ಗೌರ್ನರ್‌ಗೆ ಕೈ ಅಗೌರವ ಖಂಡಿಸಿ ದೋಸ್ತಿಗಳ ಪ್ರತಿಭಟನೆ

KannadaprabhaNewsNetwork |  
Published : Jan 28, 2026, 02:15 AM IST
BJP Protest 3 | Kannada Prabha

ಸಾರಾಂಶ

ಜಂಟಿ ಅಧಿವೇಶನ ವೇಳೆ ರಾಜ್ಯಪಾಲರಿಗೆ ಆಡಳಿತ ಪಕ್ಷ ಕಾಂಗ್ರೆಸ್‌ ಅವಮಾನಿಸಿದ್ದನ್ನು ಖಂಡಿಸಿ ಮತ್ತು ಸುಮಾರು 6 ಸಾವಿರ ಕೋಟಿ ರು.ಗೂ ಅಧಿಕ ಮೊತ್ತದ ಅಬಕಾರಿ ಹಗರಣ ನಡೆದಿದೆ ಎಂದು ಆರೋಪಿಸಿ, ಹಗರಣದ ತನಿಖೆ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶ ಅಥವಾ ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿ ಬಿಜೆಪಿ-ಜೆಡಿಎಸ್‌ ಶಾಸಕರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಜಂಟಿ ಅಧಿವೇಶನ ವೇಳೆ ರಾಜ್ಯಪಾಲರಿಗೆ ಆಡಳಿತ ಪಕ್ಷ ಕಾಂಗ್ರೆಸ್‌ ಅವಮಾನಿಸಿದ್ದನ್ನು ಖಂಡಿಸಿ ಮತ್ತು ಸುಮಾರು 6 ಸಾವಿರ ಕೋಟಿ ರು.ಗೂ ಅಧಿಕ ಮೊತ್ತದ ಅಬಕಾರಿ ಹಗರಣ ನಡೆದಿದೆ ಎಂದು ಆರೋಪಿಸಿ, ಹಗರಣದ ತನಿಖೆ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶ ಅಥವಾ ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿ ಬಿಜೆಪಿ-ಜೆಡಿಎಸ್‌ ಶಾಸಕರು ಪ್ರತಿಭಟನೆ ನಡೆಸಿದರು.

ಮಂಗಳವಾರ ಬೆಳಗ್ಗೆ ವಿಧಾನಸೌಧದ ಆವರಣದ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಜಮಾಯಿಸಿದ್ದ ಉಭಯ ಪಕ್ಷಗಳ ಶಾಸಕರು ಮತ್ತು ವಿಧಾನ ಪರಿಷತ್‌ ಸದಸ್ಯರು, ರಾಜ್ಯ ಸರ್ಕಾರದ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ರಾಜೀನಾಮೆಗೆ ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ, ಅಬಕಾರಿ ಹಗರಣದಲ್ಲಿ ಸ್ವತಃ ಅಬಕಾರಿ ಸಚಿವರು ಮತ್ತು ಅವರ ಕುಟುಂಬದ ಸದಸ್ಯರ ಹೆಸರು ಕೇಳಿ ಬರುತ್ತಿದೆ. ಆದರೂ ಮುಖ್ಯಮಂತ್ರಿಗಳು ಈ ವಿಚಾರವನ್ನು ಸದನದಲ್ಲಿ ಚರ್ಚಿಸಲು ಬಿಡುತ್ತಿಲ್ಲ. ಆರು ಸಾವಿರ ಕೋಟಿ ರು. ಗೂ ಹೆಚ್ಚು ಮೊತ್ತದ ಈ ಅಬಕಾರಿ ಹಗರಣ ಕುರಿತು ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರು ಅಥವಾ ಸಿಬಿಐನಿಂದ ತನಿಖೆ ಮಾಡಿಸಬೇಕು ಎಂದು ಆಗ್ರಹಿಸಿದರು.

ಕುಡುಕರ ರಾಜ್ಯ ಮಾಡಲು ಪ್ರಯತ್ನ:

ರಾಜ್ಯ ಸರ್ಕಾರ ಕರ್ನಾಟಕವನ್ನು ಕುಡುಕರ ರಾಜ್ಯ ಮಾಡಲು ಮುಂದಾಗಿದೆ. ಗ್ರಾಮೀಣ ಭಾಗದ ದಿನಸಿ ಅಂಗಡಿಗಳಲ್ಲಿ ಹೆಂಡ ಮಾರಾಟ ಮಾಡಲಾಗುತ್ತಿದೆ. ಸಿದ್ಧರಾಮಯ್ಯ ಅವರು ತಮ್ಮ ಬೊಕ್ಕಸ ತುಂಬಿಸಿಕೊಳ್ಳಲು ಹಾಗೂ ಗ್ಯಾರಂಟಿಗಳಿಗೆ ಹಣ ತುಂಬಿಸಿಕೊಳ್ಳಲು ಎರಡೂವರೆ ವರ್ಷಗಳಲ್ಲಿ ಅಬಕಾರಿ ಗುರಿ ಶೇ.35ರಷ್ಟು ಹೆಚ್ಚಿಸಿದ್ದಾರೆ. ಅಬಕಾರಿ ಇಲಾಖೆ ಅಧಿಕಾರಿಗಳು ಆ ಸ್ಥಾನಕ್ಕೆ ಬರಲು ಕೋಟಿ ಕೋಟಿ ರು. ಲಂಚ ಕೊಟ್ಟು ಬರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ಇಂತಹ ನಾಚಿಕೆಗೇಡಿನ ಲಜ್ಜೆಗೆಟ್ಟ ಸರ್ಕಾರವನ್ನು ಕರ್ನಾಟಕದ ಇತಿಹಾಸದಲ್ಲಿ ಎಂದೂ ನೋಡಿರಲಿಲ್ಲ. ಜನ ಈ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಜನರ ಕಲ್ಯಾಣ ಕುರಿತು ಚಿಂತನೆ ಮಾಡಬೇಕಾದ ಮುಖ್ಯಮಂತ್ರಿ ಗ್ಯಾರಂಟಿ, ಗ್ಯಾರಂಟಿ ಎಂದು ಹೇಳಿಕೊಂಡು ಗ್ರಾಮೀಣ ಭಾಗದ ಬಡ ಕುಟುಂಬದ ಜೀವನ ಹಾಳುಗೆಡವಲು ಮುಂದಾಗಿರುವುದು ದುರ್ದೈವ. ಅಬಕಾರಿ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು. ಈ ಹಗರಣ ಕುರಿತು ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಇಂದು ಕಮಿಷನ್‌, ಭ್ರಷ್ಟ, ಲೂಟಿ, ದುಂಡಾವರ್ತಿ ಸರ್ಕಾರ ರಾಜ್ಯವನ್ನಾಳುತ್ತಿದೆ. ಇದು ನಾನು ಹೇಳುತ್ತಿರುವುದಲ್ಲ. ರಾಜ್ಯದ ಜನರೇ ಮಾತನಾಡುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷದ ನಮ್ಮ ಕೆಲ ಸ್ನೇಹಿತರಿಗೇ ಈ ಸರ್ಕಾರದ ವರ್ತನೆ ಬೇಸರ ತರಿಸಿದೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ಸಿಂದ ಗೂಂಡಾ ವರ್ತನೆ:

ಕಾಂಗ್ರೆಸ್ಸಿನ ಗೂಂಡಾಗಳು ಸದನದಲ್ಲಿ ರಾಜ್ಯಪಾಲರ ಜೊತೆ ಗೂಂಡಾ ವರ್ತನೆ ತೋರಿದ್ದನ್ನು ದೇಶದ ಜನರು ನೋಡಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಈ ಸರ್ಕಾರ ರಾಜ್ಯಪಾಲರನ್ನು ಜೀತದಾಳು ಎಂದು ತಿಳಿದುಕೊಂಡಿದ್ದಾರೆ. ಇಂದಿರಾ ಗಾಂಧಿ ಆಡಳಿತಾವಧಿಯಲ್ಲಿ ರಾಜ್ಯಪಾಲರನ್ನು ಯಾವ ರೀತಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬುದನ್ನು ಇಡೀ ದೇಶವೇ ನೋಡಿದೆ. ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರ ಇದ್ದಾಗ 90 ಬಾರಿ ರಾಷ್ಟ್ರಪತಿ ಆಡಳಿತ ಹೇರಲಾಗಿತ್ತು ಎಂದು ವಾಗ್ದಾಳಿ ನಡೆಸಿದರು.

ಅಬಕಾರಿ ಸಚಿವ 4 ಸಾವಿರ ಕೋಟಿ ರು. ಲೂಟಿ ಮಾಡಿದ್ದಾರೆ ಎಂದು ನಾವು ಹೇಳಿದ್ದೇವೆ. ಆದರೆ, ಅಬಕಾರಿ ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಅದು 6 ಸಾವಿರ ಕೋಟಿ ರು. ಎಂದು ನೇರವಾಗಿ ಹೇಳಿದ್ದಾರೆ. ಈ ಬಗ್ಗೆ ರಾಜ್ಯಪಾಲರಿಗೂ ಮನವಿ ಮಾಡಿದ್ದಾರೆ. ಈ ಆರು ಸಾವಿರ ಕೋಟಿ ರು. ಪೈಕಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಅವರ ಪಾಲೆಷ್ಟು? ಮಲ್ಲಿಕಾರ್ಜುನ ಖರ್ಗೆ ಅವರ ಪಾಲೆಷ್ಟು ಎಂಬುದನ್ನು ಕಾಂಗ್ರೆಸ್ಸಿಗರು ಹೇಳಬೇಕು. ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಅವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಅವರು ರಾಜೀನಾಮೆ ಕೊಡದೆ ನಾವು ಸದನವನ್ನು ಬಿಟ್ಟು ಹೋಗುವುದಿಲ್ಲ. ಸಚಿವರ ತಲೆದಂಡ ಆಗಲೇಬೇಕು ಎಂದು ಛಲವಾದಿ ಆಗ್ರಹಿಸಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ ಬಾಬು, ಶಾಸಕರಾದ ಎಸ್‌.ಸುರೇಶ್‌ ಕುಮಾರ್‌, ವಿಧಾನ ಪರಿಷತ್‌ ಸದಸ್ಯರಾದ ಎಸ್‌.ಎಲ್‌.ಭೋಜೇಗೌಡ, ಎನ್‌.ರವಿಕುಮಾರ್‌ ಸೇರಿದಂತೆ ಉಭಯ ಸದನಗಳ ಬಿಜೆಪಿ-ಜೆಡಿಎಸ್ ಶಾಸಕರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈಭವೋಪೇತ ಮನೆಗಾಗಿ ವಾರಗಿತ್ತಿಯರ ವಾರ್‌
ಮತ್ತೊಂದು ಎಟಿಎಂ ಗೋಲ್‌ಮಾಲ್‌ ಬಯಲು!