ರಾಮನಗರ: ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗೇರ ಕೊಲೆ ಹಾಗೂ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿರುವುದನ್ನು ಖಂಡಿಸಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಅವರ ಹತ್ಯೆ ಮಾಸುವ ಮುನ್ನವೇ ಮತ್ತೊಬ್ಬ ಯುವತಿ ಆಂಜಲಿ ಅಂಬಿಗೇರ ಕೊಲೆಯಾಗಿರುವುದು ದುರಂತದ ಸಂಗತಿಯಾಗಿದೆ. ನೇಹಾ ಹತ್ಯೆಯಾದ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಂಡಿದ್ದರೆ, ಈ ಘಟನೆ ನಡೆಯುತ್ತಿರಲಿಲ್ಲ ಎಂದರು.
ರಾಜ್ಯದಲ್ಲಿ ಪದೇ ಪದೇ ಹತ್ಯೆಗಳು, ಹಲ್ಲೆ ಪ್ರಕರಣಗಳು ನಡೆಯುತ್ತಿರುವುದನ್ನು ನೋಡಿದರೆ ರಾಜ್ಯದಲ್ಲಿ ಸಂಪೂರ್ಣವಾಗಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಪೊಲೀಸ್ ಇಲಾಖೆ ರಾಜ್ಯದಲ್ಲಿ ಆಡಳಿತ ಮಾಡಲು ಸಂಪೂರ್ಣವಾಗಿ ವಿಫಲವಾರಾಗಿದ್ದು, ಈ ರೀತಿಯ ಘಟನೆಗಳಿಂದ ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಟೀಕಿಸಿದರು.ಕೊಲೆ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜಾರಿಯಾಗುತ್ತಿಲ್ಲ. ಹೀಗಾಗಿ ಮಹಿಳೆಯರ ಮೇಲೆ ಅತ್ಯಾಚಾರ ದೌರ್ಜನ್ಯ ಹಾಗೂ ಕೊಲೆ ಪ್ರಕರಣಗಳು ನಡೆಯುತ್ತಲೇ ಇದೆ. ಕೂಡಲೇ ಸರ್ಕಾರ ಇಂತಹ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜಾರಿಗೊಳಿಸಬೇಕು. ಇದಕ್ಕಾಗಿ ಕೊಲೆ ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್ ಮಾಡಬೇಕು. ಈ ಬಗ್ಗೆ ಕಾನೂನು ಜಾರಿಯಾಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಇಂತಹ ಪ್ರಕರಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ನೇಹಾ ಪ್ರಕರಣದಲ್ಲಿ ಕೊಲೆಗಾರನ್ನು ಎನ್ ಕೌಂಟರ್ ಮಾಡಿದ್ದರೆ ಈಗ ಘಟನೆ ನಡೆಯುತ್ತಿರಲಿಲ್ಲ. ಪೊಲೀಸ್ ವ್ಯವಸ್ಥೆ ಸರ್ಕಾರದ ಕೈಗೊಂಬೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಂಜಲಿ ಕೊಲೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಗೃಹ ಸಚಿವ ಪರಮೇಶ್ವರ ಸೇರಿದಂತೆ ರಾಜ್ಯ ಸರ್ಕಾರದ ಯಾವ ಸಚಿವರೂ ಯುವತಿಯ ಕೊಲೆಯನ್ನು ಖಂಡಿಸಿ, ಯಾವ ಹೇಳಿಕೆಯನ್ನೂ ನೀಡಿಲ್ಲ. ಜನರು ಕಾನೂನು ಕೈಗೆತ್ತಿಕೊಳ್ಳುವ ಮುನ್ನ ಸರ್ಕಾರವು ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಜೊತೆಗೆ ಕೊಲೆಯಾಗಿರುವ ಅಂಜಲಿ ಅವರ ಕುಟುಂಬಕ್ಕೆ ಸೂಕ್ತ ಸಹಾಯಧನ ಘೋಷಿಸಬೇಕು ಎಂದು ಆಗ್ರಹಿಸಿದರು.
ರಾಮನಗರದ ಐಜೂರು ವೃತ್ತದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.