ಸರ್ಕಾರ ಅಸ್ಥಿರಕ್ಕೆ ಬಿಜೆಪಿ-ಜೆಡಿಎಸ್ ಜಂಟಿ ಪ್ರಯತ್ನ: ಗೋಪಾಲಕೃಷ್ಣ ಬೇಳೂರು ವಾಗ್ದಾಳಿ

KannadaprabhaNewsNetwork | Published : Oct 2, 2024 1:13 AM

ಸಾರಾಂಶ

ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ರಾಜಕೀಯ ದೊಂಬರಾಟ ನಡೆಸುತ್ತಿದೆ. ಸಿದ್ದರಾಮಯ್ಯ ಅವರನ್ನು ಇಳಿಸಲು ಕೇಂದ್ರ ಸರ್ಕಾರ ರಾಜ್ಯಪಾಲರ ಮೂಲಕ ಪ್ರಯತ್ನಿಸುತ್ತಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ದೂರಿದರು.

ಕನ್ನಡಪ್ರಭ ವಾರ್ತೆ ಸಾಗರ

ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಜಂಟಿಯಾಗಿ ರಾಜ್ಯಪಾಲರನ್ನು ದಾಳವಾಗಿರಿಸಿಕೊಂಡು ಮುಖ್ಯಮಂತ್ರಿಗಳನ್ನು ಇಳಿಸಿ ಸರ್ಕಾರ ಅಸ್ತಿರಗೊಳಿಸುವ ಕೆಲಸ ಮಾಡುತ್ತಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ದೂರಿದರು.

ಸಾಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಅವರು ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ರಾಜಕೀಯ ದೊಂಬರಾಟ ನಡೆಸುತ್ತಿದೆ. ಸಿದ್ದರಾಮಯ್ಯ ಅವರನ್ನು ಇಳಿಸಲು ಕೇಂದ್ರ ಸರ್ಕಾರ ರಾಜ್ಯಪಾಲರ ಮೂಲಕ ಪ್ರಯತ್ನಿಸುತ್ತಿದೆ. ಆದರೆ ಮುಖ್ಯಮಂತ್ರಿಗಳು ಇದಕ್ಕೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಎರಡು ತಿಂಗಳು ನನಗೆ ಕಷ್ಟ ಬರಬಹುದು ಆನಂತರ ನಾನು ಎದ್ದು ನಿಲ್ಲುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈಗಾಗಲೇ ಜೆಡಿಎಸ್‌ನ ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರ ಮೇಲೂ ಕೇಸ್ ಆಗಿದೆ. ಇದೇ ರೀತಿ ರಾಜಕೀಯ ಜಿದ್ದಾಜಿದ್ದಿ ನಡೆಯುತ್ತಾ ಹೋದರೆ ಹೇಗೆ? ಎಂದು ಪ್ರಶ್ನಿಸಿದರು.

ಯಾರೋ ಒಬ್ಬರನ್ನು ಅಧಿಕಾರದಿಂದ ಕೆಳಗಿಳಿಸಲು ಹೋದರೆ ರಾಜಕೀಯ ದೊಂಬರಾಟ ನಡೆಯುತ್ತದೆ. ರಾಜ್ಯದ ಹಿತದೃಷ್ಟಿಯಿಂದ ರಾಜ್ಯಪಾಲರನ್ನು ಇಟ್ಟು ಕೊಂಡು ಕೇಂದ್ರದವರು ಮುಖ್ಯಮಂತ್ರಿಯನ್ನು ಆಟ ಆಡಿಸುವುದು ಬಿಡಬೇಕು. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಹೀಗೆ ಮಾಡುತ್ತಾರಾ? ಎಂದು ಕಿಡಿಕಾರಿದರು.

ಇದ್ಯಾವುದೂ ನಡೆಯುವುದಿಲ್ಲ ರಾಜ್ಯದ ಮುಖ್ಯಮಂತ್ರಿಯ ಪರ 136 ಶಾಸಕರು ಇದ್ದೇವೆ. ಇಡಿ ಮೂಲಕ ಬಗ್ಗು ಬಡಿಯಬಹುದು ಎಂದು ಕೇಂದ್ರದವರು ಇಡಿ ಅನ್ನು ಇಟ್ಟುಕೊಂಡಿದ್ದಾರೆ. ಐಟಿ ಮತ್ತು ಇಡಿ ಅವರಿಂದ ಬೆದರಿಸಿ ದೊಡ್ಡ ದೊಡ್ಡ ಉದ್ಯಮಿಗಳಿಂದ ಬಿಜೆಪಿಯವರು 8,000 ಕೋಟಿ ಚುನಾವಣಾ ಫಂಡ್ ಸಂಗ್ರಹ ಮಾಡಿದ್ದಾರೆ. ಕಾಂಗ್ರೆಸ್‌ ನವರ 1136 ಕೋಟಿ ಹಣಕ್ಕಾಗಿ ಬಿಜೆಪಿಯವರು ದೇಶದಲ್ಲಿ ಅಲ್ಲೋಲಕಲ್ಲೋಲ ಮಾಡಿದರು. ಈಗ 8000 ಕೋಟಿ ಬಗ್ಗೆ ಬಿಜೆಪಿಯವರು ಏನು ಹೇಳುತ್ತಾರೆ? ಚುನಾವಣಾ ಫಂಡ್ ದುರುಪಯೋಗದ ಬಗ್ಗೆ ಬಿಜೆಪಿಯವರ ಮೇಲು ಪ್ರಕರಣ ದಾಖಲಾಗಿದೆ ಅದರ ತನಿಖೆಯು ನಡೆಯಲಿ ಎಂದರು.

ಸೈಟ್ ವಾಪಸ್ ಕೊಟ್ಟ ಬಗ್ಗೆ ಕೋರ್ಟ್ ನಿರ್ಧಾರ ತೆಗೆದುಕೊಳ್ಳಬೇಕು. ಎಸ್ಐಟಿ ಅಧಿಕಾರಿ ತನಿಖೆ ಮಾಡಲು ಮುಂದಾದರೆ ಕುಮಾರಸ್ವಾಮಿ ಅವರಿಗೆ ಏನು ಉರಿಯುತ್ತದಾ? ಕುಮಾರಸ್ವಾಮಿ ನಾನೇ ಚೀಫ್, ನಂದೇ ನಡೀಬೇಕು ಎಂದು ಮಾತನಾಡುತ್ತಿದ್ದಾರೆ. ಇವೆಲ್ಲ ಏನು ನಡೆಯಲ್ಲ ಅಧಿಕಾರಿಗಳು ಅಧಿಕಾರಿ ಗಳಾಗಿಯೇ ಇರುತ್ತಾರೆ. ಕೇಂದ್ರ ಸಚಿವರಾಗಿ ಅವರಿಗೆ ಅಧಿಕಾರ ಇದೆ. ಅಧಿಕಾರದಿಂದ ಇಳಿದ ಮೇಲೆ ಅವರಿಗೂ ಗೊತ್ತಾಗುತ್ತದೆ. ಒಗಟು ಹೇಳಿದಂತೆ ಅಧಿಕಾರಿ ಗಾದೆ ಹೇಳಿದ್ದಾರೆ ಅಷ್ಟೇ ಅವರಿಗೆ ಹೇಳಿದ್ದಲ್ಲ ಎಂದು ಕುಟುಕಿದರು.

ಸಿಎಂ ಬದಲಾವಣೆಯ ಪ್ರಶ್ನೆ ಇಲ್ಲ ಅದರ ಬಗ್ಗೆ ಈಗ ಯಾವುದೇ ಚರ್ಚೆ ನಡೆದಿಲ್ಲ. ಕೋಳಿವಾಡ ರವರು ವೈಯಕ್ತಿಕ ಹೇಳಿಕೆ ನೀಡಿದ್ದಾರೆ ಅಷ್ಟೇ, ಅವರು ಎಂಪಿ ಅಲ್ಲ ಎಂಎಲ್ಎ ಅಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ಸುಭದ್ರ ಸರ್ಕಾರ ಇರುತ್ತೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇರ್ತಾರೆ ಕುಮಾರಸ್ವಾಮಿ ಅವರು ಶಶಿಕಲಾ ಜೊಲ್ಲೆ, ವಿಜಯೇಂದ್ರ ಮೇಲೆಲ್ಲಾ ಕೇಸುಗಳಿವೆ ಅವರು ರಾಜೀನಾಮೆ ಕೊಡುತ್ತಾರಾ? ಅವರು ಕೊಟ್ಟರೆ ನಾವು ಕೊಡ್ತೀವಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮುಡಾ ಪ್ರಕರಣದಲ್ಲಿ ಈಗಾಗಲೇ ಹೈಕೋರ್ಟ್ ಆದೇಶದ ಮೇಲೆ ಪ್ರಕರಣ ದಾಖಲಿಸಿ ತನಿಖೆ ಆರಂಭವಾಗಿದೆ. ಸಿದ್ದರಾಮಯ್ಯ ಪತ್ನಿ ಪಾರ್ವತಿಯವರು ತಮ್ಮ ಪತಿಗೆ ಏನು ಆಗಬಾರದೆಂದು ನಿವೇಶನ ಹಿಂತಿರುಗಿಸಿದ್ದಾರೆ. ಇದು ಅವರ ವೈಯಕ್ತಿಕ ಈ ಬಗ್ಗೆ ನಾನು ಏನು ಹೇಳುವುದಿಲ್ಲ. ಕೇಸ್ ನಡೆಯುತ್ತಿರುವ ಹಿನ್ನೆಲೆ ಸೈಟ್ ವಾಪಸ್ ನೀಡಿದರೆ ಏನಾಗುತ್ತೋ ನನಗೂ ಗೊತ್ತಿಲ್ಲ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

Share this article