ಆಗಮಿಸಿದ್ದರು. ಮುತ್ತೈದೆಯರಿಗೆ ಬಾಗಿನ, ಪುರುಷರಿಗೆ ಬೇಡ್ ಶಿಟ್ ಹಾಗೂ ಎಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ, ಎನ್‌ಪಿಎ ಅಧ್ಯಕ್ಷ ಎಂ.ಕೆ.ನಾಗರಾಜು, ಮುಖಂಡರಾದ ಅಗಳಕುಪ್ಪೆ ಗೋವಿಂದರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗರುದ್ರಶರ್ಮಾ, ಹನುಮಂತೇಗೌಡ್ರು, ಪ್ರದೀಪ್ ಕುಮಾರ್, ಮಂಜುನಾಥ್, ಗುಳೂರು ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾಲನೇತ್ರಯ್ಯ, ಎನ್‌ಪಿಎ ಸದಸ್ಯ ಅಂಚೆಮನೆ ಪ್ರಕಾಶ್, ಜಗದೀಶ್, ಮುನಿರಾಮು, ಸಿ.ಎಂ.ಗೌಡ, ಮಲ್ಲೇಶ್, ಸ್ಥಳೀಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.ಪೋಟೋ 3 * 4 :
ಸೋಂಪುರ ಹೋಬಳಿಯ ಶಿವಗಂಗೆಯ ಸಮೀಪವಿರುವ ದೇವರ ಅಮಾನಿಕೆರೆಯಲ್ಲಿ ತೆಪ್ಪೋತ್ಸವ, ಬಾಗಿನ ಅರ್ಪಿಸುವ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸದಸ್ಯ ಎಸ್.ರವಿ, ನೆಲಮಂಗಲ ಶಾಸಕ ಶ್ರೀನಿವಾಸ್ ಹಾಗೂ ತುಮಕೂರು ಗ್ರಾಮಾಂತರ ಮಾಜಿ ಶಾಸಕ ಗೌರಿಶಂಕರ್ ಚಾಲನೆ ನೀಡಿದರು.