ನೆಹರು ಮಾರ್ಕೆಟ್‌ನಲ್ಲಿ ವ್ಯಾಪಾರ ವಹಿವಾಟು ಮಾಡಲು ವ್ಯಾಪಾರಸ್ಥರಿಗೆ ಯಾವುದೇ ತರಹದ ಅಡ್ಡಿ-ಆತಂಕ ಮಾಡಬಾರದು ಎಂದು ಆಗ್ರಹಿಸಿ ನೆಹರು ಮಾರ್ಕೆಟ್ ವ್ಯಾಪಾರಸ್ಥರು ಬುಧವಾರ ನಗರದಲ್ಲಿ ಎಪಿಎಂಸಿ ಆಡಳಿತಾಧಿಕಾರಿ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ರಾಣಿಬೆನ್ನೂರು: ಧಾರವಾಡ ಉಚ್ಛ ನ್ಯಾಯಾಲಯದ ತಾತ್ಕಾಲಿಕ ಆದೇಶದಂತೆ ನಗರದ ನೆಹರು ಮಾರ್ಕೆಟ್‌ನಲ್ಲಿ ವ್ಯಾಪಾರ ವಹಿವಾಟು ಮಾಡಲು ವ್ಯಾಪಾರಸ್ಥರಿಗೆ ಯಾವುದೇ ತರಹದ ಅಡ್ಡಿ-ಆತಂಕ ಮಾಡಬಾರದು ಎಂದು ಆಗ್ರಹಿಸಿ ನೆಹರು ಮಾರ್ಕೆಟ್ ವ್ಯಾಪಾರಸ್ಥರು ಬುಧವಾರ ನಗರದಲ್ಲಿ ಎಪಿಎಂಸಿ ಆಡಳಿತಾಧಿಕಾರಿ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಮಯದಲ್ಲಿ ಮಾತನಾಡಿದ ವರ್ತಕರು, ನೆಹರು ಮಾರುಕಟ್ಟೆಯಲ್ಲಿ ವಹಿವಾಟು ಮಾಡುವುದರಿಂದ ರೈತರಿಗೆ ಸಾಕಷ್ಟು ಪ್ರಯೋಜನವಾಗಿದೆ. ಇದರಿಂದ ಇತರೆ ವ್ಯಾಪಾರಸ್ಥರ ವಹಿವಾಟಿಗೆ ಅನುಕೂಲವಾಗಿದೆ. ಗ್ರಾಮೀಣ ಭಾಗದಿಂದ ಕೃಷಿ ಉತ್ಪನ್ನಗಳನ್ನು ಪೇಟೆಗೆ ತರುವ ರೈತರು ನೆಹರು ಮಾರ್ಕೆಟ್‌ನಲ್ಲಿ ಅವುಗಳನ್ನು ಮಾರಾಟ ಮಾಡಿ ಬಂದ ಹಣದಲ್ಲಿ ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಲು ಸಹಕಾರಿಯಾಗಿದೆ. ಇಲ್ಲಿನ ಮಾರ್ಕೆಟ್‌ನಲ್ಲಿ (ನೆಹರು) ಮಾರಾಟ ಮಾಡುವ ವಸ್ತುಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಸೆಸ್ ಪಾವತಿಸುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಕಂದಾಯ ಭರಿಸಲಾಗಿದೆ. ಭಾನುವಾರ ದಿನ ಇಲ್ಲಿ ವಹಿವಾಟು ಮಾಡುವುದರಿಂದ ಸಂಚಾರಕ್ಕೆ ತೊಂದರೆಯಾಗುವುದನ್ನು ತಪ್ಪಿಸಲು ಪ್ರತಿ ಭಾನುವಾರ ಇಲ್ಲಿನ ಮಾರ್ಕೆಟ್ ರಜೆ ಮಾಡಿ ಪ್ರತಿ ಮಂಗಳವಾರ ವಹಿವಾಟು ನಡೆಸಲಾಗುವುದು. ಎಪಿಎಂಸಿ ಮುಖ್ಯ ಪ್ರಾಂಗಣದಲ್ಲಿ ಎಲ್ಲ 113 ಜನರಿಗೂ ಸ್ಥಳಾವಕಾಶ ನೀಡಿದರೆ ನಾವೆಲ್ಲರೂ ಅಲ್ಲಿಗೆ ಹೋಗಲು ಸಿದ್ಧರಿದ್ದೇವೆ ಎಂದರು.ಗದಿಗೆಪ್ಪ ಹೊಟ್ಟಿಗೌಡ್ರ, ಅಶೋಕ ಗಂಗನಗೌಡ್ರ, ಜಟ್ಟೆಪ್ಪ ಕರೇಗೌಡ್ರ, ಶಿವಯೋಗಿ ಅಸುಂಡಿ, ಬಸವರಾಜ ಕಂಬಳಿ, ಗಣೇಶ ಕಂಬಳಿ, ಹಾಲಪ್ಪ ಮುದ್ದಿಯವರ, ಗೋಪಾಲರೆಡ್ಡಿ, ನಾಗರಾಜ ಬಣಕಾರ, ರಾಜು ನರಸಗೊಂಡರ, ನವೀನ ದೊಡ್ಡಗೌಡ್ರ, ಪುಟ್ಟನಗೌಡ್ರ ತೆಂಬದ, ಮಂಜು ಗೌಡಶಿವಣ್ಣನವರ, ಸತೀಶ ಅಜರೆಡ್ಡಿ, ಬಸವರಾಜ ಚೌಡಪ್ಪಳವರ ಮತ್ತಿತರರಿದ್ದರು.